ರಾಜ್ಯ

ಇಂದಿರಾ ಕ್ಯಾಂಟೀನ್‌ ತಿಂಡಿಯಲ್ಲಿ ಜಿರಳೆ; ಷಡ್ಯಂತ್ರ ಎಂದ ಬಿಬಿಎಂಪಿ, ನಾಲ್ವರ ವಿರುದ್ಧ ಎಫ್‌ಐಆರ್

ರಾಜ್ಯ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ತಿಂಡಿಯಲ್ಲಿ ಜಿರಳೆ ಸಿಕ್ಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ದುಷ್ಕರ್ಮಿಗಳು ಷಡ್ಯಂತ್ರವಿದೆ ಎಂದು ಬಿಬಿಎಂಪಿ ಆರೋಪಿಸಿದೆ.

ಇಂದಿರಾ ಕ್ಯಾಂಟೀನ್‌ ತಿಂಡಿಯಲ್ಲಿ ಜಿರಳೆ; ಷಡ್ಯಂತ್ರ ಎಂದ ಬಿಬಿಎಂಪಿ, ನಾಲ್ವರ ವಿರುದ್ಧ ಎಫ್‌ಐಆರ್
ಫೇಸ್ ಬುಕ್ ನಲ್ಲಿ ಹರಿದಾಡಿದ್ದ ಚಿತ್ರ
Published On :
ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ತಿಂಡಿಯಲ್ಲಿ ಜಿರಳೆ ಸಿಕ್ಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ದುಷ್ಕರ್ಮಿಗಳು ಷಡ್ಯಂತ್ರವಿದೆ ಎಂದು ಬಿಬಿಎಂಪಿ ಆರೋಪಿಸಿದೆ.
ನಗರದ ಕಾಮಾಕ್ಷಿಪಾಳ್ಯ ಬಳಿಯ ಮಾಳಗಾಳದ ಇಂದಿರಾ ಕ್ಯಾಂಟೀನ್‌ ತಿಂಡಿಯಲ್ಲಿ ಜಿರಳೆ ಇರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಕ್ಯಾಂಟೀನ್‌ ಹೆಸರಿಗೆ ಧಕ್ಕೆ ತಂದ ಆರೋಪದಡಿ ಇದೀಗ ಕಾಮಾಕ್ಷಿ  ಪಾಳ್ಯ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಬಂಧಿತರ ಪೈಕಿ ವಿಡಿಯೋ ಪೋಸ್ಟ್ ಮಾಡಿದ್ದ 'ಫೈಟ್ ಫಾರ್ ರೈಟ್' ಫೇಸ್ ಬುಕ್ ಖಾತೆದಾರ ಹೇಮಂತ್ ಕುಮಾರ್  ಸೇರಿದಂತೆ ಆತನ ಇತರೆ ಮೂವರು ಸ್ನೇಹಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಕಳೆದ ಅಕ್ಟೋಬರ್ 20ರಂದು ಬೆಳಿಗ್ಗೆ 8.45 ಗಂಟೆಯ ಸುಮಾರಿಗೆ ಕಾಮಾಕ್ಷಿ ಪಾಳ್ಯದ ಮಾಳಗಾಳದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದ ಹೇಮಂತ್‌ ಕುಮಾರ್‌ ಹಾಗೂ ಅವರ ಸ್ನೇಹಿತರು ತಿಂಡಿ ತಿನ್ನುತ್ತಿದ್ದರು. ತಟ್ಟೆಯಲ್ಲಿದ್ದ  ತಿಂಡಿಯಲ್ಲಿ ಜಿರಳೆ ಪತ್ತೆಯಾಗಿತ್ತು ಎಂದು ಆರೋಪಿಸಿ ಅಲ್ಲಿನ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು. ಅಲ್ಲದೆ ತಿಂಡಿಯಲ್ಲಿ ಜಿರಳೆ ಇರುವ ವಿಡಿಯೊ ಚಿತ್ರೀಕರಿಸಿ ‘ಫೈಟ್‌ ಫಾರ್‌ ರೈಟ್‌’ ಹೆಸರಿನ ಫೇಸ್‌ ಬುಕ್‌ ಪುಟದಲ್ಲಿ ಹರಿಬಿಟ್ಟಿದ್ದರು. 
ಇನ್ನು ಈ ವಿಡಿಯೊ ಗಮನಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಕ್ಯಾಂಟೀನ್‌ ನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಹೇಮಂತ್‌ ಕುಮಾರ್‌ ಹಾಗೂ ಅವರ ಸ್ನೇಹಿತರೇ ಉದ್ದೇಶಪೂರ್ವಕವಾಗಿ ತಿಂಡಿಯಲ್ಲಿ  ಜಿರಳೆ ಹಾಕಿದ್ದು ಕಂಡುಬಂದಿದೆ ಎನ್ನಲಾಗಿದ್ದು, ಅದೇ ದೃಶ್ಯಗಳನ್ನು ಆಧರಿಸಿ ಕ್ಯಾಂಟೀನ್‌ಗಳ ನೋಡಲ್‌ ಅಧಿಕಾರಿ ನಂಜುಂಡಪ್ಪ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ  ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಇನ್ನು ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು, "ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾಗಳ ಡಿವಿಆರ್‌ಗಳನ್ನು ಸೋಮವಾರ ವಶಕ್ಕೆ ಪಡೆದು  ಪರಿಶೀಲನೆ ನಡೆಸಲಿದ್ದೇವೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ. 
ಜಿರಳೆ ಸಿಕ್ಕಿತು ಎಂದು ವಿಡಿಯೋ ಮಾಡಿದ್ದ ಆರೋಪಿ ಹೇಮಂತ್‌ ಕುಮಾರ್‌ ಹಾಗೂ ಅವರ ಸ್ನೇಹಿತರು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅವರು ಅಕ್ಟೋಬರ್ 20ರಂದು ಮೊದಲ ಬಾರಿಗೆ ಕ್ಯಾಂಟೀನ್‌ ಗೆ ಬಂದು ಇಂಥ  ಕೃತ್ಯ ಎಸಗಿರುವ ಮಾಹಿತಿ ಇದೆ. ಪ್ರಸ್ತುತ ಅವರ ಹುಡುಕಾಟ ನಡೆಸಲಾಗುತ್ತಿದ್ದು, ಅವರನ್ನು ವಶಕ್ಕೆ ಪಡೆದ ಬಳಿಕವೇ ಅವರ ಉದ್ದೇಶವೇನು ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಇನ್ನು ಫೈಟ್ ಫಾರ್ ರೈಟ್ ಫೇಸ್ ಬುಕ್ ಖಾತೆಯಲ್ಲಿ ಹರಿದಾಡಿದ್ದ 1.38 ನಿಮಿಷದ ಈ ವಿಡಿಯೊವನ್ನು 29 ಸಾವಿರ ಮಂದಿ ವೀಕ್ಷಿಸಿ, 752 ಮಂದಿ ಶೇರ್‌ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.