ಸುರೇಶ್ ಪೂಜಾರಿಯೇ ಸೆಲಬ್ರಿಟಿಗಳ ಫೋನ್ ನಂಬರ್ ಕೊಡುತ್ತಿದ್ದ: ರವಿ ಪೂಜಾರಿ
ಸುರೇಶ್ ಪೂಜಾರಿಯೇ ತನಗೆ ಎಲ್ಲಾ ನಟ, ರಾಜಕಾರಣಿ, ಉದ್ಯಮಿಗಳ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಸಿಸಿಬಿ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.

ಬೆಂಗಳೂರು: ಸುರೇಶ್ ಪೂಜಾರಿಯೇ ತನಗೆ ಎಲ್ಲಾ ನಟ, ರಾಜಕಾರಣಿ, ಉದ್ಯಮಿಗಳ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಸಿಸಿಬಿ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.
ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ವೇಳೆ ಸುರೇಶ್ ಪೂಜಾರಿಯ ಹೆಸರು ಕೇಳಿಬಂದಿದೆ. ಅನೇಕ ಪ್ರಕರಣಗಳಲ್ಲಿ ರವಿ ಪೂಜಾರಿ ಜೊತೆ ಸುರೇಶ್ ಪೂಜಾರಿ ಹೆಸರು ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.
ಸುರೇಶ್ ಪೂಜಾರಿ, ಫೋನ್ ನಂಬರ್‌ಗಳನ್ನು ಸಂಗ್ರಹಿಸಿ ತನಗೆ ನೀಡುತ್ತಿದ್ದ. ಈ ಸಂದರ್ಭದಲ್ಲಿ ಸುರೇಶ್ ಪೂಜಾರಿ ಬಳಿ ಅವರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೆ ಎಂದು ರವಿ ಪೂಜಾರಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಉದ್ಯಮಿ, ರಾಜಕಾರಣಿ, ನಟರ ಬಗ್ಗೆ ಸುರೇಶ್ ಪೂಜಾರಿ ಮಾಹಿತಿ ನೀಡಿದ ನಂತರ ತಾನು ಕರೆ ಮಾಡಿ ಅವರನ್ನು ಹೆದರಿಸುತ್ತಿದ್ದೆ ಎಂದು ರವಿ ಪೂಜಾರಿ ಬಾಯ್ಬಿಟ್ಟಿದ್ದಾನೆ.
ಸುರೇಶ್ ಪೂಜಾರಿ ಯಾರು..? ಆತನ ಹಿನ್ನೆಲೆ ಏನು..? ಎಂದು ಸದ್ಯ ಆತನ ಮಾಹಿತಿ ಕಲೆಹಾಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ದೂರದ ದೇಶದಲ್ಲಿ ಕುಳಿತಿದ್ದ ರವಿ ಪೂಜಾರಿಗೆ ಬಲಗೈ ಬಂಟನಾಗಿ ಸುರೇಶ್ ಪೂಜಾರಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ.
ಕೆಲವು ಕೇಸ್ಗಳಲ್ಲಿ ರವಿ ಪೂಜಾರಿಯ ಸಹಚರರು ಬಂಧನವಾದ್ರೂ ಸುರೇಶ್ ಪೂಜಾರಿ ನಾಪತ್ತೆಯಾಗಿದ್ದ. ಖುದ್ದು ರವಿ ಪೂಜಾರಿಯೇ ಪೊಲೀಸರ ಖೆಡ್ಡಕ್ಕೆ ಬಿದ್ದರೂ ಆತನ ಬಲಗೈ ಬಂಟ ಇನ್ನೂ ಪತ್ತೆಯಾಗಿಲ್ಲ.
ರಕ್ತ ಸಂಬಂಧಿಯಲ್ಲದಿದ್ರೂ ಸುರೇಶ್ ಪೂಜಾರಿ ರವಿ ಪೂಜಾರಿಗೆ ರಾಜ್ಯದ ಪ್ರತಿಯೊಂದು ಮಾಹಿತಿಯನ್ನ ಕೊಡುತ್ತಿದ್ದನಾ? ಎಂಬ ಅನುಮಾನ ಪೊಲೀಸರಲ್ಲಿ ಶುರುವಾಗಿದೆ. ಈತ ಉದ್ಯಮಿಗಳು, ಬಿಲ್ಡರ್ಗಳು, ರಾಜಕೀಯ ವ್ಯಕ್ತಿಗಳು, ನಟರ ನಂಬರ್‌ಗಳನ್ನು ಸಂಗ್ರಹಿಸಿ ಬಳಿಕ ರವಿ ಪೂಜಾರಿಗೆ ರವಾನೆ ಮಾಡ್ತಿದ್ದನಂತೆ. ಬಳಿಕ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳಿಗೆ ಕಾಲ್ ಮಾಡಿ ಹಣಕ್ಕೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಹಲವು ಪ್ರಕರಣಗಳಲ್ಲಿ ರವಿ ಪೂಜಾರಿ ಜತೆಗೆ ಸುರೇಶ್ ಪೂಜಾರಿಯ ಹೆಸರು ಸೇರಿಕೊಂಡಿದೆ. ಹೀಗಾಗಿ ವಿಚಾರಣೆ ವೇಳೆ ಸುರೇಶ್ ಪೂಜಾರಿಯ ಕುರಿತು ಸಿಸಿಬಿ ಪೊಲೀಸರು ರವಿ ಪೂಜಾರಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈಗಾಗಲೇ ರವಿ ಪೂಜಾರಿಯ ಸಹಚರರನ್ನು ಬಂಧಿಸಲಾಗಿದೆ. ಆದರೆ, ಇನ್ನು ಕೂಡ ಸುರೇಶ್ ಪೂಜಾರಿ ತಲೆಮರಿಸಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


