ಹೈಕೋರ್ಟ್ ಛಾಟಿ ಬೆನ್ನಲ್ಲೇ ವಿವಾದಿತ ಸುತ್ತೋಲೆ ವಾಪಸ್ ಪಡೆದ ಬಿಡಿಎ
ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗಳ ಎದುರು ಹಾಜರಾಗಬಾರದು, ಮಾಹಿತಿ ನೀಡಬಾರದು ಹಾಗೂ ದಾಖಲೆಗಳನ್ನು ಒದಗಿಸಬಾರದು ಎಂಬ ವಿವಾದಾತ್ಮಕ ಸುತ್ತೋಲೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆದಿದೆ.

ಬೆಂಗಳೂರು: ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗಳ ಎದುರು ಹಾಜರಾಗಬಾರದು, ಮಾಹಿತಿ ನೀಡಬಾರದು ಹಾಗೂ ದಾಖಲೆಗಳನ್ನು ಒದಗಿಸಬಾರದು ಎಂಬ ವಿವಾದಾತ್ಮಕ ಸುತ್ತೋಲೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆದಿದೆ.
ಹೌದು.. ಈ ಕುರಿತು ಹೈಕೋರ್ಟ್‌ಗೆ ಸ್ವತಃ ಬಿಡಿಎ ಆಯುಕ್ತ ಎಚ್.ಆರ್.ಮಹದೇವ ಅವರೇ ಪ್ರಮಾಣಪತ್ರ ಸಲ್ಲಿಸಿದ್ದು, ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ಆದೇಶವನ್ನು ಆಯುಕ್ತರು ಹಿಂಪಡೆಯದಿದ್ದರೆ ನ್ಯಾಯಾಲಯವೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಹಾಗಾಗಿ, ಬಿಡಿಎ ಆಯುಕ್ತರು ತಾವು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದಿರುವುದಾಗಿ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಿವಾಸಿ ಎಸ್. ಅರುಣಾಚಲಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಬಿಡಿಎ ಪರ ವಕೀಲರು ಪೀಠಕ್ಕೆ ಮೆಮೋ ಸಲ್ಲಿಸಿ, ಆಯುಕ್ತರು ಈ ಹಿಂದೆ ಹೊರಡಿಸಿದ್ದ ಆದೇಶ ಹಿಂಪಡೆದಿದ್ದಾರೆ ಎಂದು ವಿವರಿಸಿದರು. ಆಯುಕ್ತರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು.
ಬಿಡಿಎ ಆಯುಕ್ತರು ಜು.8ರಂದು ಆದೇಶ ಹೊರಡಿಸಿ, ತಮ್ಮ ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಹಾಗೂ ದಾಖಲೆ ನೀಡಬಾರದು. ವಿಚಾರಣೆಗೆ ಹಾಜರಾಗಬಾರದು ಎಂದು ಸಿಬ್ಬಂದಿಗೆ ತಾಕೀತು ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಬಿಡಿಎ ಆಯುಕ್ತರು ತಮ್ಮ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು. ಪಿಐಎಲ್ ವಿಚಾರಣೆ ನಡೆಸಿದ್ದ ಸಿಜೆ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಗೆ ಆಯುಕ್ತರು ಹಾಜರಾಗಿ ವಿವರಣೆ ನೀಡುವಂತೆ ಛೀಮಾರಿ ಹಾಕಿತ್ತು. ನಂತರ ಹಾಜರಾಗದೆ ಇದ್ದುದಕ್ಕೆ ವಿವರಣೆ ನೀಡಿ ವೈಯಕ್ತಿಕವಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ತಾಕೀತು ಮಾಡಿತ್ತು. ಆ ಬಳಿಕ ಬಿಡಿಎ ಪರ ವಕೀಲರು ಹಾಜರಾಗಿ ಆಯುಕ್ತರ ಕ್ರಮ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರೂ ಅದನ್ನು ನ್ಯಾಯಾಲಯ ಒಪ್ಪಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


