ಕೀ ಹೋಲ್ ಕಮಾಲ್

ನಿಮಗೆ ಮೊಣಕಾಲು ನೋವಿನ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ಆಗಿದೆ. ಆದರೂ, ನೋವು ಕಡಿಮೆಯಾಗಿಲ್ಲ. ಚಿಕಿತ್ಸೆಯ ನಂತರ ಪಡುವ ಈ ಯಾತನೆಗೆ ಇನ್ನು ಮುಂದೆ ಶಾಶ್ವತ ಬ್ರೇಕ್ ಬೀಳಲಿದೆ. ಉತ್ತಮ ತಂತ್ರಜ್ಞಾನವುಳ್ಳ ಕ್ಯಾಮೆರಾ ಮತ್ತು ನುರಿತ ವೈದ್ಯರ ಸಹಾಯದಿಂದ ಮೊಣಕಾಲು ಶಸ್ತ್ರ ಚಿಕಿತ್ಸೆ ಮತ್ತಷ್ಟು ಸುಲಭವಾಗಿದೆ.
ಬೇರ್ಪಟ್ಟ ಮೊಣಕಾಲು ಮೂಳೆಯನ್ನು ಕ್ಯಾಮೆರಾ ಸಹಾಯದಿಂದ ಕೀ ಹೋಲ್ ಶಸ್ತ್ರ ಚಿಕಿತ್ಸೆಯ ಮೂಲಕ ರೋಗಿಗೆ ಹೆಚ್ಚು ಆಯಾಸವಾಗದಂತೆ ಜೋಡಿಸುವಲ್ಲಿ ಭಾರತೀಯ ವೈದ್ಯಲೋಕ ಯಶಸ್ವಿಯಾಗಿದೆ.
ಕೀ ಹೋಲ್ ಶಸ್ತ್ರಚಿಕಿತ್ಸೆ
ಶಸ್ತ್ರ ಚಿಕಿತ್ಸೆಗೊಳಗಾಗುವ ಭಾಗವನ್ನು ಸಂಪೂರ್ಣವಾಗಿ ತೆಗೆದು, ಶಸ್ತ್ರ ಚಿಕಿತ್ಸೆ ಮಾಡುವುದು ಸಾಮಾನ್ಯ. ಆದರೆ ಕೀ ಹೋಲ್ ಶಸ್ತ್ರ ಚಿಕಿತ್ಸೆಯಲ್ಲಿ ಎರಡು ರಂಧ್ರಗಳನ್ನು ಕೊರೆದು ಆ ಭಾಗದಲ್ಲಿ ಕ್ಯಾಮೆರಾ ಬಳಸಲಾಗುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳು ವೈದ್ಯರಿಗೆ ನಿಖರ ಮಾಹಿತಿ ನೀಡಿ ಚಿಕಿತ್ಸೆ ಮಾಡಲು ನೆರವಾಗುತ್ತವೆ. ಪಾದದ ಕೀಲು, ಮೊಣಕಾಲು ಮತ್ತು ಭುಜ ಭಾಗದ ಶಸ್ತ್ರಚಿಕಿತ್ಸೆಗೆ ಕೀ ಹೋಲ್ ತಂತ್ರಜ್ಞಾನ ಬಳಸಲಾಗುವುದು. ಈ ರೀತಿಯ ಶಸ್ತ್ರ ಚಿಕಿತ್ಸೆಯಲ್ಲಿ ಲೋಹ ಬಳಸದೆ ಬಯೋ ಕಾಂಪೊಸಿಟ್ ತಿರುಪನ್ನು ಬಳಸಲಾಗುತ್ತದೆ. ಕ್ರಮೇಣ ಈ ತಿರುಪು ಮೂಳೆಯಾಗಿ ಪರಿವರ್ತನೆಗೊಳ್ಳುತ್ತದೆ.
ಸಾಮಾನ್ಯವಾಗಿ ಫುಟ್‌ಬಾಲ್, ರಗ್ಬಿಯಂಥ ಆಟಗಾರರಿಗೆ ಈ ರೀತಿಯ ಸಮಸ್ಯೆ ಹೆಚ್ಚು. ಆಡುವ ವೇಳೆ ಪರಸ್ಪರ ಢಿಕ್ಕಿಯಾದಾಗ ಮೂಳೆ ಮೇಲಿನ ಒತ್ತಡ ಹೆಚ್ಚಾಗಿ, ಜೋಡಣೆಯಾದ ಮೂಳೆ ಬೇರ್ಪಡುತ್ತದೆ. ಆ ಸಮಯದಲ್ಲಿ ಶೀಘ್ರವಾಗಿ ಗುಣಮುಖರಾಗಲು ಕೀ ಹೋಲ್ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
ಅತಿ ಶೀಘ್ರ ಗುಣಮುಖ
ಕೀ ಹೋಲ್ ಶಸ್ತ್ರಚಿಕಿತ್ಸೆಗೆ ಒಳಗಾದವರು ಕೇವಲ 20- 30 ದಿನಗಳಲ್ಲಿ ಯಥಾಸ್ಥಿತಿಗೆ ಮರಳಲು ಈ ತಂತ್ರಜ್ಞಾನ ಸಹಕಾರಿ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಈ ಚಿಕಿತ್ಸೆಗೆ ಮೊರೆಹೋಗುತ್ತಿದ್ದಾರೆ. ಭಾರತದ ಕೆಲವೇ ಕೆಲವು ಆಸ್ಪತ್ರೆಯಲ್ಲಿ ಉತ್ತಮ ತಂತ್ರಜ್ಞಾನವುಳ್ಳ ಈ ಸೌಲಭ್ಯ ದೊರಯಲಿದೆ. ಶಸ್ತ್ರ ಚಿಕಿತ್ಸೆಗೆ ಕೇವಲ 1 ಗಂಟೆ ಹಿಡಿಯಲಿದ್ದು, ರು. 70 ಸಾವಿರ ವೆಚ್ಚ ತಗುಲಲಿದೆ.
ಜೋಶಿಗೆ ಕೀ ಹೋಲ್ ಚಿಕಿತ್ಸೆ
ಕೆಲವು ದಿನಗಳ ಹಿಂದಷ್ಟೇ ಖ್ಯಾತ ನಟ ವಿನಾಯಕ್ ಜೋಶಿ ಚಿತ್ರೀಕರಣದ ವೇಳೆ ಬಿದ್ದು ಮೊಣಕಾಲು ನೋವಿನಿಂದ ನರಳುತ್ತಿದ್ದರು. ಅಪೊಲೋ ವೈದ್ಯರ ತಂಡ ನಡೆಸಿದ ಶಸ್ತ್ರಚಿಕಿತ್ಸೆ ಫಲಕಾರಿಯಾಗಿದೆ. ಶಸ್ತ್ರ ಚಿಕಿತ್ಸೆ ಎಂದಾಕ್ಷಣ ನಾವು ಹೆಚ್ಚು ಭಯಪಡುತ್ತೇವೆ. ಆದರೆ ಒಂದು ಚೂರು ನೋವಾಗದಂತೆ ಅಪೊಲೋ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆಂದು ನಟ ವಿನಾಯಕ್ ಜೋಷಿ ಅನುಭವವನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಬಂದ ದೇಣಿಗೆಯನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಬಳಸುವುದಾಗಿ ಪ್ರಾಮಿಸ್ ಮಾಡಿದ್ದಾರಂತೆ.
= ಪವನ್ ವಶಿಷ್ಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


