ಹೃದ್ರೋಗ ಬಿಟ್ಟರೆ ಭಾರತೀಯರು ಹೆಚ್ಚು ಬಲಿಯಾಗುವ ರೋಗ ಕ್ಯಾನ್ಸರ್!
ಭಾರತದಲ್ಲಿ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಗೆ ಎರಡನೇ ಸ್ಥಾನ!

ನವದೆಹಲಿ: ಭಾರತದಲ್ಲಿ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಗೆ ಎರಡನೇ ಸ್ಥಾನ!. ಮೊದಲನೇ ಸ್ಥಾನ ಹೃದ್ರೋಗ, ನಂತರದ ಸ್ಥಾನದಲ್ಲಿ ಕ್ಯಾನ್ಸರ್ ಇದೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ. ಕ್ಯಾನ್ಸರ್ ನಲ್ಲಿ ಜಠರ, ಪಿತ್ತಜನಕಾಂಗ, ಅನ್ನನಾಳದ ಕ್ಯಾನ್ಸರ್ ಅತಿ ಹೆಚ್ಚು ಭಾರತೀಯರನ್ನು ಕೊಲ್ಲುತ್ತಿದೆ. ಕೇವಲ ಎರಡು ದಶಕಗಳ ಅಂತರದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವು ಭಾರತದಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಜಾಮಾ ಆಂಕಾಲಜಿ ಎಂಬ ವೈದ್ಯ ಜರ್ನಲ್‌ನಲ್ಲಿ ಪ್ರಕಟವಾಗಿರುವ ಕ್ಯಾನ್ಸರ್ ವರದಿಯೊಂದು ಉಲ್ಲೇಖಿಸಿದೆ.
1990ರ ದಶಕದಲ್ಲಿ 6.24 ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿ 4.26 ಲಕ್ಷ ಮಂದಿ ಸಾವನ್ನಪ್ಪಿದ್ದರು. 2013ರ ಹೊತ್ತಿಗೆ ಈ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡುಬಂದಿದ್ದು 11.7 ಲಕ್ಷ ಮಂದಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಕ್ಯಾನ್ಸರ್ ಗೆ 6.75 ಲಕ್ಷ ಮಂದಿ ಪ್ರಾಣ ತೆರುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕ್ಯಾನ್ಸರ್ ಪೀಡಿತರಿಗೆ 3 ಹಾಗೂ 4ನೇ ಹಂತದ ಹೊತ್ತಿಗೆ ಕ್ಯಾನ್ಸರ್ ಇದೆ ಎಂಬುದು ರೋಗಿಗೆ ಗೊತ್ತಾಗುತ್ತಿದೆ. ಇದರಿಂದಾಗಿ ರೋಗಿ ಚಿಕಿತ್ಸೆ ಪಡೆಯುವುದು ವಿಳಂಬವಾಗುತ್ತಿದ್ದು, ಇದರಿಂದ ಸಾಯುವ ಸಂಭವ ಹೆಚ್ಚುತ್ತದೆ ಎಂದು ಅಧ್ಯಯನದ ಸಹ ಲೇಖಕರಾಗಿರೂ ಆಗಿರುವ ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ ಮತ್ತು ಅಮೆರಿಕದ ಸಿಯಾಟ್ಲನ ವಾಷಿಂಗ್ಟನ್ ವಿವಿಯ ಪ್ರಾಧ್ಯಾಪಕ ಡಾ. ಲಲಿತ್ ದಂಡೋನಾ ತಿಳಿಸಿದ್ದಾರೆ.
ಅದೇ ವೇಳೆ ಭಾರತದಲ್ಲಿ ಬಾಯಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಿದೆ. 1990ರಲ್ಲಿ ಕೇವಲ 34 ಸಾವಿರ ಮಂದಿಯಷ್ಟಿದ್ದ ರೋಗಿಗಳ ಸಂಖ್ಯೆ ಈಗ 84,700ಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ 56,786 ಪ್ರಕರಣಗಳಿಂದ 1,51,304 ಪ್ರಕರಣಗಳಿಗೆ ಹೆಚ್ಚಾಗಿದೆ.
188 ದೇಶಗಳಲ್ಲಿ 28 ಕ್ಯಾನ್ಸರ್ ಸಂಘಟನೆಗಳು ನಡೆಸಿರುವ ವಿಶ್ಲೇಷಣೆ ಆಧರಿಸಿ ಸಿದ್ಧಪಡಿಸಿರುವ ಈ ವರದಿ ಪ್ರಕಾರ, ವಿಶ್ವಾದ್ಯಂತ 2013ನೇ ಸಾಲಿನಲ್ಲಿ 1.5 ಕೋಟಿ ಕ್ಯಾನ್ಸರ್ ರೋಗಿಗಳಿದ್ದಾರೆ. 82 ಲಕ್ಷ ಮಂದಿ ಮಾರಕ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


