ರಾಜ್ಯ

ಇಡೀ ರಾಜ್ಯ ಬಯಲು ಶೌಚಮುಕ್ತ: ರಾಜ್ಯ ಸರ್ಕಾರದಿಂದ ಘೋಷಣೆ

ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಘೋಷಣೆ ಮಾಡಿದ್ದಾರೆ...

ಇಡೀ ರಾಜ್ಯ ಬಯಲು ಶೌಚಮುಕ್ತ: ರಾಜ್ಯ ಸರ್ಕಾರದಿಂದ ಘೋಷಣೆ
ಇಡೀ ರಾಜ್ಯ ಬಯಲು ಶೌಚಮುಕ್ತ: ರಾಜ್ಯ ಸರ್ಕಾರದಿಂದ ಘೋಷಣೆ
Published On :
ಬೆಂಗಳೂರು: ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಘೋಷಣೆ ಮಾಡಿದ್ದಾರೆ. 
ವಿಶ್ವ ಶೌಚಾಲಯದ ದಿನದ ಅಂಗವಾಗಿ ನಿನ್ನೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ ಎಂದು ಹೇಳಿದ್ದಾರೆ. 
2012-13ನೇ ಸಾಲಿನಲ್ಲಿ ಬೇಸ್ ಲೈನ್ ನಡೆಸಿದ್ದ ಸರ್ವೆ ಪ್ರಕಾರ 45 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿರಲಿಲ್ಲ. ಇದೀಗ 45 ಲಕ್ಷ ಸೇರಿದಂತೆ ಈವರೆಗೆ ರಾಜ್ಯದಲ್ಲಿ ಒಟ್ಟಾರೆ 70.2 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಗರ ಪ್ರದೇಶ ಈ ಮೊದಲೇ ಬಯಲು ಬಹಿರ್ದೆಸೆ ಮುಕ್ತವಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಹಲವೆಡೆ ನೀರಿನ ಕೊರತೆಯಿಂದ ಶೌಚಾಲಯಗಳನ್ನು ಬಳಸದಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಜಲಧಾರೆ ಯೋಜನೆ ಮೂಲಕ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲಾಗುತ್ತದೆ. 
ಭೂಮಿಯ ಮೇಲ್ಭಾಗದ ಜಲಮೂಲಗಳಿಂದ ನೀರು ಸರಬರಾಜು ಮಾಡುವುದಕ್ಕಾಗಿ 60 ಸಾವಿರ ಕೋಟಿ ವೆಚ್ಚದಲ್ಲಿ ಜಲಧಾರೆ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಏಪ್ರಿಲ್ 2018ರ ಅಂತ್ಯಕ್ಕೆ ಒಟ್ಟಾರೆ 38 ಲಕ್ಷ ಶೌಚಾಲಯ ನಿರ್ಮಿಸಲಾಗಿತ್ತು. ಮೈತ್ರಿ ಸರ್ಕಾರದ ಐದು ತಿಂಗಳ ಅವಧಿಯಲ್ಲಿ 7 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ನಿಗದಿಗಿಂತ ಒಂದೂವರೆ ತಿಂಗಳು ಮೊದಲೇ ಗುರಿ ಮುಟ್ಟಿದ್ದೇವೆ. ನಿರ್ಮಲ ಭಾರತ ಮತ್ತು ಸ್ವಚ್ಛ ಭಾರತ ಅಭಿಯಾನ ಸೇರಿ ಶೌಚಾಲಯ ನಿರ್ಮಿಸಲಾಗಿದೆ ಎಂದರು. 
ಬೇಸ್ ಲೈನ್ ಸರ್ವೆಯಲ್ಲಿ ನೋಂದಣಿಯಾಗದ ಮತ್ತು ಅವಿಭಕ್ತ ಕುಟುಂಬಬಗಳು ವಿಭಜಿತರಾಗಿರುವುದು ಸೇರಿದಂತೆ ರಾಜ್ಯದ ಪ್ರತಿಯೊಂದು ಕುಟುಂಬಗಳಿಗೂ ಶೌಚಾಲಯ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಮತ್ತೆ 5 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹೊಂದಿದೆ. ಸ್ವಚ್ಛಾಲಯ-ಸ್ವಚ್ಛಮೇವ ಜಯತೇ ಅಭಿಯಾನದ ಮೂಲಕ ಸ್ವಚ್ಛತೆ ಅರಿವು, ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. 
ಬೇಸ್ ಲೈನ್ ಸರ್ವೆಯಲ್ಲಿ ಸೇರ್ಪಡೆಯಾಗದಿರುವವರೆಗೆ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ ಮತ್ತು ಶೌಚಾಲಯ ನಿರ್ಮಾಣ ಮಾಡಿಕೊಂಡಿರುವವರು ಕೂಡ ಬಯಲು ಪ್ರದೇಶಗಳಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ರಾಜ್ಯದ ಕೆಲವೆಡೆ ಬಯಲು ಬಹಿರ್ದೆಸೆ ಪ್ರಕರಣಗಳು ನಡೆಯುತ್ತಿವೆ. ಹಳ್ಳಿಗಳು ಸ್ವಚ್ಛ ಮತ್ತು ಆರೋಗ್ಯಕರವಾಗಿರಲು ಜನರು ಕೈಜೋಡಿಸಬೇಕು. ಈ ಹಿನ್ನಲೆಯಲ್ಲಿ ಶೌಚಾಲಯ ಬಳಕೆಗಾಗಿ ಮಾಧ್ಯಮಗಳು, ಜನರು ಮತ್ತು ಸರ್ಕಾರ ಸೇರಿ ಮನವರಿಕೆ ಮಾಡಿಕೊಡಲಿದ್ದೇವೆಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.