ಕೋವಿಡ್ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಯ ಈ ಮೂರು ಸೇವೆಗಳು ಆನ್ಲೈನ್ ನಲ್ಲಿ ಲಭ್ಯ
ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ರಾಜ್ಯ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳ ರಕ್ಷಣಾರ್ತವಾಗಿ ತನ್ನ ಸೇವೆಗಳಲ್ಲಿ ಕೆಲ ಮಹತ್ತರ ಬದಲಾವಣೆಗೆ ಮುಂದಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ರಾಜ್ಯ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳ ರಕ್ಷಣಾರ್ತವಾಗಿ ತನ್ನ ಸೇವೆಗಳಲ್ಲಿ ಕೆಲ ಮಹತ್ತರ ಬದಲಾವಣೆಗೆ ಮುಂದಾಗಿದೆ.
ಅದರಂತೆ ಸಾರಿಗೆ ಇಲಾಖೆ ತನ್ನ ಸೇವೆಗಳ ಕಾರ್ಯ ಪ್ರಕ್ರಿಯೆಗಳನ್ನು ಬದಲಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಸಾರಿಗೆ ಇಲಾಖೆಯ ಸೇವೆಗಳ ಪೈಕಿ ವಾಹನದ ಮಾಲೀಕತ್ವದ ವರ್ಗಾವಣೆ, ಸರಕು ಸಾಗಣೆ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ನೀಡುವಿಕೆ ಸಂಪೂರ್ಣ ಆನ್ಲೈನ್ ಆಗಲಿದೆ. ಆ ಮೂಲಕ ಈ ಮೂರು ಸೇವೆಗಳಿಗಾಗಿ ಬರುವ ಮಂದಿ ಸಂಪರ್ಕವಿಲ್ಲದೆ ತಮ್ಮ ಕೆಲಸವನ್ನು ಆನ್ ಲೈನ್ ಮೂಲಕವಾಗಿಯೇ ಪಡೆಯಬಹುದು. ಇದಕ್ಕಾಗಿ ಇಲಾಖೆ ವಾಹನ್ 4.0 ಮತ್ತು ಸಾರತಿ ಪೋರ್ಟಲ್ ಆರಂಭಿಸಿದ್ದು, ಈ ಪೋರ್ಟಲ್ ಮೂಲಕ ಪರವಾನಗಿಗಳನ್ನು ಪಡೆಯಬಹುದು. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಇದೇ ವಾರ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಇದೆ.
ಇದಕ್ಕೂ ಮೊದಲು, ಮೇಲೆ ತಿಳಿಸಿದ ಸೇವೆಗಳನ್ನು ಪಡೆಯಲು ನಾಗರಿಕರು ಆರ್‌ಟಿಒಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈಗ ನಾಗರಿಕರು ಅಗತ್ಯ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಪರವಾನಗಿ ಪಡೆಯಬಹುದು. ಆರ್‌ಟಿಒ ದಾಖಲೆಗಳನ್ನು ಪರಿಶೀಲಿಸಿದ ನಂತರ, ನಾಗರಿಕರು ಪರವಾನಗಿಯ ಮುದ್ರಣ ಪ್ರತಿಯನ್ನು ಪಡೆದುಕೊಳ್ಳಬಹುದು, ಅದನ್ನು ಮೂಲ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಸಾರಿಗೆ ಇಲಾಖೆಯ ಈ ಕ್ರಮದಿಂದಾಗಿ ಮಧ್ಯವರ್ತಿಗಳ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಮತ್ತು ಈ ಪ್ರಕ್ರಿಯೆಯನ್ನು ಯಾವುದೇ ರೀತಿಯ ದೈಹಿಕ ಹಾಜರಾತಿ ಇಲ್ಲದೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಆ ಮೂಲಕ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಅಪಾಯವಿಲ್ಲದೇ ಸೇವೆ ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್.ಶಿವಕುಮಾರ್ ಹೇಳಿದರು.
ಆದಾಗ್ಯೂ, ಫಿಟ್‌ನೆಸ್ ಪ್ರಮಾಣಪತ್ರಕ್ಕಾಗಿ, ವಾಹನವನ್ನು ಆರ್‌ಟಿಒಗೆ ತಪಾಸಣೆಗಾಗಿ ತರಬೇಕಾಗುತ್ತದೆ. ಪರಿಶೀಲನೆಯ ಸಮಯದಲ್ಲಿ, ಡಾಕ್ಯುಮೆಂಟ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಆರ್‌ಟಿಒ ಅಧಿಕಾರಿ ಅರ್ಜಿದಾರರೊಂದಿಗೆ ಪರಿಶೀಲಿಸಬಹುದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಶಿವರಾಜ್ ಪಾಟೀಲ್ (ಇ-ಆಡಳಿತ ಮತ್ತು ಪರಿಸರ) ಹೇಳಿದರು. ಅಂತೆಯೇ ಯಾವುದೇ ವಾಹನ ಮಾಲೀಕ ವಾಹನವನ್ನು ಮಾರಾಟ ಮಾಡಲು ಬಯಸಿದರೆ, ಅಗತ್ಯವಿರುವ ದಾಖಲೆ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಿ-ಎಕ್ಸ್‌ಟ್ರಾಕ್ಟ್ ಫಾರ್ಮ್ ನಲ್ಲಿ ಲಭ್ಯವಿರುತ್ತದೆ. ಯಾವುದೇ ನಾಗರಿಕ ಸೇವಾ ಕೇಂದ್ರಗಳಿಂದ ನೋಂದಾಯಿತ ಸಾರಿಗೆ ವಾಹನಗಳ ಬಗ್ಗೆ ವಾಹನ ಮಾಲೀಕರ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


