ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಮತ್ತೆ 7 ಮಂದಿ ಸೆರೆ; ಬಂಧಿತರ ಸಂಖ್ಯೆ 10ಕ್ಕೇರಿಕೆ
ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು, ಮತ್ತೆ 7 ಮಂದಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.

ಬೆಂಗಳೂರು: ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು, ಮತ್ತೆ 7 ಮಂದಿಯನ್ನು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.
ಕೊಲೆ ಸಂಬಂಧ ನಾಲ್ವರು ಹಾಗೂ ಅದಕ್ಕೆ ಸಹಕರಿಸಿದ ಮೂವರು ಸೇರಿ ಒಟ್ಟು 7 ಮಂದಿಯನ್ನು ಆರ್.ಟಿ. ನಗರದ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಜಯಮಹಲ್‌ನ ಕಾಂತರಾಜು ಅಲಿಯಾಸ್ ಕಾಟಪ್ಪ (28), ಜೆಸಿ ನಗರದ ಸುನಿಲ್ ರಾವ್ ಅಲಿಯಾಸ್ ಅಪ್ಪು (31), ಆರ್.ಟಿ. ನಗರದ ಫಯಾಜ್ (29), ಜೆ.ಸಿ. ನಗರದ ವಿನಯ್ (24), ಆರ್.ಟಿ. ನಗರದ ಅರುಣ್ ಕುಮಾರ್, ಕನಕನಗರದ ರಿಜ್ವಾನ್ (38), ಕೊಡಿಗೆಹಳ್ಳಿಯ ಸಲ್ಮಾ (28) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಲ್ಲಿ ಕಾಂತರಾಜು, ಸುನಿಲ್ ರಾವ್, ಫಯಾಜ್ ಹಾಗೂ ವಿನಯ್ ಅವರು, ಅಯ್ಯಪ್ಪ ದೊರೆ ಕೊಲೆ ಕೃತ್ಯದಲ್ಲಿ ಪ್ರಮುಖ ಆರೋಪಿ ಸೂರಜ್ ಸಿಂಗ್ ಜೊತೆ ಕೈಜೋಡಿಸಿದ್ದರು. ಕೊಲೆ ಕೃತ್ಯಕ್ಕೆ ಅರುಣ್ ಕುಮಾರ್, ರಿಜ್ವಾನ್ ಹಾಗೂ ಸಲ್ಮಾ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿರುವುದು ತನಿಖೆಯಲ್ಲಿ ಕಂಡುಬಂದಿರುವುದರಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ.
ಇಲ್ಲಿಯವರೆಗೆ ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಅಲಯನ್ಸ್ ವಿವಿಯ ಕುಲಪತಿ ಸುಧೀರ್ ಅಂಗೂರ್, ಸೂರಜ್ ಸಿಂಗ್ ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಅಲಯೆನ್ಸ್ ವಿವಿಯ ಮೇಲಿನ ಹಿಡಿತ ಸಾಧಿಸಲು ಅಯ್ಯಪ್ಪ ದೊರೆ ಅವರ ಕೊಲೆ ನಡೆಸಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಕೊಲೆ ಕೃತ್ಯದ ಬೆನ್ನುಹತ್ತಿದ ಆರ್.ಟಿ. ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ, ಓರ್ವ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ್ದಲ್ಲದೆ, ಉಳಿದವರನ್ನು ದಸ್ತಗಿರಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


