ರಾಜ್ಯ

ಅಗ್ರಿ ಅಥವಾ ಕೃಷಿ ಪ್ರಧಾನ ಟೂರಿಸಂ ಪ್ರಾರಂಭಿಸಲು ಕ್ರಮ: ಸಿ.ಟಿ. ರವಿ

ಕೋವಿಡ್-19 ಸಂಕಷ್ಟದಿಂದ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಗ್ರಾಮೀಣ ಸಂಸ್ಕಂತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅಗ್ರಿ ಅಥವಾ ಕೃಷಿ ಪ್ರಧಾನ ಟೂರಿಸಂ ಪ್ರಾರಂಭಿಸಲು ಕ್ರಮ: ಸಿ.ಟಿ. ರವಿ
ಸಚಿವ ಸಿಟಿ ರವಿ
Published On :

ಬೆಂಗಳೂರು: ಕೋವಿಡ್-19 ಸಂಕಷ್ಟದಿಂದ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಗ್ರಾಮೀಣ ಸಂಸ್ಕಂತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು  ಸಂಸ್ಕೃತಿ, ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ಕೃಷಿ, ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆಯ ಸಚಿವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ “ಅಗ್ರಿ ಟೂರಿಸಂ” ಅಥವಾ “ಕೃಷಿ ಪ್ರಧಾನ” ಒಂದು ಹೊಸ ಪರಿಕಲ್ಪನೆಯಾಗಿದ್ದು, ಈ  ಯೋಜನೆ ಕೃಷಿ, ತೋಟಗಾರಿಕೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಮ್ಮಿಲನವಾಗಿದೆ. ಈ ಮೂರು ಇಲಾಖೆಗಳ ಸಮನ್ವಯದಲ್ಲಿ ಕರ್ನಾಟಕ ಟೂರಿಸಂ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕೃಷಿಯ ಕಡೆಗೆ ಜನರಲ್ಲಿ ಅರಿವು ಮತ್ತು ಹೆಮ್ಮೆ ಮೂಡಿಸುವುದು ಮತ್ತು ಕೃಷಿ  ಪ್ರವಾಸಗಳ ಮೂಲಕ ರೈತರು ಮತ್ತು ಗ್ರಾಮೀಣ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವನ ಜತೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ನಗರವಾಸಿಗಳಿಗೆ ಕೃಷಿಯ ಬಗ್ಗೆ ತಿಳಿಯಲು ಮತ್ತು ರೈತರಿಗೆ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯಕಾರಿಯಾಗಲಿದೆ. ಈ ಯೋಜನೆಯಿಂದ ಉದ್ಯೋಗ ಸೃಷ್ಠಿಯಾಗುವ, ಜತೆಗೆ ಗ್ರಾಮೀಣ ಅಭಿವೃದ್ಧಿಗೂ ಆದ್ಯತೆ ದೊರೆಯಲಿದೆ. ಈ ನೂತನ ಪ್ರಯೋಗದಿಂದ  ಪಟ್ಟಣವಾಸಿಗರು ತಮ್ಮ ದೈನಂದಿನ ಒತ್ತಡದ ಜೀವನಶೈಲಿಯಿಂದ ಹೊರಬಂದು ನೈಜ ಗ್ರಾಮೀಣ ಬದುಕು, ಆಹಾರ ಸವಿಯಲು, ಸ್ವತ: ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಅವುಗಳನ್ನು ಪರಿಚಯಿಸಿಕೊಳ್ಳಲು ಅನುಕೂಲವಾಗಲಿದೆ. ನಗರ ಮತ್ತು ಗ್ರಾಮೀಣ ಸಂಸ್ಕಂತಿಗಳ ನಡುವಿನ  ಸಂಪರ್ಕ, ಸಾಮಾನ್ಯ ಪ್ರವಾಸದ ಅನುಭವಕ್ಕಿಂತ ಕೃಷಿ ಪ್ರವಾಸಗಳು ನೈಜ ಜೀವನದ ಉತ್ಸಾಹಭರಿತ ಅನುಭವಗಳನ್ನು ನೀಡುತ್ತದೆ. ಕೃಷಿ ಪ್ರವಾಸದಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ, ಪ್ರವಾಸಿಗರಿಗೆ ಪರಿಣಾಮಕಾರಿಯಾದ ಅನುಭವಗಳನ್ನು  ನೀಡಿದಂತಾಗುತ್ತದೆ. ಪ್ರವಾಸಿಗರು ಸ್ವತ: ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅಂದರೆ ನಾಟಿ ಮಾಡುವುದು, ಬೀಜಗಳ ಬಿತ್ತನೆ, ಕಟಾವು ಮಾಡುವುದು ಸಂಸ್ಕರಣೆಯಂತಹ ಅನುಭವ ಪಡೆಯಬಹುದಾಗಿದೆ ಎಂದರು. 

