ನಿಷೇಧ ಹೇರಿ ತಿಂಗಳಾದ್ರೂ ಎಗ್ಗಿಲ್ಲದೇ ನಡೆಯುತ್ತಿದೆ ಪ್ಲಾಸ್ಟಿಕ್ ವಹಿವಾಟು!
ಪ್ಲಾಸ್ಟಿಕ್ ಬ್ಯಾಗ್ ಗಳಿಗೆ ನಿಷೇಧ ಹೇರಿ ತಿಂಗಳೇ ಕಳೆದರೂ ನಗರದಲ್ಲಿ ಮಾತ್ರ ಪ್ಲಾಸ್ಟಿಕ್ ಬ್ಯಾಗ್ ಗಳ ಮಾರಾಟ ಮಾತ್ರ ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ...

ಬೆಂಗಳೂರು: ಪ್ಲಾಸ್ಟಿಕ್ ಬ್ಯಾಗ್ ಗಳಿಗೆ ನಿಷೇಧ ಹೇರಿ ತಿಂಗಳೇ ಕಳೆದರೂ ನಗರದಲ್ಲಿ ಮಾತ್ರ ಪ್ಲಾಸ್ಟಿಕ್ ಬ್ಯಾಗ್ ಗಳ ಮಾರಾಟ ಮಾತ್ರ ಯಾವುದೇ ಎಗ್ಗಿಲ್ಲದೇ ನಡೆಯುತ್ತಿದೆ.
ಸರ್ಕಾರವೇನೋ ಪ್ಲಾಸ್ಟಿಕ್ ಕವರ್, ಕಪ್, ಪ್ಲೇಟ್ ಗಳು ಮತ್ತು ಪ್ಲಾಸ್ಟಿಕ್ ಧ್ವಜ, ಬ್ಯಾನರ್ ಗಳು ಬಂಟಿಂಗ್ಸ್ ಗಳು ಮತ್ತು ಮದುವೆ ಸಮಾರಂಭಗಳಲ್ಲಿ ಊಟದ ಟೇಬಲ್ ಮೇಲೆ ಬಳಕೆ ಮಾಡುವ ಟೇಬಲ್ ರೋಲ್ ಗಳನ್ನು ನಿಷೇಧಿಸಿ ತಿಂಗಳು ಕಳೆದರೂ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಈ ವರೆಗೂ ಅವುಗಳ ಬಳಕೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಇಂದಿಗೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಕವರ್ ಗಳು ಮತ್ತು ಕಪ್ ಗಳು ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳು ದೊರೆಯುತ್ತಿವೆ.
ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿನಿತ್ಯ ಬಿಬಿಎಂಪಿ ಸಂಗ್ರಹಿಸುವ ಸುಮಾರು 4000 ಟನ್ ಕಸದಲ್ಲಿ ಸುಮಾರು 1300ಟನ್ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. 40 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ವಸ್ತುಗಳನ್ನು ಬಿಬಿಎಂಪಿ ನಿಷೇಧಿಸಿದೆ. ಆದರೂ ಬಿಬಿಎಂಪಿಯಲ್ಲಿರುವ ಒಟ್ಟು 188 ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿಗೆ ಪ್ರತಿನಿತ್ಯ ಟನ್ ಗಟ್ಟಲೆ ತೆಳುವಾದ ಪ್ಲಾಸ್ಟಿಕ್ ತ್ಯಾಜ್ಯ ಬಂದು ಸೇರುತ್ತಿವೆ. ಹೀಗಾಗಿ ಬಿಬಿಎಂಪಿ ಕೇವಲ ನಾಮಕಾವಾಸ್ತೆಗಾಗಿ ಪ್ಲಾಸ್ಟಿಕ್ ನಿಷೇಧ ಹೇರಿದೆ ಎನ್ನುವ ಆರೋಪಗಳು ಕೂಡ ಕೇಳಿಬರುತ್ತಿವೆ.
ಇನ್ನು ಈ ಬಗ್ಗೆ ಮಾತನಾಡಿರುವ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಸಮಿತಿಯ ಸದಸ್ಯರಾಗಿರುವ ಎನ್ ಎಸ್ ರಮಾಕಾಂತ್ ಅವರು, ಪ್ಲಾಸ್ಟಿಕ್ ಮೇಲಿನ ನಿಷೇಧದ ಪರಿಣಾಮ ನಗರದಲ್ಲೆಡೆ ಸಂಪೂರ್ಣವಾಗಿ ಆಗಿಲ್ಲದೇ ಇದ್ದರೂ, ಹೆಚ್ ಎಸ್ ಆರ್ ಲೇಔಟ್, ಕೋರಮಂಗಲ, ಯಲಹಂಕ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ನಿಷೇಧವಾಗಿದೆ. ಇದಕ್ಕೆ ಅಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಪ್ರಮಾಣ ಗಣನೀಯವಾಗಿ ಇಳಿದಿರುವುದೇ ಸಾಕ್ಷಿ ಎಂದು ಹೇಳಿದ್ದಾರೆ.
ನಗರದ ಉಳಿದ ಭಾಗಗಲ್ಲಿಯೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿತ್ತಾದರೂ, ಸಿಬ್ಬಂದಿಗಳ ಕೊರತೆಯಿಂದಾಗಿ ಆ ಕಾರ್ಯವಾಗಿಲ್ಲ. ಬೆಂಗಳೂರಿನಲ್ಲಿ 198 ವಾರ್ಡ್ ಗಳಿದ್ದು, ಇದಕ್ಕೆ ಕೇವಲ 125 ಹೆಲ್ತ್ ಇನ್ಸ್ ಪೆಕ್ಟರ್ ಗಳಿದ್ದಾರೆ. ಕೆಲ ಪ್ರದೇಶಗಳಲ್ಲಿ ಇಂಜಿನಿಯರ್ ಗಳಿಗೆ ಅಧಿಕಾರ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಖಂಡಿತಾ ಈ ಬಗ್ಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಗುಜರಾತ್ ನಿಂದ ಕಳ್ಳಸಾಗಣೆ
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ವಿದ್ದರೂ, ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕೈಗಾರಿಕಗೆಗಳಿರುವ ಗುಜರಾತ್ ನಿಂದ ಪ್ಲಾಸ್ಟಿಕ್ ಕವರ್ ಗಳು ನಗರ ಪ್ರವೇಶ ಮಾಡುತ್ತಿದ್ದು. ನಿಷೇಧದ ಬಳಿಕ ಕೆಲಸ ಕಳೆದುಕೊಂಡ ಕಾರ್ಮಿಕರು ಈ ದಂಧೆಯಲ್ಲಿ ತೊಡಗಿರುವ ಶಂಕೆ ಇದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ರಮಾಕಾಂತ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


