ಬಹುಮಾನ ಮೆಸೇಜ್ ಆಮಿಷಕ್ಕೆ ಹಣ ಮಾತ್ರವಲ್ಲ, ಪ್ರಾಣ ಕೂಡ ಕಳೆದುಕೊಂಡಳು!
ಅಭಿನಂದನೆಗಳು ನಿಮ್ಮ ಮೊಬೈಲ್ ನಂಬರ್ ಗೆ ಕೋಟಿ ರು. ಬಹುಮಾನ ಬಂದಿದೆ ಎಂಬ ಮೆಸೇಜ್ ಗಳನ್ನು ನಂಬಿ ಹಣ ಕಳೆದುಕೊಂಡ ಪ್ರಕರಣಗಳನ್ನು ಸಾಕಷ್ಟು ಭಾರಿ ಕೇಳಿದ್ದೇವೆ. ಆದರೆ ಇಂತಹುದೇ ಪ್ರಕರಣದಿಂದಾಗಿ ಮಹಿಳೆಯೊಬ್ಬಳು ಕೇವಲ ಹಣವನ್ನಷ್ಟೇ ಅಲ್ಲ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾಳೆ...

ಬೆಂಗಳೂರು: "ಅಭಿನಂದನೆಗಳು.. ನಿಮ್ಮ ಮೊಬೈಲ್ ನಂಬರ್ ಗೆ ಕೋಟಿ ರು. ಬಹುಮಾನ ಬಂದಿದೆ" ಎಂಬ ಮೆಸೇಜ್ ಗಳನ್ನು ನಂಬಿ ಹಣ ಕಳೆದುಕೊಂಡ ಪ್ರಕರಣಗಳನ್ನು ಸಾಕಷ್ಟು ಭಾರಿ ಕೇಳಿದ್ದೇವೆ. ಆದರೆ ಇಂತಹುದೇ ಪ್ರಕರಣದಿಂದಾಗಿ ಮಹಿಳೆಯೊಬ್ಬರು ಕೇವಲ ಹಣವನ್ನಷ್ಟೇ ಅಲ್ಲ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.
ಮೃತ ಮಹಿಳೆಯನ್ನು ಬೆಂಗಳೂರಿನ ವಿವೇಕಾನಂದ ರಸ್ತೆಯ ನಿವಾಸಿ 44 ವರ್ಷದ ಪಲಕ್ ವಿ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಪಲಕ್ ಅವರ ಮೊಬೈಲ್ ಗೆ ಕಳೆದ ವಾರ ಮೆಸೇಜ್ ಬಂದಿದ್ದು, ಅದರಲ್ಲಿ ಆ್ಯಂಡ್ರೂ ಎಂಬ ವ್ಯಕ್ತಿ ನೀವು 45 ಲಕ್ಷ ರು. ಗೆದ್ದಿದ್ದೀರಿ. ಡಿಡಿ ಮೂಲಕ ನಿಮ್ಮ ಹಣವನ್ನು ನಿಮಗೆ ತಲುಪಿಸುತ್ತೇವೆ ಎಂದು ಹೇಳಿದ್ದಾನೆ. ಇದನ್ನು ನಿಜ ಎಂದು ನಂಬಿದ್ದ ಪಲಕ್ ಹಣ ವರ್ಗಾವಣೆ ಕುರಿತಂತೆ ಮೆಸೇಜ್ ನಲ್ಲಿದ್ದ ನಂಬರ್ ಅನ್ನು ಸಂಪರ್ಕಿಸಿದ್ದಾರೆ.
