ಕಿರುತೆರೆ ನಟಿಯ ಗರ್ಭಿಣಿ ಮಾಡಿ ಕೈಕೊಟ್ಟ ನಟ ಜೈಲು ಪಾಲು
ಖ್ಯಾತ ಕಿರುತೆರೆ ಧಾರಾವಾಹಿ ಮೊಗ್ಗಿನ ಮನಸ್ಸು ಖ್ಯಾತಿಯ ನಟ ಮಿಥುನ್ ವಂಚನೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದಾರೆ...

ಬೆಂಗಳೂರು: ಖ್ಯಾತ ಕಿರುತೆರೆ ಧಾರಾವಾಹಿ ಮೊಗ್ಗಿನ ಮನಸ್ಸು ಖ್ಯಾತಿಯ ನಟ ಮಿಥುನ್ ವಂಚನೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದಾರೆ.
ಮೂಲಗಳ ಪ್ರಕಾರ ಕಿರುತೆರೆ ನಟಿಯೋರ್ವರನ್ನು ಮಿಥುನ್ ಮದುವೆಯಾಗುವುದಾಗಿ ನಂಬಿಸಿ ಅವರು ಗರ್ಭಿಣಿಯಾಗುವಂತೆ ಮಾಡಿ ಇದೀಗ ಅವರಿಗೆ ವಂಚನೆ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಪ್ರಸ್ತುತ ನಟ ಮಿಥುನ್ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಪ್ರಸ್ತುತ ನಟ ಮಿಥನ್ ನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ವಶಕ್ಕೆ ನೀಡಿದೆ.
ಏನಿದು ಘಟನೆ?
ಮೂಲತಃ ಬೆಂಗಳೂರಿನ ನಾಗರಬಾವಿ ಸಮೀಪದ ಮೂಡಲಪಾಳ್ಯ ನಿವಾಸಿಯಾಗಿರುವ ಮಿಥುನ್ ದಾವಣಗೆರೆ ಮೂಲದ ಮತ್ತು ಪ್ರಸ್ತುತ ಅಗ್ರಹಾರ ದಾಸರಹಳ್ಳಿಯಲ್ಲಿ ವಾಸಿಸುತ್ತಿರುವ ಕಿರುತೆರೆ ನಟಿಯನ್ನು 2015ರಲ್ಲಿ ಮದುವೆ ಸಮಾರಂಭದಲ್ಲಿ ಪರಿಚಯ ಮಾಡಿಕೊಂಡಿದ್ದರು. ಸ್ನೇಹಿತರ ಸಹಾಯದಿಂದ "ಮೊಗ್ಗಿನ ಮನಸ್ಸು" ಎಂಬ ಕಿರುತೆರೆ ಧಾರಾವಾಹಿಯಲ್ಲಿ ಇಬ್ಬರೂ ನಟಿಸಿದ್ದರು. ಈ ಇದನ್ನೇ ಬಂಡವಾಳವಾಗಿಸಿಕೊಂಡ ಮಿಥುನ್ ಹುಡುಗಿ ಮನೆಗೆ ಆಗಾಗ ಹೋಗಿ ಬರುತ್ತಿದ್ದು, ಕ್ರಮೇಣ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧದರೆಗೂ ಸಾಗಿದೆ.
ಇದೀಗ ಹುಡುಗಿ ಗರ್ಭಿಣಿ ಎಂದು ತಿಳಿದ ಮೇಲೆ ಮದುವೆಯಾಗಲು ಮಿಥುನ್ ನಿರಾಕರಿಸಿದ್ದು, ಇದರಿಂದ ಕುಪಿತಗೊಂಡ ಸಂತ್ರಸ್ತ ಹುಡುಗಿ ಹಾಗೂ ಆಕೆ ಪಾಲಕರು ರಾಜಿ ಸಂಧಾನ ನಡೆಸಿದ್ದರು. ಆಗ ಮದುವೆಗೆ ಒಪ್ಪಿಕೊಂಡಿದ್ದ ಆರೋಪಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಆಕೆಯ ಮನೆಯಲ್ಲೇ ಇರಿಸುವುದಾಗಿ ಷರತ್ತು ವಿಧಿಸಿದ್ದ. ಇದಕ್ಕೆ ಒಪ್ಪದ ಸಂತ್ರಸ್ತೆ ಜೂನ್ 22ರಂದು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 3 ತಿಂಗಳ ಗರ್ಭಿಣಿಯಾಗಿರುವುದು ಖಚಿತವಾಗಿತ್ತು. ವಿಚಾರಣೆ ವೇಳೆ ಆರೋಪಿ, ಸಂತ್ರಸ್ತೆ ಜತೆ ಸಂಬಂಧ ಇಟ್ಟುಕೊಂಡಿರುವುದನ್ನು ಒಪ್ಪಿಕೊಂಡಿದ್ದ. ಹಾಗಾಗಿ ಜೂ. 23ರಂದು ಆರೋಪಿಯನ್ನು ಬಂಧಿಸಿ ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ವಿರುದ್ಧ ಮಿಥುನ್ ಪಾಲಕರ ಕಿಡಿ
ಇದೇ ವೇಳೆ ಮಿಥುನ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ನಟಿಯ ವಿರುದ್ಧ ಮಿಥುನ್ ಪೋಷಕರು ಕಿಡಿ ಕಾರಿದ್ದು, ಸಲುಗೆಯಿಂದಿರುವ ಫೋಟೋಗಳನ್ನು ತೆಗೆಸಿಕೊಂಡು ಕೊನೆಗೆ ಅತ್ಯಾಚಾರ ಆರೋಪದ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದೇ ರೀತಿ ಹಲವರಿಗೆ ಈಕೆ ವಂಚನೆ ಮಾಡಿ ಹಣ ವಸೂಲಿ ಮಾಡಿದ್ದಾಳೆ. ಬೇರೆ ಯುವಕರ ಜತೆ ಮಾತನಾಡಿರುವ ಮೊಬೈಲ್ ಸಂಭಾಷಣೆ ಬಹಿರಂಗವಾದ ಹಿನ್ನೆಲೆಯಲ್ಲಿ ಮದುವೆಗೆ ನಿರಾಕರಿಸಿರುವುದಾಗಿ ಮಿಥುನ್‌ನ ಪಾಲಕರು ಆರೋಪ ಮಾಡಿದ್ದಾರೆ.
ಪ್ರಸ್ತುತ ಉಭಯ ಪೋಷಕರೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


