ಪ್ರಧಾನಿ ಮೋದಿ ಮಹದಾಯಿ ಚರ್ಚೆಗೆ ಇನ್ನೂ ಸಮಯ ನೀಡಿಲ್ಲ: ಸಿಎಂ ಸಿದ್ದರಾಮಯ್ಯ ಅಸಮಾಧಾನ
ಮಹದಾಯಿ ವಿವಾದ ಸಂಬಂಧ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ತಮಗೆ ಸಮಯವನ್ನೇ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮಹದಾಯಿ ವಿವಾದ ಸಂಬಂಧ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ತಮಗೆ ಸಮಯವನ್ನೇ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹದಾಯಿ ವಿವಾದ ಪರಿಷ್ಕರಣೆ ಸಂಬಂಧ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಸಮಯಾವಕಾಶವನ್ನೇ ನೀಡಿಲ್ಲ. ರಾಜ್ಯದ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ಕೆಲಸವನ್ನು ರಾಜ್ಯದ ಬಿಜೆಪಿ ನಾಯಕರು ಮಾಡುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಒಕ್ಕೂಟ ವ್ಯವಸ್ಥೆ ಎಂದರೇನು ಎಂದು ತಿಳಿದಿಲ್ಲ ಎನಿಸುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಮಸ್ಯೆಯನ್ನು ತಿಳಿಸುವ ಕಾರ್ಯಕ್ಕೆ ಅವರು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಮಹದಾಯಿ ವಿವಾದ ಕುರಿತಂತೆ ಚರ್ಚಿಸಲು ನಿನ್ನೆ ಪ್ರಧಾನಿ ಬಳಿ ಸಮಯ ಕೇಳಿದ್ದೆವು. ಆದರೆ ಸಂಸತ್ ಕಲಾಪದ ನೆಪವೊಡ್ಡಿ ಮತ್ತೆ ಸಮಯ ನೀಡಿಲ್ಲ. ಮುಂದಿನ ದಿನಗಳಲ್ಲಿ ಸಮಯ ನೀಡುವುದಾಗಿ ತಿಳಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ರಾಜ್ಯಗಳಿಗೆ ನೀಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಆಗ ಅಂದಿನ ಪ್ರಧಾನಿಯಾಗಿದ್ದ ಡಾ.ಮನ್‌ಮೋಹನ್ ಸಿಂಗ್ ಅವರು 1500 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದ್ದರು. ಅದರಲ್ಲಿ ಎಷ್ಟು ಹಣ ಕರ್ಚು ಮಾಡಿದ್ದರು ಎನ್ನುವ ವಿವರವನ್ನೂ ಕೇಳಿರಲಿಲ್ಲ ಎಂದರು. 14ನೇ ಹಣಕಾಸು ಆಯೋಗದ ಅನ್ವಯ ರಾಜ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