ಆಗ ಆ್ಯಂಡ್ರ್ಯೂ ಹಣ ವರ್ಗಾವಣೆಗೆ ಕಸ್ಟಮ್ಸ್ ಮತ್ತು ಕೆಲ ಕಾನೂನು ತೊಡಕುಗಳಿದ್ದು, ಇದರ ನಿರ್ವಹಣೆಗೆ ಎಂದು ಬರೊಬ್ಬರಿ 11 ಲಕ್ಷ ಹಣವನ್ನು ಮಹಿಳೆಯಿಂದ ಪಡೆದಿದ್ದಾನೆ. ಆದರೆ ಇದಾವುದರ ಬಗ್ಗೆಯೂ ತನ್ನ ಪತಿಗೆ ತಿಳಿಸದ ಪಲಕ್, ತಾನೇ ರಹಸ್ಯವಾಗಿ ಆಂಡ್ಯ್ರೂ ನೀಡಿದ ನಾಲ್ಕು ಬ್ಯಾಂಕ್ ಖಾತೆಗಳಿಗೆ ಜೂನ್ 6ರಿಂದ 13ರವರೆಗೆ ಸುಮಾರು 11 ಲಕ್ಷ ಹಣ ಜಮಾ ಮಾಡಿದ್ದಾಳೆ. ಹಣ ತನ್ನ ಖಾತೆಗೆ ಬರುತ್ತಿದ್ದಂತೆಯೇ ಮಹಿಳೆ ತನ್ನ ಜಾಲಕ್ಕೆ ಬಿದ್ದಿದ್ದಾಳೆ ಎಂದು ತಿಳಿದ ಆ್ಯಂಡ್ರ್ಯೂ ಮತ್ತೆ ವಿವಿಧ ಕ್ಷುಲ್ಲಕ ಕಾರಣಗಳನ್ನು ನೀಡಿ ಮತ್ತೆ ಮಹಿಳೆಯಿಂದ ಹಣ ಪೀಕಲು ಯತ್ನಿಸಿದ್ದಾನೆ. ಅಲ್ಲದೆ ಮಹಿಳೆಗೆ ಕರೆ ಮಾಡಿದ್ದ ಆ್ಯಂಡ್ರ್ಯೂ ದೆಹಲಿಗೆ ಬಂದು ಡಿಡಿ (ಡಿಮಾಂಡ್ ಡ್ರಾಫ್ಟ್) ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ತನ್ನ ದೆಹಲಿಗೆ ತೆರಳಿ ಆ್ಯಂಡ್ರೂವಿನ ಮೊಬೈಲ್ ಗೆ ಕರೆ ಮಾಡಿದಾಗಲೇ ಆತನ ಅಸಲೀಯತ್ತು ತಿಳಿದು ತಾನು ಮೋಸ ಹೋಗಿದ್ದೇನೆ ಎಂದು ತಿಳಿದಿದೆ.
ಕೂಡಲೇ ಬೆಂಗಳೂರಿಗೆ ವಾಪಸಾದ ಪಲಕ್ ಮಾರನೆಯ ದಿನವೇ ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಆದರೆ ಸ್ಥಳದಲ್ಲೇ ಇದ್ದ ಅವರು ಮಕ್ಕಳು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ಕುಟುಂಬಸ್ಥರೆಲ್ಲರೂ ಹಣದ ವಿಚಾರವಾಗಿ ಪ್ರಶ್ನಿಸಿದಾಗ ಮೋಸಹೋದ ವಿಚಾರವನ್ನು ಫಲಕ್ ತಿಳಿಸಿದ್ದಾರೆ. ಕುಟುಂಬಸ್ಥರೆಲ್ಲರೂ ಆಕೆಯನ್ನು ಸಮಾಧಾನಗೊಳಿಸಿ ಪೊಲೀಸರಿಗೆ ವಿಷಯ ತಿಳಿಸುವ ಕುರಿತು ಮಾತನಾಡಿದ್ದಾರೆ. ಆದರೆ ಮಾರನೆಯ ದಿನವೇ ಪಲಕ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಫಲಕ್ ಹಣ ಜಮಾವಣೆ ಮಾಡಿದ ನಾಲ್ಕು ಖಾತೆಗಳ ವಿವರವನ್ನು ಪಡೆಯುತ್ತಿದ್ದಾರೆ. ಇನ್ನು ಮಹಿಳೆಗೆ ಮೋಸ ಮಾಡಿದ ಆ್ಯಂಡ್ರ್ಯೂ ಎಂಬ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 306, 420ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಅಂತೆಯೇ ಇಂತಹ ಬಹುಮಾನದ ಆಮಿಷ ಒಡ್ಡಿ ಬರುವ ಮೆಸೇಜ್, ಇಮೇಲ್ ಗಳನ್ನು ನಿರ್ಲಕ್ಷಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


