ರಾಜ್ಯ

ಕಂಬಳಕ್ಕೆ ಅಡ್ಡಿ ಆತಂಕ; ಮತ್ತೆ ರಾಷ್ಟ್ರಪತಿ ಅಂಗಳಕ್ಕೆ ತಿದ್ದುಪಡಿ ವಿಧೇಯಕ!

ಪ್ರಾಣಿಗಳನ್ನು ಬಳಕೆ ಮಾಡಿ ಆಯೋಜಿಸುವ ಸ್ಪರ್ಧೆಗಳಿಗೆ ಅವಕಾಶ ನೀಡುವ ತಿದ್ದುಪಡಿ ವಿಧೇಯಕದಲ್ಲಿ ಹೆಚ್ಚಿನ ಅಧಿಕಾರ ಹೊಂದುವ ರಾಜ್ಯ ಸರ್ಕಾರದ ಚಿಂತನೆಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿ...

ಕಂಬಳಕ್ಕೆ ಅಡ್ಡಿ ಆತಂಕ; ಮತ್ತೆ ರಾಷ್ಟ್ರಪತಿ ಅಂಗಳಕ್ಕೆ ತಿದ್ದುಪಡಿ ವಿಧೇಯಕ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಪ್ರಾಣಿಗಳನ್ನು ಬಳಕೆ ಮಾಡಿ ಆಯೋಜಿಸುವ ಸ್ಪರ್ಧೆಗಳಿಗೆ ಅವಕಾಶ ನೀಡುವ ತಿದ್ದುಪಡಿ ವಿಧೇಯಕದಲ್ಲಿ ಹೆಚ್ಚಿನ ಅಧಿಕಾರ ಹೊಂದುವ ರಾಜ್ಯ ಸರ್ಕಾರದ ಚಿಂತನೆಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವುದನ್ನು  ರಾಜ್ಯ ಸರ್ಕಾರ ಒಪ್ಪಿದ್ದು, ಮತ್ತೆ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಅವರು ಸ್ಪಷ್ಟನೆ ನೀಡಿದ್ದು, ಕಂಬಳ ಹಾಗೂ ಎತ್ತಿನ ಗಾಡಿ ಸ್ಪರ್ಧೆಗಳಿಗೆ ಭವಿಷ್ಯದಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ವಿಧಿಸಬಹುದಾಗಿದ್ದ ಹೆಚ್ಚಿನ ನಿಬಂಧನೆಗಳಿಗೆ  ಅವಕಾಶವಿಲ್ಲದಂತಾಗಿದ್ದು, ಮತ್ತೆ ರಾಷ್ಟ್ರಪತಿ ಅಂಕಿತಕ್ಕೆ ಕಳಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  "ಭವಿಷ್ಯದಲ್ಲಿ ಸ್ಪರ್ಧೆಗಳಿಗೆ ಹೆಚ್ಚಿನ ಷರತ್ತು ವಿಧಿಸುವ ಸಂದರ್ಭದಲ್ಲಿ ಮತ್ತೆ ರಾಷ್ಟ್ರಪತಿ ಅಂಗೀಕಾರಕ್ಕೆ ಕಾಯದೆ ರಾಜ್ಯ ಸರ್ಕಾರವೇ ಅಧಿಸೂಚನೆ ಮೂಲಕ ಬದಲಾಯಿಸುವ ಅಧಿಕಾರವನ್ನು ಈ ಮೂಲಕ ಪಡೆಯಲು  ಯತ್ನಿಸಲಾಗಿತ್ತು. ಏಪ್ರಿಲ್ 13ರಂದು ರಾಜ್ಯ ಸರ್ಕಾರದೊಂದಿಗಿನ ಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಈ ಅಂಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಸಕ್ತ ಕಾನೂನು ಕೇಂದ್ರದ ವ್ಯಾಪ್ತಿಗೆ ಬರುವ ಕಾರಣ ಬದಲಾವಣೆಗೆ  ರಾಷ್ಟ್ರಪತಿಯವರ ಒಪ್ಪಿಗೆ ಅತ್ಯಾವಶ್ಯಕ ಎಂದಿದ್ದರು. ಈ ವಿಚಾರವನ್ನು ಮತ್ತಷ್ಟು ಚರ್ಚೆಗೆ ಒಳಪಡಿಸಿದರೆ ಈ ವರ್ಷ ಕಂಬಳ ನಡೆಸಲು ತಡವಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರದ ಆಕ್ಷೇಪಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು  ಅವರು ತಿಳಿಸಿದರು.

ತಮಿಳುನಾಡಿನ ಜಲ್ಲಿಕಟ್ಟು, ರಾಜ್ಯದ ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆ ಕಂಬಳ ಸೇರಿ ದೇಶಾದ್ಯಂತ ಪ್ರಾಣಿಗಳನ್ನು ಬಳಸಿ ನಡೆಸುವ ಸ್ಪರ್ಧೆಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆಗಳು  ನಡೆದ ಕಾರಣ ಅಲ್ಲಿನ ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಕ್ರೀಡೆಗೆ ಅವಕಾಶ ಕಲ್ಪಿಸಿತ್ತು. ರಾಜ್ಯದಲ್ಲೂ ಇದೇ ರೀತಿ ಕಂಬಳ ಹಾಗೂ ಎತ್ತಿನಗಾಡಿ ಓಟಕ್ಕೆ ಅವಕಾಶ ಕಲ್ಪಿಸಲು ಒತ್ತಡ ಹೆಚ್ಚಿತ್ತು. ಪ್ರಾಣಿಗಳಿಗೆ ಹಿಂಸಾಚಾರ  ಮಾಡುವುದನ್ನು ತಡೆಗಟ್ಟುವ ತಿದ್ದುಪಡಿ ವಿಧೇಯಕ ರಚಿಸಿದ್ದ ಸರ್ಕಾರ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿಯವರ ಅಂಕಿತಕ್ಕೆ 2017ರ ಫೆಬ್ರವರಿ 22ಕ್ಕೆ ಕಳುಹಿಸಿತ್ತು.

ಆದರೆ ರಾಜ್ಯ ಸರ್ಕಾರದ ಈ ತಿದ್ದುಪಡಿ ವಿಧೇಯಕಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.