ರಾಜ್ಯ

ಪೊಲೀಸ್ ನೇಮಕಾತಿ ವಿವರ ನೀಡುವಂತೆ ಇಲಾಖೆಗೆ "ಹೈ" ಸೂಚನೆ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಕೊರತೆ ಕುರಿತು ಕಿಡಿ ಕಾರಿರುವ ಹೈಕೋರ್ಟ್, ಇಲಾಖೆಯ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದೆ..

ಪೊಲೀಸ್ ನೇಮಕಾತಿ ವಿವರ ನೀಡುವಂತೆ ಇಲಾಖೆಗೆ "ಹೈ" ಸೂಚನೆ
ಕರ್ನಾಟಕ ಹೈಕೋರ್ಟ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಕೊರತೆ ಕುರಿತು ಕಿಡಿ ಕಾರಿರುವ ಹೈಕೋರ್ಟ್, ಇಲಾಖೆಯ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡುವಂತೆ ಸೂಚನೆ  ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು, ಅಡ್ವಕೇಟ್ ಜನರಲ್ ಮಧುಸೂದನ್ ಆರ್ ನಾಯ್ಕ್ ಅವರಿಗೆ ಈ ಬಗ್ಗೆ ನಿರ್ದೇಶನ ನೀಡಿದ್ದು,  ನೇಮಕಾತಿ ಪ್ರಕ್ರಿಯೆಯ ರೂಪುರೇಷೆ, ಪ್ರತೀ ವರ್ಷ ನಿವೃತ್ತಿಯಾಗುತ್ತಿರುವ ಅಧಿಕಾರಗಳ ಸಂಖ್ಯೆ ಮತ್ತು ನೇಮಕಾತಿಯಾಗ ಬೇಕಾದ ಸಂಖ್ಯೆಗಳ ಸಂಪೂರ್ಣ ವಿವರ ನೀಡುವಂತೆ ಹೇಳಿದ್ದಾರೆ.  ಅಲ್ಲದೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಅಂದು ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಮಧುಸೂದನ್ ಆರ್ ನಾಯ್ಕ್ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಇದೇ ವೇಳೆ ನಿನ್ನೆಯ ವಿಚಾರಣೆಗೆ ಗೈರು ಹಾಜರಾದ ಅಡ್ವಕೇಟ್ ಜನರಲ್ ಮಧುಸೂದನ್ ಆರ್ ನಾಯ್ಕ್ ಅವರ ವಿರುದ್ಧ ನ್ಯಾಯಮೂರ್ತಿಗಳು ಅಸಮಾಧಾನವ ವ್ಯಕ್ತಪಡಿಸಿದ್ದು, ದೇಶದ ಇತರೆ  ರಾಜ್ಯಗಳ ಪೊಲೀಸ್ ಇಲಾಖೆಗೆ ಹೋಲಿಕೆ ಮಾಡಿದರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಮೂಲಭೂತ ಕೊರತೆ ಇದೆ. ಪ್ರಮುಖವಾಗಿ ಮಹಿಳಾ ಪೊಲೀಸರ ಕೊರತೆ ಇಲಾಖೆಯಲ್ಲಿ  ಎದ್ದು ಕಾಣುತ್ತಿದೆ ಎಂದು ಹೇಳಿದರು.

"ಸರ್ಕಾರ ಇಲಾಖೆಗೆ ನೀಡಿರುವ 96,748 ಸಿಬ್ಬಂದಿ ಸಾಮರ್ಥ್ಯದ ಪೈಕಿ ಪ್ರಸ್ತುತ 72,778 ಸಿಬ್ಬಂದಿಗಳು ಮಾತ್ರ ಇದ್ದು, 23,970 ಸಿಬ್ಬಂದಿಗಳ ನೇಮಕಾತಿಯಾಗಬೇಕಿದೆ. ಇನ್ನು ಪ್ರಸ್ತುತ ಕಾರ್ಯ  ನಿರ್ವಹಿಸುತ್ತಿರುವ 72,778 ಸಿಬ್ಬಂದಿಗಳ ಪೈಕಿ 4,355 ಮಂದಿ ಮಾತ್ರ ಮಹಿಳಾ ಸಿಬ್ಬಂದಿಗಳು ಇದ್ದು, ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳ ವ್ಯಾಪಕ ಕೊರತೆ ಇದೆ. ಇಂತಹ ಅಂಕಿಅಂಶಗಳನ್ನು  ಇಟ್ಟುಕೊಂಡು ಇಲಾಖೆಯನ್ನು ಹೇಗೆ ನಿರ್ವಹಿಸಲು ಸಾಧ್ಯ ಎಂದು ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ಪ್ರಶ್ನಿಸಿದರು.

ಅಂತೆಯೇ ಇತ್ತೀಚೆಗೆ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ನಡೆದ ಗಾರ್ಮೆಂಟ್ ಉದ್ಯೋಗಿಗಳ ಪ್ರತಿಭಟನೆಯನ್ನು ಉದಾಹರಿಸಿದ ನ್ಯಾಯಮೂರ್ತಿಗಳು, ಅಸ್ಥಿಪಂಜರದಂತಿರುವ  ಮಹಿಳಾ ಪೊಲೀಸ್ ವರ್ಗವನ್ನು ಇಂತಹ ದೊಡ್ಡ ಪ್ರತಿಭಟನೆಗಳಾದಾಗ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.  ಇದೇ ವೇಳೆ ಅಡಿಷನಲ್ ಪಬ್ಲಿಕ್  ಪ್ರಾಸಿಕ್ಯೂಟರ್ ವಿಜಯ್ ಕುಮಾರ್ ಮಜಾಜೆ ಅವರು ತಮ್ಮ ವಾದ ಮಂಡಿಸುತ್ತಾ, ಡಿಜಿ-ಐಜಿಪಿ ಓಂ ಪ್ರಕಾಶ್ ಅವರು ಸಲ್ಲಿಕೆ ಮಾಡಿರುವ ದಾಖಲೆಗಳು ಅಪೂರ್ಣವಾಗಿದ್ದು, ಖಾಲಿ ಉಳಿದಿರುವ  ಸ್ಥಾನಗಳ ಪರಿಪೂರ್ಣ ಮಾಹಿತಿ ಇಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಈ ಹಿಂದೆ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ಇಲಾಖೆ ಸಲ್ಲಿಸಿದ್ದ ಅಫಿಡವಿಟ್ ಅನ್ನು ತಿರಸ್ಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.