ರಾಜ್ಯ

ನಗರದಲ್ಲಿ ಹೆಚ್ಚಿದ ಮಹಾಮಾರಿ ಆರ್ಭಟ: ಕೊರೋನಾ ನಿರ್ವಹಣೆಯಲ್ಲಿ ಯಡಿಯೂರಪ್ಪ ತಂಡ ಬಿಝಿ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಸೋಂಕು ಮಟ್ಟಹಾಕಲು ನಿಯೋಜನೆಗೊಳಿಸಲಾಗಿರುವ 8 ಮಂದಿ ಅಧಿಕಾರಿಗಳ ತಂಡದ ಕಾರ್ಯವೈಖರಿಯ ಪಟ್ಟಿಯನ್ನು ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಶೀಲನೆ ನಡೆಸಲಿದ್ದಾರೆ.

ನಗರದಲ್ಲಿ ಹೆಚ್ಚಿದ ಮಹಾಮಾರಿ ಆರ್ಭಟ: ಕೊರೋನಾ ನಿರ್ವಹಣೆಯಲ್ಲಿ ಯಡಿಯೂರಪ್ಪ ತಂಡ ಬಿಝಿ!
ಯಡಿಯೂರಪ್ಪ
Published On :

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಸೋಂಕು ಮಟ್ಟಹಾಕಲು ನಿಯೋಜನೆಗೊಳಿಸಲಾಗಿರುವ 8 ಮಂದಿ ಅಧಿಕಾರಿಗಳ ತಂಡದ ಕಾರ್ಯವೈಖರಿಯ ಪಟ್ಟಿಯನ್ನು ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಶೀಲನೆ ನಡೆಸಲಿದ್ದಾರೆ. 

ನಗರದಲ್ಲಿ ಗುರುವಾರ ಒಂದೇ ದಿನ 2,344 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 70 ಮಂದಿ ಮಹಾಮಾರಿಗೆ ಬಲಿಯಾಗಿದ್ದರು. 

ಬೆಂಗಳೂರು ನಗರದಲ್ಲಿ ಕೊರೋನಾ ಮಟ್ಟಹಾಕಲು ದಿಟ್ಟ ಕ್ರಮ ಕೈಗೊಂಡ ಸರ್ಕಾರ 8 ವಲಯಕ್ಕೆ ಒಬ್ಬೊಬ್ಬ ಸಚಿವರು ಹಾಗೂ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಈ 8 ಮಂದಿ ಸಚಿವರ ತಂಡದ ಕಾರ್ಯವೈಖರಿಯನ್ನು ಇಂದು ಯಡಿಯೂರಪ್ಪ ಅವರು ಪರಿಶೀಲನೆ ನಡೆಸಲಿದ್ದಾರೆ. 

ಬೆಂಗಳೂರು ಉತ್ತರ ವಲಯದ ಜವಾಬ್ದಾರಿ ಹೊತ್ತಿರುವ ಎಸ್ಆರ್. ವಿಶ್ವನಾಥ್ ಅವರು ಮಾತನಾಡಿ, ನಮ್ಮ ತಂಡ 38 ಕಂಟೈನ್ಮೆಂಟ್ ಜೋನ್ ಗಳನ್ನು ನಿಭಾಯಿಸುತ್ತಿದ್ದು, ಈ ವರೆಗೂ 190 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗಾಗಲೇ ಈ ಪ್ರದೇಶದಲ್ಲಿ 18 ಆ್ಯಂಬುಲೆನ್ಸ್ ಗಳಿದ್ದು, ಮತ್ತಷ್ಟು ಆ್ಯಂಬುಲೆನ್ಸ್ ಗಳನ್ನು ನಿಯೋಜನೆಗೊಳಿಸಲಾಗುತ್ತದೆ. ಆ್ಯಂಬುಲೆನ್ಸ್ ಗಳ ಚಾಲಕರನ್ನೂ ಹೋಟೆಲ್ ಗಳಲ್ಲಿ ಇರಿಸಲಾಗಿದ್ದು, ಚಾಲಕರು 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರುತ್ತಾರೆ. 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 1 ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಾಸಿಗೆ ಹಾಗೂ ವ್ಯವಸ್ಥೆಗಳನ್ನು ಹೆಚ್ಚಿಸುವ ಕಾರ್ಯಗಳನ್ನು ಮಾಡಲಾಗುತ್ತದೆ. ಪ್ರತೀ ಮನೆ ಮನೆಗೂ ತೆರಳಿ ಸೋಂಕಿತರ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. 

