ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೆ.12ರಂದು 'ಬೃಹತ್ ಜಾಥಾ'
ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಇದೇ ಸೆಪ್ಟೆಂಬರ್ 12ರಂದು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮುಂದಾಗಿದ್ದಾರೆ.

Published On :
ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಇದೇ ಸೆಪ್ಟೆಂಬರ್ 12ರಂದು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಾಹಿತಿಗಳು, ಕಲಾವಿದರು, ಹೋರಾಟಗಾರರು ಮುಂದಾಗಿದ್ದಾರೆ.
ಗೌರಿ ಲಂಕೇಶ್ ಹತ್ಯೆಯನ್ನು ವಿರೋಧಿಸಿ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಬೃಹತ್ ಜಾಥಾ ನಡೆಯಲಿದ್ದು, ಬಳಿಕ ಬೃಹತ್ ಪ್ರತಿರೋಧ ಸಮಾವೇಶವನ್ನು ನಡೆಸುವ ಮೂಲಕ ಸಾವು-ಕೊಲೆಗಳಿಂದ ವಿಚಾರವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಹಂತಕರಿಗೆ ರವಾನಿಸಲು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ನಿರ್ಧರಿಸಿವೆ.
ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ ಹಿರಿಯ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್ ಅವರು, "ಗೌರಿ ಹತ್ಯೆ ಬರೀ ವ್ಯಕ್ತಿಯ ಹತ್ಯೆಯಲ್ಲ. ಅದು ವಿಚಾರದ ಹತ್ಯೆ. ಇಂತಹ ಹೇಯ ಕೃತ್ಯಗಳಿಂದ ವಿಚಾರವನ್ನು ಪ್ರತಿಪಾದಿಸುವವರನ್ನು ತಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಜೀವ ಪರವಾದ ನಿಲುವುಗಳನ್ನು ಎದುರಿಸಲಾಗದ ಶಕ್ತಿಗಳು ಬಂದೂಕಿನ ಮೊರೆ ಹೋಗಿರುವುದು ಹೇಡಿತನ ಮತ್ತು ಸೋಲಿನ ಲಕ್ಷಣವನ್ನು ತೋರಿಸುತ್ತಿದೆ. ತಲೆಗೆ ಗುಂಡಿಟ್ಟರೆ ವಿಚಾರವನ್ನು, ಎದೆಗೆ ಗುಂಡಿಟ್ಟರೆ ಹೃದಯವಂತಿಕೆಯನ್ನು ಕೊಲ್ಲಬಹುದು ಎಂದು ಯೋಚಿಸಿದ್ದರೆ ಅದು ಮೂರ್ಖತನ ಮತ್ತು ಹತಾಶೆಯ ಪರಮಾವಧಿ ಎಂದು ಅವರು ಕಿಡಿಕಾರಿದರು.
ಅಂತೆಯೇ ಗೌರಿಯ ಹತ್ಯೆ ವೈಚಾರಿಕತೆಯ ಮೇಲೆ ನಡೆದ ಹತ್ಯೆ. ಇದು ಸಾಹಿತ್ಯ, ಹೋರಾಟ ಸೇರಿದಂತೆ ಇಡೀ ಚಳವಳಿ ಕ್ಷೇತ್ರವನ್ನು ದಿಗ್ಭ್ರಮೆಗೊಳಿಸಿದೆ ಮತ್ತು ಹತಾಶೆಯನ್ನುಂಟು ಮಾಡಿದೆ. ಸಾವು ಮತ್ತು ಕೊಲೆಗಳಿಂದ ವಿಚಾರವಾದಿಗಳನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದರೆ ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿ ಪ್ರತಿರೋಧದ ದನಿಯನ್ನು ದಾಖಲಿಸಲು ಹಾಡು, ಬೀದಿ ನಾಟಕ, ರಂಗ ಗೀತೆಗಳು, ಸಿನಿಮಾ, ಚಿತ್ರಕಲೆ, ವಾದ್ಯಗೋಷ್ಠಿಗಳ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಅಲ್ಲದೆ ಪ್ರತಿಭಟನೆಯಲ್ಲಿ ಡಾ. ಕೆ.ವೈ ನಾರಾಯಣಸ್ವಾಮಿ, ಡಾ. ಹೆಚ್.ಎಲ್ ಪುಷ್ಪ, ಡಾ. ಡಾಮಿನಿಕ್, ಶ್ರೀನಿವಾಸ್ ಕಪ್ಪಣ್ಣ, ಹುಲಿಕೋಟೆ ಮೂರ್ತಿ ಸೇರಿದಂತೆ ಹಲವರು ಸೆಪ್ಟೆಂಬರ್ 12 ರಂದು ನಡೆಯಲಿರುವ ಸಮಾವೇಶದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇನ್ನು ಪ್ರತಿಭಟನೆಯಲ್ಲಿ ಸಾಹಿತಿ, ಕಲಾವಿದರು, ಚಲನಚಿತ್ರ ನಿರ್ದೇಶಕರು, ಹೋರಾಟಗಾರರು, ಮಹಿಳೆಯರು, ದಲಿತಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೋರಾಟ ವೇದಿಕೆ ಸಾರ್ವಜನಿಕರಿಗೆ ಕರೆ ನೀಡಿದೆ. ಪ್ರತಿಭಟನಾ ಸಮಾವೇಶದಲ್ಲಿ ಖ್ಯಾತ ಹೋರಾಟಗಾರ್ಟಿ ತೀಸ್ತಾ ಸೆಟಲ್‌ವಾಳ್, ಪತ್ರಕರ್ತರಾದ ಸಾಯಿನಾಥ್, ಸಾಗರಿಕಾ ಗೋಷ್, ಹೋರಾಟಗಾರರಾದ ಮೇದಾ ಪಾಟ್ಕರ್, ಕವಿತಾ ಕೃಷ್ಣನ್, ಜಿಗ್ನೇಶ್ ಮೇವಾನಿ, ನಟ ಪ್ರಕಾಶ್ ರೈ, ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವು ಮಂದಿ ಭಾಗವಹಿಸುವ ನಿರೀಕ್ಷೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


