ಏರ್ ಆಂಬ್ಯುಲೆನ್ಸ್ ಸೇವೆಗೆ 8 ಹೆಲಿಪ್ಯಾಡ್ ಗಳ ನಿರ್ಮಾಣಕ್ಕೆ ಬಿಬಿಎಂಪಿ ಸಿದ್ಧತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 8 ವಲಯಗಳಲ್ಲಿ ಮುಂಬರುವ ಜುಲೈಯಿಂದ ಹೆಲಿಟ್ಯಾಕ್ಸಿ ...

ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 8 ವಲಯಗಳಲ್ಲಿ ಮುಂಬರುವ ಜುಲೈಯಿಂದ ಹೆಲಿಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಸಾಧ್ಯತೆಯಿದೆ. ಗಂಭೀರವಾಗಿ ಅನಾರೋಗ್ಯಕ್ಕೀಡಾಗಿರುವ ಅಥವಾ ಗಂಭೀರ ಸ್ವರೂಪದ ಗಾಯ ಅಥವಾ ಅಪಘಾತಕ್ಕೀಡಾಗಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ತುರ್ತು ಆಂಬ್ಯುಲೆನ್ಸ್ ಸೇವೆ ಒದಗಿಸಲು ಈ ಸೌಲಭ್ಯ ನೆರವಾಗಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಸಮಯ ಉಳಿತಾಯ ಮಾಡಿ ಉತ್ತಮ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲು ನೆರವಾಗಲು ಏರ್ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಕರೆದೊಯ್ಯಲು ಹೆಲಿಪಾಡ್ ಗಳನ್ನು ಆರಂಭಿಸುವ ಯೋಜನೆಯನ್ನು ಮಹಾನಗರ ಪಾಲಿಕೆ ಹಾಕಿಕೊಂಡಿದೆ.
ಬಿಬಿಎಂಪಿಯ ಪ್ರತಿ ವಲಯಗಳಲ್ಲಿ ಏರ್ ಆಂಬ್ಯುಲೆನ್ಸ್ ಗಳಿಗೆ ಹೆಲಿಪ್ಯಾಡ್ ಗಳ ನಿರ್ಮಾಣ ಕಾರ್ಯ ಇನ್ನು 4 ತಿಂಗಳಲ್ಲಿ ಮುಗಿಯಲಿದೆ ಎನ್ನುತ್ತಾರೆ ಮೇಯರ್ ಸಂಪತ್ ರಾಜ್.
ಕಳೆದ ಫೆಬ್ರವರಿ 28ರಂದು ಮಂಡಿಸಿರುವ ಬಿಬಿಎಂಪಿ ಬಜೆಟ್ ನಲ್ಲಿ ಹೆಲಿಪ್ಯಾಡ್ ಗಳನ್ನು ನಿರ್ಮಿಸುವ ಕುರಿತು ಬಿಬಿಎಂಪಿ ಘೋಷಣೆ ಮಾಡಿತ್ತು. ವರದಿ ಪ್ರಕಾರ ಪ್ರಸ್ತುತ ಬೆಂಗಳೂರಿನಲ್ಲಿ 50 ಹೆಲಿಪ್ಯಾಡ್ ಗಳಿವೆ. ಆದರೆ ಅವುಗಳಲ್ಲಿ ಬಹುತೇಕ ಖಾಸಗಿ ಜಮೀನುಗಳಲ್ಲಿದ್ದು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ. ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆಯೊಂದು ತನ್ನದೇ ಸ್ವಂತ ಹೆಲಿಪ್ಯಾಡ್ ಗಳ ನಿರ್ಮಾಣಕ್ಕೆ ಮುಂದಾಗಿದೆ.
ಪ್ರತಿ ವಲಯಗಳಲ್ಲಿ ಬಿಬಿಎಂಪಿ ಜಮೀನುಗಳನ್ನು ಗುರುತಿಸಿದ್ದು, ಯೋಜನೆ ಪ್ರಾರಂಭಕ್ಕೆ ಸದ್ಯದಲ್ಲಿಯೇ ಟೆಂಡರ್ ಕರೆಯಲಿದೆ. ಈ ಸೇವೆಯನ್ನು ಬಳಸಿಕೊಳ್ಳುವ ಗ್ರಾಹಕರಿಗೆ ಅಂದಾಜು ದರವಿರುತ್ತದೆ. ಈ ಹಣ ಹೆಲಿಪ್ಯಾಡ್ ಗಳನ್ನು ನಿರ್ಮಿಸಿದ ಮತ್ತು ಏರ್ ಆಂಬ್ಯುಲೆನ್ಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆಗೆ ಹೋಗಲಿದೆ.
ಭೂಮಿ ಒದಗಿಸುವುದು ಮತ್ತು ಹೆಲಿಪ್ಯಾಡ್ ಗಳ ಕಂಪೌಂಡ್ ನಿರ್ಮಾಣ ಬಿಟ್ಟರೆ ಮಹಾನಗರ ಪಾಲಿಕೆ ಬೇರೇನು ಖರ್ಚು ಮಾಡುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಸೌಲಭ್ಯ ಒದಗಿಸಲು ಸಬ್ಸಿಡಿ ದರದಲ್ಲಿ ಸೇವೆ ನೀಡಲು ವಿಮಾ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.
ಲಂಡನ್ ನ ಚಾರಿಟೇಬಲ್ ಏರ್ ಆಂಬ್ಯುಲೆನ್ಸ್: ಲಂಡನ್ ನಲ್ಲಿ ದಾಖಲಾತಿ ಹೊಂದಿದ ಚಾರಿಟೆಬಲ್ ಟ್ರಸ್ಟ್ ಇದ್ದು ಅದು 1989ರಿಂದ ಸೇವೆಯಲ್ಲಿ ನಿರತವಾಗಿದೆ. ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಹಗಲು ಹೊತ್ತಿನಲ್ಲಿ ಏರ್ ಆಂಬ್ಯುಲೆನ್ಸ್ ನ್ನು ಮತ್ತು ರಾತ್ರಿ ವೇಳೆ ತುರ್ತು ಕ್ರಿಯಾ ವಾಹನವನ್ನು ಒದಗಿಸುತ್ತಾ ಬಂದಿದೆ. ಏರ್ ಆಂಬ್ಯುಲೆನ್ಸ್ ಸೇವೆಯಿಂದ ರೋಗಿಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವೈದ್ಯರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


