ಹೊಸದಾಗಿ ಜಾತಿಗಣತಿ ಮಾಡುವಂತೆ ಒಕ್ಕಲಿಗ, ಲಿಂಗಾಯತ ಸಮುದಾಯ ಆಗ್ರಹ
ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಹಾಗೂ ..

ಬೆಂಗಳೂರು : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಹೊಸದಾಗಿ ಜಾತಿ ಗಣತಿ ಮಾಡುವಂತೆ ಆಗ್ರಹಿಸಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿರುವ ವೀರಶೈವ-ಲಿಂಗಾಯತ ಭವನದಲ್ಲಿಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು 'ಜಾತಿ ಜನಗಣತಿ ವರದಿ ಪ್ರಕಟಣೆಗೆ ಪೂರ್ವಭಾವಿ ಸಭೆ' ನಡೆಸಿದರು.
ವೀರಶೈವ ಮಹಾಸಭಾದ ಅಧ್ಯಕ್ಷ ಎನ್.ತಿಪ್ಪಣ್ಣ ಮಾತನಾಡಿ ''ಎರಡು ಸಮುದಾಯಗಳಿಗೆ ಇರುವ ಮೀಸಲನ್ನು ಕಿತ್ತುಕೊಂಡು ಬೇರೆ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಲಿಂಗಾಯತ ಹಾಗೂ ಒಕ್ಕಲಿಗರ ಸಂಖ್ಯೆಯನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿ ವರದಿ ಸಿದ್ಧಪಡಿಸಿದೆ. ಈಗಾಗಲೇ ಮಾಧ್ಯಮಗಳಿಗೆ ಸೋರಿಕೆಯಾಗಿರುವ ವರದಿ ಅಧಿಕೃತ ಆಗಿದ್ದಲ್ಲಿ ಅದಕ್ಕೆ ಎರಡು ಸಮುದಾಯಗಳ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಅದನ್ನು ಬಿಡುಗಡೆ ಮಾಡಬಾರದು. ರಾಜ್ಯದಲ್ಲಿ 1.59 ಕೋಟಿ ಲಿಂಗಾಯತರು ಹಾಗೂ 1.9 ಕೋಟಿ ಒಕ್ಕಲಿಗರಿದ್ದಾರೆ. ಆದರೆ, ರಾಜ್ಯ ಸರಕಾರ ಈ ಎರಡು ಸಮುದಾಯಗಳ ಜನಸಂಖ್ಯೆಯನ್ನು 1 ಕೋಟಿ ಒಳಗೆ ಇಳಿಸಿದೆ,'' ಎಂದು ಆರೋಪಿಸಿದರು.
ಸೋರಿಕೆಯಾಗಿರುವ ರಾಜ್ಯ ಸರಕಾರದ ಜಾತಿ ಗಣತಿ ವರದಿಯಲ್ಲಿನ ಲೆಕ್ಕಾಚಾರ ಅವೈಜ್ಞಾನಿಕ ಹಾಗೂ ದುರುದ್ದೇಶಪೂರ್ವಕವಾಗಿದೆ. ರಾಜಕೀಯ ಲಾಭದ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರಕಾರವೂ ಸಮುದಾಯಗಳ ಜನಸಂಖ್ಯೆಯನ್ನು 1 ಕೋಟಿಗಿಂತಲೂ ಕಡಿಮೆ ಮಾಡಿದೆ. ಗಣತಿ ವೇಳೆ ಎರಡ್ಮೂರು ಜಾತಿಗಳನ್ನು ಮಾತ್ರ ಪರಿಗಣಿಸಿ ಉಳಿದ ಉಪಜಾತಿಗಳನ್ನು ಹೊರಗೆ ಇಡಲಾಗಿದೆ. ಈ ಕುರಿತು ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳಿಂದ ಸಲಹೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಹೋರಾಟ, ವರದಿ ತಿರಸ್ಕಾರ ಹಾಗೂ ನಿಷ್ಪಕ್ಷಪಾತವಾಗಿ ಮರು ಸಮೀಕ್ಷೆ ಮಾಡುವಂತೆ ಒತ್ತಾಯಿಸುವುದು ಸಭೆಯ ಉದ್ದೇಶವಾಗಿದೆ.
ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಲ್ಲಿನ ಮೀಸಲಾತಿ ಕಡಿಮೆ ಮಾಡಿ ಬೇರೆ ಸಮುದಾಯಗಳಿಗೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಜಾತಿಗಣತಿ ವರದಿ ಸಿದ್ಧಪಡಿಸಿದಂತಿದೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ತಿಪ್ಪಣ್ಣ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


