ಕೆಎಸ್ ಐಎಸ್ ಎಫ್ ಸಿಬ್ಬಂದಿ ಮೇಲೆ ಮೆಟ್ರೋ ಸಿಬ್ಬಂದಿಗಳಿಂದ ಹಲ್ಲೆ
ಕ್ಷುಲ್ಲಕ ವಿಚಾರಕ್ಕೆ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಮೆಟ್ರೋ ಸಿಬ್ಬಂದಿಗಳು ಪರಸ್ಪರರ ಮೇಲೆ ಹಲ್ಲೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಮೆಟ್ರೋ ಸಿಬ್ಬಂದಿಗಳು ಪರಸ್ಪರರ ಮೇಲೆ ಹಲ್ಲೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.
ಮೆಟ್ರೋ ಪ್ರವೇಶ ದ್ವಾರದಲ್ಲಿ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಮೆಟ್ರೋ ಸಿಬ್ಬಂದಿ ಮತ್ತು ಮೆಟ್ರೋ ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಕೆಎಸ್ ಐಎಸ್ ಎಫ್ ಸಿಬ್ಬಂದಿ ಆನಂದ್ ಗುಡ್ಡದ್ ಮೆಟ್ರೋ ಸಿಬ್ಬಂದಿ ರಾಕೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಮೆಟ್ರೋದಲ್ಲಿ ಮೇಲ್ವಿಚಾರಕನಾಗಿರುವ ರಾಕೇಶ್ ಗುರುವಾರ ಬೆಳಗ್ಗೆ 6 ಗಂಟೆಗೆ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣಕ್ಕೆ ಕರ್ತವ್ಯಕ್ಕೆ ಬಂದಿದ್ದ. ಇದೇ ವೇಳೆ ಭದ್ರತಾ ಸಿಬ್ಬಂದಿ ಆನಂದ್ ಗುಡ್ಡದ್ ಎಂಬುವರು ಬ್ಯಾಗ್ ಅನ್ನು ಲೋಹ ಶೋಧಕ ಯಂತ್ರ ಮತ್ತು ಸ್ಕ್ಯಾನಿಂಗ್ ಗೆ ಒಳಪಡಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಕೇಶ್, "ನಾನು ಮೆಟ್ರೋ ಸಿಬ್ಬಂದಿ ನನ್ನ ತಪಾಸಣೆ ಅಗತ್ಯವಿಲ್ಲ,' ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಆಗ ಅಲ್ಲೇ ಇದ್ದ ಮತ್ತೋರ್ವ ಭದ್ರತಾ ಪೇದೆ ಲಕ್ಷ್ಮಣ್ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ರಾಕೇಶ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ. ಕೂಡಲೇ ಅಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಿದರು.
ನಂತರ 10 ಗಂಟೆ ಸುಮಾರಿಗೆ ಸಹೋದ್ಯೋಗಿ ಹರೀಶ್ ಹಾಗೂ ಒಂದಷ್ಟು ಜನರ ತಂಡದೊಂದಿಗೆ ಆನಂದ್ ಬಳಿ ಬಂದ ರಾಕೇಶ್ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗತ್ತಿದೆ. ಇದನ್ನು ತಡೆಯಲು ಬಂದ ಲಕ್ಷ್ಮಣ್ ಮೇಲೂ ಸಹ ಹಲ್ಲೆ ನಡೆಸಿದ್ದಲ್ಲದೆ ಮಹಿಳಾ ಸಿಬ್ಬಂದಿ ಭಾರತಿ ಎಂಬವರನ್ನು ಎಳೆದಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಕೇಶ್ ಮತ್ತು ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


