ಭೌತಿಕ ತರಗತಿಗಳ ಆರಂಭಕ್ಕೂ ಮುನ್ನ ಎಲ್ಲಾ ವಿದ್ಯಾರ್ಥಿಗಳು ಲಸಿಕೆ ಪಡೆದಿರಲಿ: ಎಲ್ಲಾ ವಿವಿಗಳಿಗೆ ಸಚಿವ ಅಶ್ವತ್ಥ್ ನಾರಾಯಣ್ ಸೂಚನೆ
ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಾಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಜುಲೈ 7ರೊಳಗೆ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರು, ರಾಜ್ಯ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಾಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಜುಲೈ 7ರೊಳಗೆ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರು, ರಾಜ್ಯ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಲಸಿಕಾಕರಣ ಕುರಿತು ಶುಕ್ರವಾರ ವಿಧಾನಸೌಧದಿಂದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು. ಎಲ್ಲಾ ಕುಲಪತಿಗಳು ಲಸಿಕಾಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಲಸಿಕಾಕರಣ ಮುಗಿದ ಬಳಿಕ ಭೌತಿಕ ತರಗತಿ ಆರಂಭಿಸುವ ಕುರಿತು ನಿರ್ಧರಿಸಲಾಗುವುದು. ಅಲ್ಲಿಯವರೆಗೆ ಆನ್'ಲೈನ್ ತರಗತಿಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್ ವೇದಿಕೆಗಳ ಮೂಲಕ ಎಲ್ಲಾ ಮಾಹಿತಿ ಒದಗಿಸಲಾಗುತ್ತಿದ್ದರೂ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್ ಲೈನ್ ವ್ಯವಸ್ಥೆ ರೂಪಿಸಲಾಗುವುದು. ಹೆಲ್ಪ್ ಲೈನ್'ನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದಿದ್ದಾರೆ.
ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ವರೆಗೂ (ಜೂನ್27-30) 2,58,069 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 2,26,467 ಮಂದಿ ವಿದ್ಯಾರ್ಥಿಗಳು, 18,956 ಶಿಕ್ಷಕರು ಹಾಗೂ ಇನ್ನಿತರೆ ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
22,678 ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 25,992 ಮಂದಿಗೆ ಲಸಿಕೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಲಸಿಕೆ ನೀಡುವಿಕೆಯಲ್ಲಿ ಇತರೆ ಜಿಲ್ಲೆಗಳ ಪೈಕಿ ಅಗ್ರಸ್ಥಾನ ಪಡೆದುಕೊಂಡಿದೆ. ಏತನ್ಮಧ್ಯೆ, ಬೆಂಗಳೂರು ನಗರದಲ್ಲಿ ಕೇವಲ 7,956 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, ಉಪಕುಲಪತಿಗಳಿಗೆ ಅಗತ್ಯವಿದ್ದರೆ ಗಡುವನ್ನು ಎರಡು ಮೂರು ದಿನಗಳವರೆಗೆ ವಿಸ್ತರಿಸುವ ಆಯ್ಕೆಯನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