ದಾಸರಹಳ್ಳಿಯ ಜವಬ್ದಾರಿ ಹೊತ್ತಿರುವ ಆಹಾರ ಸಚಿವ.ಕೆ.ಗೋಪಾಲಯ್ಯ ಮಾತನಾಡಿ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆ ಗಳಿಗಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಕೆಲ ಆಸ್ಪತ್ರೆಗಳು ಇದಕ್ಕೆ ಒಪ್ಪಿಗೆ ನೀಡಿವೆ. ನಮ್ಮ ಪ್ರದೇಶದಲ್ಲಿ 17 ಆ್ಯಂಬುಲೆನ್ಸ್ ಗಳಿದ್ದು, ಮೃತದೇಹಗಳನ್ನು ಸಾಗಿಸಲು 2 ವಾಹನಗಳಿವೆ. ಮತ್ತಷ್ಟು ವಾಹನಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ವೈದ್ಯರ ಮೇಲೆ ಹೊರೆ ಹೆಚ್ಚಾಗಿದೆ. ಕೆಲವರು ಕಳೆದ 4 ತಿಂಗಳುಗಳಿಂದಲೂ ರಜೆ ಇಲ್ಲದೆ ದುಡಿಯುತ್ತಿದ್ದಾರೆಂದು ಹೇಳಿದ್ದಾರೆ. 

ಮಹದೇವಪುರದ ಜವಾಬ್ದಾರಿ ಹೊತ್ತುಕೊಂಡಿರುವ ಸಚಿವ ಬಿ.ಎ.ಬಸವರಾಜು ಮಾತನಾಡಿ, ಪರಿಸ್ಥಿತಿ ಪರಿಶೀಲಿಸಲು ಸ್ಥಳೀಯ ಶಾಲೆಗಲಲ್ಲಿ ಕಮಾಂಡ್ ಕೇಂದ್ರಗಳನ್ನು ರಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಶೇ.50ರಷ್ಟು ಹಾಸಿಗೆಗಳನ್ನು ಕೇಳಲಾಗಿದೆ. ಇದಲ್ಲದೆ, ಮೂರು ಸಂಸ್ಥೆಗಳಲ್ಲಿ 450 ಹಾಸಿಗೆಗಳ ಸೌಲಭ್ಯವಿದೆ. ಪೊಲೀಸ್ ಕ್ವಾಟ್ರಸ್ ನಲ್ಲಿ 500 ಹಾಸಿಗೆಗಳ ಸೌಲಭ್ಯವಿದೆ ಎಂದಿದ್ದಾರೆ. 

ಇನ್ನುಳಿದಂತೆ ದಕ್ಷಿಣ ವಲಯದಲ್ಲಿರುವ ಬೊಮ್ಮನಹಳ್ಳಿ ಜವಾಬ್ದಾರಿಯನ್ನು ಸುರೇಶ್ ಕುಮಾರ್ ವಹಿಸಿಕೊಂಡಿದ್ದು, ಬೆಂಗಳೂರು ಪಶ್ಚಿಮ ವಲಯದಲ್ಲಿ ಡಿಸಿಎಂ ಸಿಎನ್ ಅಶ್ವತ್ಥ್ ನಾರಾಯಣ್, ಕಂದಾ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಣ್ಣ ಅವರೂ ಕೂಡ ತಮ್ಮ ಕ್ಷೇತ್ರಗಳಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. 

ಎಲ್ಲಾ ಎಂಟು ಕ್ಷೇತ್ರದಲ್ಲಿಯೂ ಸಚಿವರು ವೈರಸ್ ಹರಡುವುದನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸೋಂಕಿತರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಹಾಗೂ ಹಾಸಿಗೆಗಳನ್ನು ಒದಗಿಸುವ ಒತ್ತಡದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.