ಕಾಶ್ಮೀರ ಕುರಿತು ಪ್ರತಿಭಟಿಸಿದರೆ ಬಂಧಿಸುವುದಾಗಿ ಪೊಲೀಸರ ಬೆದರಿಕೆ: ಹೋರಾಟಗಾರರು
ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತಂತೆ ನಗರದಲ್ಲಿ ಪ್ರತಿಭಟನೆ ನಡೆಸಲು ಮುಂದಾದರೆ ಬಂಧಿಸುವುದಾಗಿ ಪೊಲೀಸರು...

ಬೆಂಗಳೂರು: ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತಂತೆ ನಗರದಲ್ಲಿ ಪ್ರತಿಭಟನೆ ನಡೆಸಲು ಮುಂದಾದರೆ ಬಂಧಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆಂದು ಹೋರಾಟಗಾರರು ಆರೋಪ ವ್ಯಕ್ತಪಡಿಸಿದ್ದಾರೆ.
ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಈಗಾಗಲೇ ಹಿಂಸಾಚಾರ ಭುಗಿಲೆದ್ದಿದ್ದು, ಈ ವರೆಗೂ 42 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೆಲ ಚಳುವಳಿಗಾರರು ಹಾಗೂ ಸಂಘಟನೆಗಳು ಕಾಶ್ಮೀರ ಹಿಂಸಾಚಾರವನ್ನು ಖಂಡಿಸಿ ನಗರದಲ್ಲಿಯೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ, ಪ್ರತಿಭಟನೆಗೆ ಅನುಮತಿ ನೀಡಲು ನಿರಾಕರಿಸಿರುವ ಪೊಲೀಸರು ಪ್ರತಿಭಟಿಸಿದರೆ ಬಂಧನಕ್ಕೊಳಪಡಿಸಿರುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಕಾಶ್ಮೀರ ಹಿಂಸಾಚಾರ ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಲು ಈ ಹಿಂದೆ ಪೊಲೀಸರು ನಮಗೆ ಅನುಮತಿ ನೀಡಿದ್ದರು. ಅಲ್ಲದೆ, ಪ್ರತಿಭಟನೆಗೆ ನಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಪೊಲೀಸರೇ ಉಲ್ಟಾ ಹೊಡೆಯುತ್ತಿದ್ದಾರೆಂದು ಹೋರಾಟಗಾರರು ಹೇಳಿಕೊಂಡಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಈಗಾಗಲೇ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿಯೇ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರು ಹೇಳಿದ್ದಾರೆ. ಪ್ರತಿಭಟನೆ ನಡೆಸುವುದು ನಮ್ಮ ಪ್ರಜಾಪ್ರಭುತ್ವ ಹಕ್ಕಾಗಿದೆ ಎಂದು ವಕೀಲೆ ಗ್ರೀಷ್ಮಾ ಅರುಣಾ ರಾಯ್ ಅವರು ಹೇಳಿದ್ದಾರೆ.
ಸಂಘಟನೆಗಳು ಪ್ರತಿಭಟನೆ ನಡೆಸಲು ಅನುಮತಿ ಕೇಳಿತ್ತು. ಆದರೆ, ಅರ್ಜಿಯಲ್ಲಿ ಯಾವ ಯಾವ ಸಂಘಟನೆಗಳು ಪಾಲ್ಗೊಳ್ಳಲಿದೆ, ಎಷ್ಟು ಮಂದಿ ಪ್ರತಿಭಟನಾಕಾರರು ನಿರತರಾಗಲಿದ್ದಾರೆ ಎಂಬುದರ ಕುರಿತ ಅಗತ್ಯ ಮಾಹಿತಿಗಳನ್ನು ನೀಡಿಲ್ಲ ಹೀಗಾಗಿ ಅನುಮತಿಯನ್ನು ತಿರಸ್ಕರಿಸಲಾಯಿತು ಡಿಸಿಪಿ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ.
ಮೂಲತಃ ಕಾಶ್ಮೀರದವರಾಗಿದ್ದು ಕಳೆದ 3 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಯೂರಿರುವ ತನ್ವೀರ್ ಅಜ್ಸಿ ಮಾತನಾಡಿ, ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾದರೆ, ನಮ್ಮನ್ನು ಬಂಧಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ. ಕಳೆದ 11 ದಿನಗಳಲ್ಲಿ 42 ಮಂದಿ ಕಾಶ್ಮೀರದಲ್ಲಿ ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಾವು ತೀರ್ಮಾನಿಸಿದ್ದೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


