ಲಕ್ಷಣರಹಿತ ವ್ಯಕ್ತಿಗಳಿಂದಲೂ ಹರಡಲಿದೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ ಯೂ-ಟರ್ನ್ ಹೊಡೆದರೂ ನಿರ್ಧಾರ ಬದಲಿಸದ ಸರ್ಕಾರ!
ಲಕ್ಷಣರಹಿತ ವ್ಯಕ್ತಿಗಳಿಂದಲೂ ಕೊರೋನಾ ವೈರಸ್ ಹರಡಲಿದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಯೂಟರ್ನ್ ಹೊಡೆದಿದ್ದರೂ, ರಾಜ್ಯ ಸರ್ಕಾರ ಮಾತ್ರ ಈ ಹಿಂದಿನ ಕ್ರಮಗಳನ್ನೇ ಮುಂದುವರೆಸುವುದಾಗಿ ತಿಳಿಸಿದೆ.

ಬೆಂಗಳೂರು: ಲಕ್ಷಣರಹಿತ ವ್ಯಕ್ತಿಗಳಿಂದಲೂ ಕೊರೋನಾ ವೈರಸ್ ಹರಡಲಿದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಯೂಟರ್ನ್ ಹೊಡೆದಿದ್ದರೂ, ರಾಜ್ಯ ಸರ್ಕಾರ ಮಾತ್ರ ಈ ಹಿಂದಿನ ಕ್ರಮಗಳನ್ನೇ ಮುಂದುವರೆಸುವುದಾಗಿ ತಿಳಿಸಿದೆ.
ರಾಜ್ಯದಲ್ಲಿ ಬೆಳಕಿಗೆ ಬಂದಿರುವ 3,108 ಸೋಂಕಿತರ ಪೈಕಿ ಶೇ.97ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ರಾಜ್ಯದಲ್ಲಿ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ವಲಸೆ ಕಾರ್ಮಿಕರು ಹೆಚ್ಚಾಗಿ ಆಗಮಿಸುತ್ತಿದ್ದು, ಇದರ ಪರಿಣಾಮ ಉಡುಪಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.
ಲಕ್ಷಣ ಇರುವ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ಲಕ್ಷಣ ಇಲ್ಲದವರಿಂದ ಅಷ್ಟಾಗಿ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಲಕ್ಷಣ ಇಲ್ಲದ ಜನರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗುತ್ತಿದ್ದು, ಬಳಿಕ ನಂತರ ಕೊರೋನಾ ವೈದ್ಯಕೀಯ ವರದಿ ಬರುವುದಕ್ಕೂ ಮುನ್ನವೇ ಮನೆಗಳಿಗೆ ಕಳುಹಿಸುವ ಕಾರ್ಯಗಳಾಗುತ್ತಿದೆ. ಇದರಿಂದ ವೈರಸ್ ಹರಡುವ ಸಂಭವ ಹೆಚ್ಚಾಗಿರುತ್ತದೆ. ಪ್ರಮುಖವಾಗಿ ಸಮುದಾಯ ಹಾಗೂ ಹಿರಿಯ ನಾಗರೀಕರಿಗೆ ವೈರಸ್ ಹೆಚ್ಚಾಗಿ ಹರಡುತ್ತದೆ ಎಂದು ಹೇಳಲಾಗುತ್ತಿದೆ.
ಈ ಸತ್ಯವನ್ನು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೂ ಕೂಡ ಒಪ್ಪಿಕೊಂಡಿದ್ದಾರೆ. ಕೊರೋನಾ ಪಾಸಿಟಿವ್ ಬಂದ ಬಳಿಕವಷ್ಟೇ ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುದಾಕರ್ ಅವರು, ರಾಜ್ಯದಲ್ಲಿ ಶೇ.97ರಷ್ಟು ಜನರು ಲಕ್ಷಣರಹಿತವಾಗಿರುವುದು ಒಳ್ಳೆಯ ಸುದ್ದಿ. ಆದರೆ, ಲಕ್ಷಣ ರಹಿತ ಜನರಿಂದಲೂ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಏನೇ ಆದರೂ ನಾವು ಅನುಸರಿಸುತ್ತಿರುವ ಕ್ರಮಗಳು ಎಂದಿನಂತೆ ಮುಂದುವರೆಯಲಿವೆ. ಈಗಾಗಲೇ ಪ್ರತೀಯೊಬ್ಬರೂ ಭೀತಿಗೊಳಗಾಗಿದ್ದು, ಹೇಳಿಕೆ ನೀಡುವುದಕ್ಕೂ ಮುನ್ನ ವಿಶ್ವ ಆರೋಗ್ಯ ಸಂಸ್ಥೆ ಸೂಕ್ತ ಅಧ್ಯಯನ ನಡೆಸಬೇಕು. ಅವರು ಉದ್ದೇಶ ಒಳ್ಳೆಯದೇ ಆಗಿರಬಹುದು ಆದರೆ, ವೈರಸ್ ಹರಡುವ ಕುರಿತು ಅವರು ಜಾಗ್ರತೆ ಮೂಡಿಸಲು ಹೇಳಿಕೆ ನೀಡಿರಬಹುದು. ಆದರೆ, ಅಧ್ಯಯನಕ್ಕಾಗಿ ಅವರು ಕಾಯಬೇಕು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಹಾಗೂ ತಜ್ಞರ ಮೇಲೆ ನಾವು ನಂಬಿಕೆ, ಭರವಸೆ ಇಡೋಣ. ಸ್ಥಳೀಯ ವರದಿಗಳನ್ನು ನಾವು ನಂಬೋಣ. ನಮ್ಮ ಅಂತಿಮ ನಿರ್ಧಾರಗಳು ಇದರ ಆಧಾರದ ಮೇಲೆಯೇ ಇರಲಿದೆ. ಇದೀಗ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೋ ಅವುಗಳನ್ನೇ ನಾವು ಮುಂದುವರೆಸುತ್ತೇವೆ. ನಿರ್ವಹಣಾ ತಂತ್ರಗಳು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


