ಮಾಸ್ತಿಗುಡಿ ದುರಂತ: ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಮೂರನೇ ವ್ಯಕ್ತಿ ಶವಪತ್ತೆ
ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಬ್ಬರು ನಟರ ಮೃತದೇಹ ಪತ್ತೆ ಕಾರ್ಯಾಚರಣೆ ವೇಳೆ ನೀರಿಗೆ ಬಿದ್ದಿದ್ದ ಸ್ಥಳೀಯ ವ್ಯಕ್ತಿಯೋರ್ವನ ಶವ ಕೂಡ ಪತ್ತೆಯಾಗಿದೆ.

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಬ್ಬರು ನಟರ ಮೃತದೇಹ ಪತ್ತೆ ಕಾರ್ಯಾಚರಣೆ ವೇಳೆ ನೀರಿಗೆ ಬಿದ್ದಿದ್ದ ಸ್ಥಳೀಯ ವ್ಯಕ್ತಿಯೋರ್ವನ ಶವ ಕೂಡ ಪತ್ತೆಯಾಗಿದೆ.
ಇಬ್ಬರು ನಟರ ಮೃತದೇಹ ಪತ್ತೆಯಾದ ಬಳಿಕ ನಿನ್ನೆ ಬೆಳಗ್ಗೆ 3ನೇ ವ್ಯಕ್ತಿಯ ಶವಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ನಡೆಸಿದ್ದರು. ಎನ್ ಡಿಆರ್ ಎಫ್ ನ ಒಟ್ಟು ನಾಲ್ಕು ಬೋಟ್ ಗಳು ಕಾರ್ಯಾಚರಣೆಯಲ್ಲಿ ತೊಡಗಿ ಅಂತಿಮವಾಗಿ ನಾಪತ್ತೆಯಾಗಿದ್ದ ಸ್ಥಳೀಯ ಯಲ್ಲಯ್ಯ ಎಂಬಾತನ ಶವವನ್ನು ಹೊರತೆಗೆದಿದೆ ಎಂದು ತಿಳಿದುಬಂದಿದೆ.
ತಿಪ್ಪಗೊಂಡನಹಳ್ಳಿ ಡ್ಯಾಂ ಬಳಿ ಇಬ್ಬರು ನಟರ ಮೃತದೇಹ ಶೋಧಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಕಾರ್ಯಾಚರಣೆ ವೀಕ್ಷಿಸಲು ಸ್ಥಳೀಯ ಭಾರಿ ಜನಸ್ತೋಮ ಆಗಮಿಸಿತ್ತು. ಈ ವೇಳೆ ಯಾರೋ ದುಷ್ಕರ್ಮಿಗಳು ಡ್ಯಾಂ ಬಳಿ ಗೂಡು ಕಟ್ಟಿದ್ದ ಜೇನು ನೋಣಗಳಿಗೆ ಕಲ್ಲು ತೂರಿದ್ದು, ಜೇನು ನೋಣಗಳು ಏಕಾಏಕಿ ಜನರ ಮೇಲೆ ದಾಳಿ ನಡೆಸಿವೆ. ಈ ಸಂದರ್ಭದಲ್ಲಿ ಜೇನು ನೋಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ಕೆಲವರು ನೀರಿಗೆ ಹಾರಿದ್ದಾರೆ. ಈ ಸಂದರ್ಭದಲ್ಲಿದ್ದ ರಾಮನಗರದ ಯಲ್ಲಯ್ಯ ಎಂಬಾತ ಕೂಡ ನೀರಿಗೆ ಹಾರಿದ್ದ. ಬಳಿಕ ಆತ ನಾಪತ್ತೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗುತ್ತಿತ್ತು.
ಆತನೊಂದಿಗೆ ಕಾರ್ಯಾಚರಣೆ ವೀಕ್ಷಿಸಲು ಆಗಮಿಸಿದ್ದ ಆತನ ಸ್ನೇಹಿತರಾದ ರಾಮಯ್ಯ ಚೌಡಯ್ಯ ಎಂಬುವವರು ನೀಡಿದ ಮಾಹಿತಿ ಮೇರೆಗೆ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿ ಮೃತ ಯಲ್ಲಯ್ಯನ ಶವವನ್ನು ಹೊರತೆಗೆದಿದೆ. ಪ್ರಸ್ತುತ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ನೀಡಲಾಗಿದ್ದು, ಇಂದು ಆತನ ಅಂತ್ಯ ಸಂಸ್ಕಾರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


