ರಾಜ್ಯ

ಸಿಸಿಬಿ ಪೊಲೀಸ್ ಎಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮೊಬೈಲ್ ಅಂಗಡಿ ಮಾಲೀಕನ ಬಂಧನ

ತಾನು ಸಿಸಿಬಿ ಅಧಿಕಾರಿ ಎಂದು ಹೇಳಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹೆದರಿಸಿ, ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸ್ ಎಂದು ಹೆದರಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮೊಬೈಲ್ ಅಂಗಡಿ ಮಾಲೀಕನ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ತಾನು ಸಿಸಿಬಿ ಅಧಿಕಾರಿ ಎಂದು ಹೇಳಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಹೆದರಿಸಿ, ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಬಂಧಿತ ವ್ಯಕ್ತಿಯನ್ನು ಮೊಬೈಲ್ ಅಂಗಡಿ ಮಾಲೀಕ ಆರ್‌.ಶ್ರೀನಾಥ್ ಗುರುತಿಸಲಾಗಿದ್ದು, ತಾನು ಸಿಸಿಬಿ ಕಾನ್‌ಸ್ಟೆಬಲ್‌ ಎಂದು ಹೇಳಿಕೊಂಡ ಶ್ರೀನಾಥ್ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮೊದಲು ಯಲಹಂಕದ ಜುಡಿಷಿಯಲ್ ಲೇಔಟ್‌ನಲ್ಲಿ ನೆಲೆಸಿದ್ದ ಶ್ರೀನಾಥ್, ಎರಡು ತಿಂಗಳ ಹಿಂದೆ ವಿವಾಹವಾಗಿ ಚಿಕ್ಕಬೊಮ್ಮಸಂದ್ರಕ್ಕೆ ವಾಸ್ತವ್ಯ ಬದಲಿಸಿದ್ದ. ಪತ್ನಿಯನ್ನು ವಾರದ ಹಿಂದೆ ಊರಿಗೆ ಕಳುಹಿಸಿದ್ದ ಆತ, ಜುಲೈ 23ರಂದು ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಕಾರನ್ನು ಓಲಾಗೆ ಅಟ್ಯಾಚ್ ಮಾಡಿರುವ ಆರೋಪಿ, ಅದರ ಜತೆಗೆ ಯಲಹಂಕ ಉಪನಗರ ಹಾಗೂ ಮಾರುತಿನಗರದಲ್ಲಿ ಎರಡು ಮೊಬೈಲ್ ಅಂಗಡಿಗಳನ್ನೂ ನಡೆಸುತ್ತಿದ್ದಾನೆ. ಇತ್ತೀಚೆಗೆ ಕಾಲೇಜಿಗೆ ಹೋಗುವಾಗ ಸಂತ್ರಸ್ತೆಯು ಆತನ ಕಣ್ಣಿಗೆ ಬಿದ್ದಿದ್ದಳು. ತನ್ನ ಗೆಳೆಯನ ಮೂಲಕ ಆಕೆಯ ಮಾಹಿತಿ ಸಂಗ್ರಹಿಸಿದ್ದ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪಿಸ್ತೂಲ್ ಲೈಟರ್ ತೋರಿಸಿ ವಿದ್ಯಾರ್ಥಿನಿಯ ಗೆಳತಿಯನ್ನು ಓಡಿಸಿದ್ದ
ಜುಲೈ 23ರ ಮಧ್ಯಾಹ್ನ 3.30ರ ಸುಮಾರಿಗೆ ಸಂತ್ರಸ್ತ ವಿದ್ಯಾರ್ಥಿನಿ, ಸಹಪಾಠಿಯ ಜತೆ ಉದ್ಯಾನದಲ್ಲಿ ಕುಳಿತಿದ್ದಳು. ಈ ವೇಳೆ ಕ್ಯಾಬ್‌ ನಲ್ಲಿ ಅಲ್ಲಿಗೆ ತೆರಳಿರುವ ದುಷ್ಕರ್ಮಿ ಶ್ರೀನಾಥ್, ಪಿಸ್ತೂಲ್ ಮಾದರಿಯ ಲೈಟರ್ ತೋರಿಸಿ ಬೆದರಿಸಿದ್ದಾನೆ. 'ನಾನು ಸಿಸಿಬಿ ಕಾನ್‌ ಸ್ಟೆಬಲ್. ಇಲ್ಲಿ ಕುಳಿತು ಏನು ಮಾಡುತ್ತಿದ್ದೀರಾ? ನಿಮ್ಮಿಬ್ಬರ ವಿರುದ್ಧ ಯಾರೋ ದೂರು ಕೊಟ್ಟಿದ್ದಾರೆ' ಎಂದು ಏರುದನಿಯಲ್ಲಿ ಹೇಳಿದ್ದಾನೆ. ಇದರಿಂದ ಹೆದರಿದ ಸ್ನೇಹಿತ, ಅಲ್ಲಿಂದ ಎದ್ದು ಹೋಗಿದ್ದಾನೆ. ಇತ್ತ ಈಕೆ ಕೂಡ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ್ದಾಳೆ.
