ನೋಟು ನಿಷೇಧದಿಂದ 22 ಲಕ್ಷ ಮಂದಿಯ ಉದ್ಯೋಗಕ್ಕೆ ಕತ್ತರಿ: ಕನ್ಹಯ್ಯ ಕುಮಾರ್
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ನೋಟು ನಿಷೇಧ ಮಾಡಿ 22 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಜೆಎನ್ ಯು ವಿವಾದ ಖ್ಯಾತಿಯ ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ನೋಟು ನಿಷೇಧ ಮಾಡಿ 22 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಜೆಎನ್ ಯು ವಿವಾದ ಖ್ಯಾತಿಯ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಕನ್ಹಯ್ಯ ಕುಮಾರ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಸ್ನಾತಕೋತ್ತರ ಪದವಿ ಶಿಕ್ಷಣ ಹಾಗೂ ಸಂಶೋಧನೆಗಳ ಮೇಲಿನ ಬಜೆಟ್ ಅನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ವಿದ್ಯಾರ್ಥಿ ಆತ್ಮಹತ್ಯೆ ಪ್ರಮಾಣ ಶೇ.43 ಕ್ಕೆ ಏರಿಕೆಯಾಗಿದೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೇಸರೀಕರಣ ಮಾಡುತ್ತಿದೆ. ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಿರುವುದೇ ಪ್ರಗತಿಪರ ಚಿಂತನೆ ಮೈಗೂಡಿಸಿಕೊಳ್ಳಲು. ಆದರೆ, ಅದರ ಮೂಲ ಉದ್ದೇಶಕ್ಕೆ ಈಗ ಕೊಡಲಿ ಪೆಟ್ಟು ಬೀಳುತ್ತಿದ್ದು, ವಿಶ್ವವಿದ್ಯಾಲಯಗಳಲ್ಲಿ ಆರ್ ಎಸ್ ಎಸ್ ಅಜೆಂಡಾ ಸ್ಥಾಪಿಸಲಾಗುತ್ತಿದೆ. ನಾವು ಇದನ್ನು ಜೆಎನ್ ಯು, ಐಐಟಿ ಮದ್ರಾಸ್, ಹಿಸಿಯು ಮತ್ತು ಐಐಎಂಸಿ ಪ್ರಕರಣಗಳಲ್ಲಿ ನೋಡಿದ್ದೇವೆ ಎಂದು ಹೇಳಿದರು.
ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ಮೂರು ತಿಂಗಳುಗಳೇ ಕಳೆದರೂ ಆತನ ಕುರಿತು ಯಾವುದೇ ಸಮಾಚಾರ ತಿಳಿದುಬಂದಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತಿದರೆ ಅದು ದೇಶ ವಿರೋಧಿ ಘೋಷಣೆಯಾಗುತ್ತದೆ. ನಾವು ಜನವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿದ್ದೇವೆಯೇ ಹೊರತು ದೇಶದ ವಿರುದ್ಧ ಅಲ್ಲ. ಬಂಡವಾಳಶಾಹಿಗಳ ಬೆಂಬಲದಿಂದ ಅಧಿಕಾರಕ್ಕೆ ಬಂದವರು ಮೋದಿ. ಬಡವರ ಪರ ಹೇಗೆ ನಿರ್ಣಯ ಕೈಗೊಳ್ಳಲು ಸಾಧ್ಯ? ಎಂದು ಕನ್ಹಯ್ಯ ಪ್ರಶ್ನಿಸಿದರು.
ಇದೇ ವೇಳೆ ಕಾಲೇಜು ಮಟ್ಟದ ಚುನಾವಣೆ ಕುರಿತು ಮಾತನಾಡಿದ ಅವರು, ಸಾಮಾಜಿಕ ಹಾಗೂ ರಾಜಕೀಯ ಚಳವಳಿಗಳ ಮಧ್ಯೆ ಅಂತರ್ಗತವಾದ ಸಂಪರ್ಕ ಬೆಸೆಯಲು ನಾನು ಯತ್ನಿಸುತ್ತಿದ್ದೇನೆ. ಅಂತಹ ಸಂಬಂಧ ಬೆಸೆಯಲು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಒಕ್ಕೂಟಗಳಿಗೆ ಚುನಾವಣೆ ನಡೆಯುವುದು ಮೊದಲ ಅಗತ್ಯ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿ ಒಕ್ಕೂಟಗಳಿಗೆ ಚುನಾವಣೆಯೇ ನಡೆಯುತ್ತಿಲ್ಲ. ವಿದ್ಯಾರ್ಥಿ ಚಳವಳಿಯಿಂದಲೇ ನಾಯಕರಾಗಿ ಬೆಳೆದ ಉತ್ತರ ಪ್ರದೇಶ ಹಾಗೂ ಬಿಹಾರ ಮುಖ್ಯಮಂತ್ರಿಗಳು ಕೂಡ ವಿದ್ಯಾರ್ಥಿ ಒಕ್ಕೂಟಗಳ ಚುನಾವಣೆ ಮೇಲೆ ನಿಷೇಧ ಹೇರಿದ್ದಾರೆ. ಹೊಸ ನಾಯಕರು ಹೊರಹೊಮ್ಮುವುದು, ಆಡಳಿತ ವ್ಯವಸ್ಥೆಯ ಆದೇಶಗಳನ್ನು ಪ್ರಶ್ನಿಸುವುದು ಅವರಿಗೆ ಬೇಕಿಲ್ಲ. ಎಲ್ಲ ರಾಜ್ಯಗಳ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ವಾದ. ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಲಿಂಗ್ಡೊ ಸಮಿತಿ ಸಹ ಅದನ್ನೇ ಶಿಫಾರಸು ಮಾಡಿದೆ ಎಂದು ಕನ್ಹಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


