ರಾಜ್ಯ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ವರದಿ ತಳ್ಳಿಹಾಕಿದ ಸಿಎಂ ಕುಮಾರಸ್ವಾಮಿ

ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಲಖನೌಗೆ ...

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ವರದಿ ತಳ್ಳಿಹಾಕಿದ ಸಿಎಂ ಕುಮಾರಸ್ವಾಮಿ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಲಖನೌಗೆ ಸ್ಥಳಾಂತರವಾಗುವ ಸಾಧ್ಯತೆ ಎಂಬ ಮಾಧ್ಯಮ ವರದಿಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಮುಂದಿನ ವರ್ಷ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. 
ಇಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಗೆ ಪ್ರತಿಕ್ರಿಯಿಸಿದ ಸಿಎಂ, 2019ರಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ. ವೈಮಾನಿಕ ಪ್ರದರ್ಶನ ಸ್ಥಳಾಂತರ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಈ ಹಿಂದೆಯೂ ಈ ರೀತಿಯ ವರದಿಗಳು ಪ್ರಕಟವಾಗಿದ್ದವು. ಆದರೆ ಈ ಬಾರಿಯೂ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು, ಕೇಂದ್ರ ಸರ್ಕಾರ, ರಕ್ಷಣಾ ಕ್ಷೇತ್ರದಲ್ಲಿ ಬೆಂಗಳೂರಿನ ಪ್ರಾಬಲ್ಯವನ್ನು ಕಡಿಮೆಮಾಡಲು ಯತ್ನಿಸುತ್ತಿದೆ. ಏರೋ ಇಂಡಿಯಾ ಪ್ರದರ್ಶನವನ್ನು ಲಖನೌಗೆ ಸ್ಥಳಾಂತರ ಮಾಡುವ ಚಿಂತನೆ ದುರದೃಷ್ಟಕರ. 1996ರಿಂದ ನಾವು ನಗರದಲ್ಲಿ ವೈಮಾನಿಕ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ ಎಂದರು.
ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ವೈಮಾನಿಕ ಪ್ರದರ್ಶನದಲ್ಲಿ ದೇಶ, ವಿದೇಶಗಳಿಂದ ಭಾರಿ ಗಾತ್ರದ ವಿಮಾನಗಳು ಆಗಮಿಸುತ್ತವೆ. ಸಿಲಿಕಾನ್ ಸಿಟಿಯಲ್ಲಿ ಐದು ದಿನಗಳ ಕಾಲ ಉಕ್ಕಿನ ಹಕ್ಕಿಗಳ ಕಲರವ ಕೇಳಿಸುತ್ತದೆ.
ಈ ಮುನ್ನ ಏರೋ ಇಂಡಿಯಾ ಪ್ರದರ್ಶನವು ಗೋವಾಗೆ ಸ್ಥಳಾಂತರವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಎಕ್ಸ್ ಪ್ರೆಸ್ ಗೆ ತಿಳಿದು ಬಂದ ಮಾಹಿತಿ ಪ್ರಕಾರ ಗೋವಾ ಬದಲು ಲಖನೌ ನಲ್ಲಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.