ರಾಜ್ಯ

ಕಸವನ್ನು ಬೆಂಗಳೂರಿನಿಂದ ಹೊರಗೆ ಹಾಕಬೇಡಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ನಗರದ ಕಸವನ್ನು ಹೊರವಲಯಗಳಿಗೆ ಸಾಗಿಸುವುದು ಬೇಡ, ಬೆಂಗಳೂರಿನ ಒಳಗೆಯೇ ಕಸಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ..

ಕಸವನ್ನು ಬೆಂಗಳೂರಿನಿಂದ ಹೊರಗೆ ಹಾಕಬೇಡಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಸಾಂದರಭಿಕ ಚಿತ್ರ
Published On :

ಬೆಂಗಳೂರು: ನಗರದ ಕಸವನ್ನು ಹೊರವಲಯಗಳಿಗೆ ಸಾಗಿಸುವುದು ಬೇಡ, ಬೆಂಗಳೂರಿನ ಒಳಗೆಯೇ ಕಸಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕಗೆ ಹೈಕೋರ್ಟ್ ಸೂಚಿಸಿದೆ.

ನೆರೆಯ ಗ್ರಾಮಗಳಿಗೆ ಕಸವನ್ನು ರವಾನಿಸುವ ಬದಲಿಗೆ ವಾರ್ಡ್‌ವಾರು ಮಟ್ಟದಲ್ಲೇ ವಿಂಗಡಣೆ ಮಾಡಿ ವಿಲೇವಾರಿ ಮಾಡುವಂತಹ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರತಿಯೊಬ್ಬ ನಾಗರಿಕರನ್ನೂ ಸ್ನೇಹಭಾವದಿಂದ ಉತ್ತೇಜಿಸಿ ಜಾಗೃತಗೊಳಿಸ ಬೇಕು. ಇದಕ್ಕಾಗಿ ಶ್ರಮಿಸುವ ಜನರನ್ನು ಮತ್ತು ಸಂಸ್ಥೆಗಳನ್ನು  ಬಿಬಿಎಂಪಿ ಗೌರವಿಸಬೇಕು’ ಎಂದು ನ್ಯಾಯಪೀಠ ಹೇಳಿತು.

ಬೆಂಗಳೂರು ನಗರದ ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ಬಿಬಿಎಂಪಿಯ ಅಸಮರ್ಥತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಎನ್‌. ಕುಮಾರ್‌ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ  ವಿಭಾಗೀಯ ಪೀಠ  ಗುರುವಾರ ಈ ಕುರಿತು ನಿರ್ದೇಶನ ನೀಡಿತು.

ಮಾವಳ್ಳಿಪುರ ಘನತ್ಯಾಜ್ಯ ಘಟಕದಿಂದಾಗಿ ಇಲ್ಲಿನ ಕೃಷಿ, ಜಾನುವಾರು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.  ಈ ಸಂಬಂಧ ಹೈಕೋರ್ಟ್ 2014ರ ಅಂತ್ಯದಲ್ಲಿ ಬಿಬಿಎಂಪಿಗೆ ಹಲವು ನಿರ್ದೇಶನಗಳನ್ನೂ ನೀಡಿತ್ತು. ಇದರ ಅನುಸಾರ ಇಲ್ಲಿನ ನೀರು, ಕೃಷಿ ಚಟುವಟಿಕೆ, ಜಾನುವಾರುಗಳು ಮತ್ತು ಸಾರ್ವಜನಿಕರ ಆರೋಗ್ಯದ ರಕ್ಷಣೆಗಾಗಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿತ್ತು.

ಏತನ್ಮಧ್ಯೆ ಈ ಘಟಕವನ್ನು ಮುಚ್ಚಲು ಬಿಬಿಎಂಪಿ ಮುಂದಾಗಿದ್ದ ಪರಿಣಾಮ ಖಾಸಗಿ ಗುತ್ತಿಗೆದಾರರು ಸಿವಿಲ್‌ ದಾವೆ ದಾಖಲು ಮಾಡಿದ್ದರು. ಈ ಸಿವಿಲ್‌ ದಾವೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವಿದೆ. ಇದೀಗ ಹೈಕೋರ್ಟ್‌ ಈ ಪ್ರಕರಣವನ್ನು ಒಂದು ತಿಂಗಳಿನಲ್ಲಿ ಪೂರೈಸುವಂತೆ ಆದೇಶಿಸಿದೆ.

ಹೊಸದಾಗಿ ಆಯ್ಕೆಯಾಗಿರುವ ಬಿಬಿಎಂಪಿಯ 198 ವಾರ್ಡ್‌ಗಳ ಕಾರ್ಪೊರೇಟರುಗಳು ತಂತಮ್ಮ ವಾರ್ಡ್‌ಗಳಲ್ಲಿ ಉತ್ಸಾಹಿ ವಾರ್ಡ್‌ ಸಮಿತಿಗಳನ್ನು ನೇಮಕ ಮಾಡುವಂತೆ ನೋಡಿಕೊಳ್ಳಬೇಕು’ ಎಂದೂ  ಬಿಬಿಎಂಪಿಗೆ ಸೂಚಿಸಲಾಗಿದೆ.ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಬೃಹನ್‌ಮುಂಬೈ ಮಹಾನಗರಪಾಲಿಕೆ ಮಾದರಿಯಲ್ಲಿ ‘ಸ್ವಚ್ಛತೆ ನಿರ್ವಹಣಾ ಮಾರ್ಷಲ್‌’ಗಳನ್ನು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್‌ ಬಿಬಿಎಂಪಿಗೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.