ಕೊರೋನಾ ವೈರಸ್: ಆತಂಕ ಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ಕಡ್ಡಾಯ: ಸಚಿವ ಸುಧಾಕರ್
ಕೋವಿಡ್ 19 ಸೋಂಕು ಕಾಣಿಸಿಕೊಂಡ ಕೂಡಲೇ ರೋಗಿ ಸಾಯುವುದಿಲ್ಲ, ಹಾಗಾಗಿ ಯಾರಿಗೂ ಆತಂಕ ಬೇಡ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಕೋವಿಡ್ 19 ಸೋಂಕು ಕಾಣಿಸಿಕೊಂಡ ಕೂಡಲೇ ರೋಗಿ ಸಾಯುವುದಿಲ್ಲ, ಹಾಗಾಗಿ ಯಾರಿಗೂ ಆತಂಕ ಬೇಡ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತಾಡಿದ ಸಚಿವ ಡಾ. ಸುಧಾಕರ್, 'ಕೊರೋನಾಗೆ ಯಾರು ಹೆದರಬೇಕಿಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ ಇದೆ. ಇಲ್ಲಿಯವರೆಗೂ ಒಟ್ಟು 1,17,306 ಪ್ರಯಾಣಿಕರ ತಪಾಸಣೆಯಾಗಿದ್ದು, ವಿಶ್ವದಲ್ಲಿ 80,881 ಕೋವಿಡ್ ಪ್ರಕರಣ ದಾಖಲಾಗಿವೆ. ಇದರಲ್ಲಿ 68 ಸಾವಿರ ಜನರು ಗುಣಮುಖರಾಗಿದ್ದು, ಕೇವಲ 3 ಸಾವಿರ ಜನ ಮಾತ್ರ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಶೇ.0.5 - 3.4 ಮಾತ್ರ ಇದೆ. ಹೀಗಾಗಿ ಜನ ಆತಂಕಪಡಬೇಕಿಲ್ಲ. ಸೋಂಕು ಕಾಣಿಸಿಕೊಂಡ ತಕ್ಷಣ ಯಾರು ಸಾಯುವುದಿಲ್ಲ. ಆದರೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
'ರಾಜ್ಯದ 14 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 11 ಜನ ವಿದೇಶದಿಂದ ಬಂದವರು. ಇನ್ನು ಮೂವರು ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮಾದರಿಯಾಗುತ್ತಿದ್ದೇವೆ. ಬೇರೆ ರಾಜ್ಯಗಳು ನಾವು ಕೈಗೊಂಡ ಕ್ರಮಗಳನ್ನು ಅನುಸರಿಸುತ್ತಿವೆ. ನಮ್ಮ ಜನತೆಗೆ ನಾವು ಧೈರ್ಯ ತುಂಬಬೇಕಿದೆ. ಕೊರೊನಾ ಸಾವಿನ ಪ್ರಮಾಣ ಕಡಿಮೆ ಇದೆ. ಯಾರು ಕೂಡ ಆತಂಕಕ್ಕೆ ಒಳಗಾಗಬಾರದು. 42, 500 ಮಂದಿ ವಿದೇಶಗಳಿಂದ ಬೆಂಗಳೂರಿಗೆ ಬಂದಿದ್ದಾರೆ. ಸಾಮಾಜಿಕ ಅಂತರವನ್ನ ನಾವು ಕಾಪಾಡಿಕೊಳ್ಳಬೇಕಿದೆ.
ಇಟಲಿಯಲ್ಲಿ 2158 ಮಂದಿ ಸಾವನ್ನಪ್ಪಿದ್ದಾರೆ, ಇರಾನ್ನಲ್ಲಿ ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿ, ಇರಾನ್, ಸ್ಪೇನ್ನಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಿದೆ. ಆದರೆ ಚೀನಾ, ಅಮೆರಿಕದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಒಟ್ಟು 154 ಸೋಂಕು ಜನರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ 33 ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿ ಕೇರಳ, ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಹೇಳಿದರು. ಕೊರೊನಾ ಬಗ್ಗೆ ಮಾಹಿತಿ ನೀಡಲು 104 ಸಂಖ್ಯೆಯ ಸಹಾಯವಾಣಿ ಪ್ರಾರಂಭಿಸಲಾಗಿದೆ. ಹೌಸ್ ಕ್ವಾರಂಟೈನ್ನಲ್ಲಿ ಇರುವವರ ಜತೆಗೂ ನಿರಂತರ ಫೋನ್ ಸಂಪರ್ಕದಲ್ಲಿದ್ದು ಟ್ರಾಕಿಂಗ್ ಮಾಡಲಾಗುತ್ತದೆ. ಮುಂದಿನ ಮೂರು ವಾರಗಳ ಕಾಲ ಕೊರೋನಾ ನಿಯಂತ್ರಣ ಸಾಧ್ಯವಾದರೆ, ನಮ್ಮ ರಾಜ್ಯದ ಜನರನ್ನು ಅತ್ಯಂತ ದೊಡ್ಡ ಆಪತ್ತಿನಿಂದ ಪಾರು ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಪ್ರೊಟೊಕಾಲ್ ಮಾರ್ಗಸೂಚಿ ಅನ್ವಯ ಮಾತ್ರ ನಾವು ತಪಾಸಣೆ ಮಾಡುತ್ತಿದ್ದೇವೆ. ಹೀಗಾಗಿ ನಾವು ಸುಮಾರು ಸಾವಿರ ಮಂದಿಯನ್ನ ಮಾತ್ರ ತಪಾಸಣೆಗೆ ಒಳಪಡಿಸಿದ್ದೇವೆ. ಅವರಲ್ಲಿ 14 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಅವರಲ್ಲಿ 11 ಮಂದಿ ವಿದೇಶಗಳಿಂದ ಬಂದವರಾಗಿದ್ದಾರೆ. ಈ 14 ಮಂದಿ ಸೋಂಕಿತರಿಂದ ಬೇರೆಯವರಿಗೆ ಹರಡಬಾರದು ಅನ್ನೋದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಒಟ್ಟು 5 ಲ್ಯಾಬ್ ಇವೆ. ಇಡೀ ದೇಶದಲ್ಲಿ ಒಟ್ಟು 54 ಲ್ಯಾಬ್ಗಳಿವೆ. ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ತಪಾಸಣೆ ಮಾಡುವ ಲ್ಯಾಬ್ಗಳನ್ನ ತೆರೆಯಲಾಗುತ್ತದೆ. ಇವರೆಲ್ಲರಿಗೂ ನೈತಿಕ ಧೈರ್ಯ ನೀಡುವ ಕೆಲಸವನ್ನ ನಮ್ಮ ಸರ್ಕಾರ ಮಾಡಲಿದೆ. ICMR ಒಂದಿಷ್ಟು ಗೈಡ್ಲೈನ್ ನೀಡಿದೆ, ಜೊತೆಗೆ ನಾಲ್ಕು ಸ್ಟೇಜ್ಗಳನ್ನ ನೀಡಿದೆ. ಮೊದಲ ಸ್ಟೇಜ್ ಪ್ರೈಮರಿ, ಎರಡನೇಯದು ಒಬ್ಬ ಮನುಷ್ಯರಿಂದ ಮತ್ತೊಬ್ಬರಿಗೆ ಹರಡಿದರೆ, ಮೂರನೇಯದು ಕಮ್ಯೂನಿಟಿಯಿಂದ (ಕುಟುಂಬದಿಂದ) ಹರಡಿದಾಗ ಇಡೀ ದೇಶಕ್ಕೆ, ರಾಷ್ಟ್ರಕ್ಕೆ ಹೋದಾಗ ಅದು ನಾಲ್ಕನೇಯ ಸ್ಟೇಜ್ ಆಗಿದೆ. ನಮ್ಮ ರಾಜ್ಯ ಎರಡನೇ ಸ್ಟೇಜ್ನಲ್ಲಿದೆ.
ಕೊರೊನಾ ಸೋಂಕು ಮುಕ್ತಮಾಡಲು ನಾವೆಲ್ಲರೂ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಹೋರಾಟ ಮಾಡೋಣ. ಕೊರೊನಾ ಬಗ್ಗೆ ಜನರು ಕೂಡ ಜಾಗೃತಿ ನೀಡುತ್ತಿದ್ದಾರೆ. ಮಾಧ್ಯಮಗಳೂ ಸಹ ಸಹಕಾರ ನೀಡುತ್ತಿವೆ. ಆರೋಗ್ಯ ಇಲಾಖೆಯ ನೌಕರರು, ಎನ್ಜಿಒಗಳೂ ಕೂಡ ಕೈಜೋಡಿಸಿದ್ದಾರೆ. ಇವರೆಲ್ಲರಿಗೂ ಧನ್ಯವಾದಗಳು.. ಎಂದು ಸುಧಾಕರ್ ಹೇಳಿದರು.
Related Article
ಪ್ರಯಾಣಿಕರ ತಪಾಸಣೆಗೆ ರಾಜ್ಯ ಸರ್ಕಾರದಿಂದ ವಿಮಾನಯಾನ ನಿರ್ದೇಶನಾಲಯಕ್ಕೆ ಅನುಮತಿ ಕೋರಿಕೆ
ಕೊರೋನಾ, ಹಕ್ಕಿಜ್ವರ, ಮಂಗನಕಾಯಿಲೆದಂತಹ ಸಾಂಕ್ರಾಮಿಕ ಕಾಯಿಲೆ ತಡೆಗೆ ಕ್ರಮ; ಸಿಎಂ ಬಿಎಸ್ ವೈ
ಕೊರೋನಾ ವೈರಸ್: ಮಾರ್ಚ್ 31ರವೆರೆಗೂ ತಾತ್ಕಾಲಿಕ ನಿರ್ಬಂಧ ಮುಂದುವರಿಕೆ, ಸೋಂಕು ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆ
ವಿಧಾನಸೌಧದಲ್ಲಿ ಕೊರೋನಾ ಸೋಂಕು ತಡೆಗೆ ವ್ಯಾಪಕ ಮುನ್ನೆಚ್ಚರಿಕೆ: ವೈರಾಣು ನಿರೋಧಕ ಸಿಂಪಡಣೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


