2ನೇ ದಿನವೂ ಮುಂದುವರೆದ ಡಿಕೆಶಿ ವಿಚಾರಣೆ
2 ವರ್ಷಗಳ ಹಿಂದೆ ದೆಹಲಿಯ ಫ್ಲ್ಯಾಟ್ ವೊಂದರಲ್ಲಿ ಸಿಕ್ಕ ರೂ.8.5 ಕೋಟಿಗೆ ಸಂಬಂಧಿಸಿ ಎರಡನೇ ದಿನವಾದ ಶನಿವಾರವೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು: 2 ವರ್ಷಗಳ ಹಿಂದೆ ದೆಹಲಿಯ ಫ್ಲ್ಯಾಟ್ ವೊಂದರಲ್ಲಿ ಸಿಕ್ಕ ರೂ.8.5 ಕೋಟಿಗೆ ಸಂಬಂಧಿಸಿ ಎರಡನೇ ದಿನವಾದ ಶನಿವಾರವೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅವರು ಮಧ್ಯಾಹ್ನದ ಊಟದ ಸಮಯಕ್ಕೆ ತಮ್ಮ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಹೊರ ಹೋಗಿದ್ದಾರೆ.ಊಟಕ್ಕಾಗಿ 1 ಗಂಟೆ ಬ್ರೇಕ್ ತೆಗೆದುಕೊಂಡ ಬಳಿಕ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ಮಧ್ಯಾಹ್ನ ಊಟಕ್ಕಾಗಿ ನೀಡಿದ 1 ಗಂಟೆಯ ಬ್ರೇಕ್ ಹೊರತಾಗಿ ಬೆಳಿಗ್ಗೆ 11.30ರಿಂದ ರಾತ್ರಿ 8.30ರವರೆಗೂ ನಡೆದ ಸುಮಾರು 8 ಗಂಟೆಗಳ ಮ್ಯಾರಥಾನ್ ವಿಚಾರಣೆಗೆ ಡಿ.ಕೆ.ಶಿವಕುಮಾರ್ ಅವರು ಒಳಗಾಗಿದ್ದರು.
ಬಂಧನ ಭೀತಿಯೊಂದಿಗೆ ದೆಹಲಿಗೆ ತೆರಳಿದ್ದ ಶಿವಕುಮಾರ್ ಅವರು ಶುಕ್ರವಾರವಷ್ಟೇ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎದುರು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೊಳಗಾಗಿದ್ದರು. ಮರುದಿನ ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗಿ ಎಂದು ಹೇಳಿ ವಾಪಸ್ ಕಳುಹಿಸಿಕೊಟ್ಟಿದ್ದರು. ಅದರಂತೆ ಶನಿವಾರ ಬೆಳಿಗ್ಗೆ 11ಕ್ಕೆ ದೆಹಲಿಯ ಖಾನ್ ಮಾರ್ಕೆಟ್ ನಲ್ಲಿರುವ ಇಡಿ ಕಚೇರಿಗೆ ತೆರಳಿದ್ದ ಡಿಕೆ.ಶಿವಕುಮಾರ್ ಅವರನ್ನು 11.30ರಿಂದ ಮಧ್ಯಾಹ್ನ 2.15ರವರೆಗೆ ಅಧಿಕಾರಿಗಳು ಸರದಿಯಲ್ಲಿ ವಿಚಾರಣೆ ನಡೆಸಿದರು.
ಡಿಕೆ.ಶಿವಕುಮಾರ್ ಹಾಗೂ ಅವರ ಆಪ್ತ ಸುನೀರ್ ಕುಮಾರ್ ಶರ್ಮಾ ಅವರಿಗೆ ಸೇರಿದ್ದ ದೆಹಲಿಯ ಎರಡು ನಿವಾಸದಲ್ಲಿ ಸಿಕ್ಕಿದ್ದ ಹಣ ಮತ್ತು ಅದರ ಮೂಲ ಬಗ್ಗೆಯೇ ಅಧಿಕಾರಿಗಳು ವಿವಿಧ ಪ್ರಶ್ನೆಗಳನ್ನು ಕೇಳಿದ್ದಾರೆಂದು ತಿಳಿದುಬಂದಿದೆ.
ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ಮೋನಿಕಾ ಶರ್ಮಾ ಅವರ ನೇತೃತ್ವದಲ್ಲಿ ಇಬ್ಬರು ಅಧಿಕಾರಿಗಳು ಡಿಕೆ.ಶಿವಕುಮಾರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ಯಾವುದೇ ರೀತಿಯ ಬಂಧನಗಳೂ ಆಗಿಲ್ಲ. ಅಗತ್ಯ ಬಿದ್ದರೆ ಮತ್ತೆ ಸಮನ್ಸ್ ಜಾರಿ ಮಾಡಲಾಗುತ್ತದೆ ಅಧಿಕಾರಿಗಳು ಹೇಳಿದ್ದಾರೆ.
ಮೊದಲು ಸೋನಿಯಾ ಗಾಂಧಿ ಕುಟುಂಬ, ನಂತರ ಕೇಂದ್ರ ಮಾಜಿ ಸಚಿವ ಚಿದಂಬರಂ, ಇದೀಗ ಡಿ.ಕೆ.ಶಿವಕುಮಾರ್ ಮೇಲೆ ಬಿಜೆಪಿಯು ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಿಟ್ಟು ಸೇಡು ತೀರಿಸಿಕೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಪಕ್ಷದ ನಿಷ್ಟಾವಂತ ನಾಯಕರಾಗಿದ್ದಾರೆ. ಬಿಜೆಪಿ ನಾಯಕರ ಪರವಾಗಿರುವ ಇಡಿ ಅಧಿಕಾರಿಗಳು ಅವರನ್ನು ಮಾತ್ರ ಅನುಕಂಪದಿಂದ ನೋಡುತ್ತದೆ. ವಿರೋಧ ಪಕ್ಷದಲ್ಲಿರುವವರನ್ನು ಗುರಿ ಮಾಡುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