ಗ್ರಾಮೀಣ ಕರಕುಶಲ ವಸ್ತುಗಳು, ಉಡುಗೆಗಳು, ತಾಜಾ ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ರೈತರ ತೋಟದಲ್ಲಿಯೇ ಪ್ರವಾಸಿಗರು ಖರೀದಿಸುವಂತಹ ವಿನೂತನ ಕ್ರಮಗಳಿಂದ ಕೃಷಿಕರ ಆದಾಯ ಹೆಚ್ಚಲಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಲೇಗಾಂ  ಹಾಗೂ ಪುಣೆ ಜಿಲ್ಲೆಯ ಬಾರಮತಿ ಗ್ರಾಮಗಳಲ್ಲಿ ಕೃಷಿ ಪ್ರವಾಸವನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ಯಶಸ್ವಿಯಾಗಿವೆ. ಕರ್ನಾಟಕದ ಬಹು ಸಂಸ್ಕಂತಿಯನ್ನು ಪ್ರವಾಸಿಗರಿಗೆ ಕಟ್ಟಿಕೊಡಲು ಇದೊಂದು ಮಹತ್ವದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ವೈನ್  ಟೂರಿಸಂ, ಮ್ಯಾಂಗೋ ಟೂರಿಸಂ, ಆರ್ಗಾನಿಕ್ ಟೂರಿಸಂ ಅಲ್ಲಲ್ಲಿ ಚಾಲ್ತಿಯಲ್ಲಿದ್ದು, ಇದಕ್ಕೆ ಪ್ರವಾಸೋದ್ಯಮದ ಪರಿಕಲ್ಪನೆಯ ಆಯಾಮ ನೀಡಲಾಗುವುದು. ಆರಂಭಿಕವಾಗಿ ರಾಜ್ಯದ ನಾಲ್ಕು ಸ್ಥಳಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರವಾಸೋದ್ಯಮ ಪ್ರಾರಂಭಿಸಿ ಇವುಗಳ ಯಶಸ್ಸಿನ ಆಧಾರದ  ಮೇಲೆ ಕನಿಷ್ಠ 200 ಸ್ಥಳಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದೇವೆ. ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು  ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಇದೊಂದು ಮಹತ್ವಂಕಾಕ್ಷಿ ಯೋಜನೆಯಾಗಿದ್ದು, ಇಲ್ಲಿಯವರೆಗೆ ಎರಡು ಹಂತದ ಚರ್ಚೆಗಳು ನಡೆದಿದೆ. ವಿದೇಶಗಳಲ್ಲಿ ಬಹುತೇಕ ಮಾನವ ನಿರ್ಮಿತ ಸೌಂದರ್ಯ ಆಕರ್ಷಿಣೀಯ ಪ್ರವಾಸಿತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ,  ರಾಜ್ಯದಲ್ಲಿ ನೈಸರ್ಗಿಕವಾಗಿ ಅತ್ಯಂತ ಹೆಚ್ಚಿನ ಆಕರ್ಷಣೀಯ ಸ್ಥಳಗಳಿದ್ದು, ಅಗ್ರಿ ಟೂರಿಸಂ ನಮ್ಮ ಶಕ್ತಿಯಾಗಿದೆ ಎಂದು ಹೇಳಿದರು. ಕರ್ನಾಟಕ ಸಾಂಸ್ಕಂತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದ್ದು, ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಕೃಷಿ ಪ್ರವಾಸೋದ್ಯಮವನ್ನು  ಅಭಿವೃದ್ಧಿಪಡಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು. 

ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆ ಸಚಿವ ನಾರಾಯಣ ಗೌಡ ಮಾತನಾಡಿ, ತೋಟಗಾರಿಕೆ ಮತ್ತು ರೇಷ್ಮೆಯನ್ನು ಕೇಂದ್ರಿಕರಿಸಿ ರೈತರಿಗೆ ಶಕ್ತಿ ತುಂಬುವ ಉದ್ದೇಶ ಹೊಂದಲಾಗಿದೆ. ಕೃಷಿಗೆ ಮುಖ್ಯವಾಗಿ ಮಾರ್ಕೆಟಿಂಗ್ ಮತ್ತು ಪಬ್ಲಿಸಿಟಿ ಅವಶ್ಯಕತೆ ಇದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.