ಆ ನಂತರ ಕ್ಯಾಬ್‌ ನಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿರುವ ಆರೋಪಿ, 'ನಿನ್ನ ಜೊತೆ ಮಾತನಾಡಬೇಕಿದೆ' ಎಂದು ಬಲವಂತವಾಗಿ ಕಾರು ಹತ್ತಿಸಿಕೊಂಡಿದ್ದಾನೆ. 'ಕಿರುಚಾಡಿದರೆ ಶೂಟ್ ಮಾಡಿ ಸಾಯಿಸುತ್ತೇನೆ' ಎಂದು ಅದೇ ಲೈಟರ್‌ ನಿಂದ ಹೆದರಿಸಿದ್ದಾನೆ. ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯದ ನಂತರ ಆಕೆಯನ್ನು ಕ್ಯಾಬ್‌ ನಲ್ಲಿ ಕರೆದುಕೊಂಡು ಬಂದು, ಯಲಹಂಕ ಪೊಲೀಸ್ ಠಾಣೆ ಹತ್ತಿರದಲ್ಲೇ ಇರುವ ಬಸ್‌ ನಿಲ್ದಾಣದ ಬಿಳಿ ಬಿಟ್ಟಿದ್ದ. 'ಪೊಲೀಸರಿಗೆ ದೂರು ಕೊಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ವಿಷಯ ಬಹಿರಂಗವಾದರೆ ನಿನ್ನನ್ನು ಹಾಗೂ ನಿನ್ನ ಪೋಷಕರನ್ನು ಜೀವಸಹಿತ ಬಿಡುವುದಿಲ್ಲ' ಎಂದು ಹೇಳಿ ಹೊರಟು ಹೋಗಿದ್ದ.
ಆತನಿಗೆ ಹೆದರಿ ಎರಡು ದಿನ ಸುಮ್ಮನಿದ್ದ ಸಂತ್ರಸ್ತೆ, ಬುಧವಾರ ಮಧ್ಯಾಹ್ನ ತಾಯಿಗೆ ವಿಷಯ ತಿಳಿಸಿ ಕಣ್ಣೀರಿಟ್ಟಿದ್ದಳು. ಆ ಕೂಡಲೇ ಪೋಷಕರು ಠಾಣೆಗೆ ತೆರಳಿ ದೂರು ಕೊಟ್ಟಿದ್ದರು. ಕ್ಯಾಬ್‌ ನ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದ ಸಂತ್ರಸ್ತೆ, ಅದನ್ನು ಪೊಲೀಸರಿಗೆ ನೀಡಿದ್ದಳು. ಬಳಿಕ ಕ್ಯಾಬ್ ಸಂಖ್ಯೆಯ ನೋಂದಣಿ ವಿವರ ಆಧರಿಸಿ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಆಕೆ ನನ್ನ ಸ್ನೇಹಿತನ ಕೆನ್ನೆಗೆ ಹೊಡೆದಿದ್ದಳು. ಅದಕ್ಕೆ ಪ್ರತೀಕಾರವಾಗಿ ಅತ್ಯಾಚಾರ ಎಸಗಿದ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಹಾಗೂ ಅತ್ಯಾಚಾರ (ಐಪಿಸಿ 376) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.