ಬೆಂಗಳೂರು: ಸರ್ಕಾರಿ ನೌಕರರ ಬೃಹತ್ ಸಮಾವೇಶ, ಸಂಚಾರ ದಟ್ಟಣೆ ಸಾಧ್ಯತೆ
ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಬೃಹತ್ ...

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಬೃಹತ್ ಸಮ್ಮೇಳನದಿಂದಾಗಿ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರುವ ಸಾಧ್ಯತೆಯಿದೆ. ಅಲ್ಲದೆ ಅರಮನೆ ಮೈದಾನ ಸುತ್ತಮುತ್ತ ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆಯಿದೆ.
ಜನಸ್ನೇಹಿ ಆಡಳಿತ ಕುರಿತು ನಡೆಯುವ ಸಮ್ಮೇಳನದಲ್ಲಿ ಸುಮಾರು 2 ಲಕ್ಷ ಜನ ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆಯಿರುವುದರಿಂದ ನಗರದ ಸುತ್ತಮುತ್ತ ಇಂದು ಭಾರೀ ಸಂಚಾರ ದಟ್ಟಣೆಯಾಗುವ ನಿರೀಕ್ಷೆಯಿದೆ.
ಸರ್ಕಾರಿ ನೌಕರರ ಒಕ್ಕೂಟದ ಮನವಿಯಂತೆ ನೌಕರರಿಗೆ ಸರ್ಕಾರ ಎರಡು ದಿನಗಳ ವಿಶೇಷ ಸಾಮಾನ್ಯ ರಜೆಯನ್ನು ನಿನ್ನೆ ಮತ್ತು ಇಂದು ನೀಡಿದೆ. ಈ ಮೂಲಕ ನೌಕರರು ಸಮ್ಮೇಳನದಲ್ಲಿ ನಿರಾಳವಾಗಿ ಭಾಗವಹಿಸಬಹುದು. ಆದರೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ನೌಕರರಿಗೆ ಕೇವಲ ಒಂದೇ ದಿನದ ಸಾಮಾನ್ಯ ರಜೆ ಘೋಷಿಸಲಾಗಿದೆ.
ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ತಮ್ಮ ರಜೆಯ ಅನುಮೋದನೆ ಪಡೆಯಲು ಹಾಜರಾತಿಯ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೆಲವು ಸಚಿವರುಗಳು ಕೂಡ ಭಾಗವಹಿಸುವ ನಿರೀಕ್ಷೆಯಿದೆ.
ಸಮ್ಮೇಳನದಿಂದ ಸಾರ್ವಜನಿಕರ ಸಂಚಾರಕ್ಕೆ ಇಂದು ಬೆಂಗಳೂರು ನಗರದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಮ್ಮೇಳನಕ್ಕೆ ಸರ್ಕಾರ ಬೇಡವೆಂದು ಹೇಳಲು ಸಾಧ್ಯವಾಗುವುದಿಲ್ಲ. ಕೆಲವರು ಸರ್ಕಾರ ಕೊಟ್ಟಿರುವ ರಜೆಯನ್ನು ಮರುದಿನ ಭಾನುವಾರವಾಗಿರುವ ಕಾರಣ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ರಜೆ ಕೋರಿ ಪ್ರಮಾಣಪತ್ರ ಸಲ್ಲಿಸುವಂತೆ ಹೇಳಲಾಗಿದೆ. ರಜೆ ದಿನ ಸಮ್ಮೇಳನವನ್ನು ಏರ್ಪಡಿಸಬಹುದಾಗಿತ್ತು, ಇಂದು ಕೆಲಸದ ದಿನವಾಗಿರುವುದರಿಂದ ಶೇಕಡಾ 25ರಷ್ಟು ನೌಕರರು ಗೈರುಹಾಜರಾಗಿ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸರ್ಕಾರಿ ನೌಕರರ ಒಕ್ಕೂಟದ ಅಧಿಕಾರಿಗಳು ಪ್ರತಿಕ್ರಿಯೆಗೆ ಸಿಗಲಿಲ್ಲ. ಈ ಮಧ್ಯೆ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಸಂಚಾರ ಬದಲಾವಣೆ ಮಾಡಿ ಕೇಂದ್ರ ಸಂಚಾರಿ ವಿಭಾಗದ ಉಪ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


