ಮುಟ್ಟಾಟ

ಮುಟ್ಟು ನಿಲ್ಲುವಿಕೆ ನೈಸರ್ಗಿಕ ಕ್ರಿಯೆ. ಇದು ಮಹಿಳೆಯರಲ್ಲಿನ ಫಲವತ್ತತೆ ಅಂತ್ಯಗೊಳ್ಳುವುದರ ಲಕ್ಷಣ. 40 ರಿಂದ 50 ವರ್ಷ ವಯಸ್ಸಿನ ಒಳಗೆ ಯಾವ ಸಂದರ್ಭದಲ್ಲಿ ಬೇಕಾದರೂ ಮುಟ್ಟು ಶಾಶ್ವತವಾಗಿ ನಿಲ್ಲಬಹುದು. ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ 48 ವರ್ಷಗಳವರೆಗೂ ಋತುಸ್ರಾವ ಕಂಡುಬರುತ್ತದೆ.
ಮುಟ್ಟು ಶಾಶ್ವತವಾಗಿ ನಿಂತ ಬಳಿಕ ನಿದ್ರಾಹೀನತೆ, ದೇಹದ ಬಿಸಿ ಏರುವಿಕೆ, ಸುಸ್ತು ಅಥವಾ ಉದ್ವೇಗ ಹಾಗೂ ಬೇಸರ ಅಥವಾ ಏನನ್ನೋ ಕಳೆದುಕೊಂಡ ರೀತಿಯ ಅನುಭವಗಳಾಗುತ್ತವೆ. ಆದ್ದರಿಂದಲೇ ಮುಟ್ಟು ಶಾಶ್ವತವಾಗಿ ನಿಂತ ಸಂದರ್ಭಗಳಲ್ಲಿ ಮಹಿಳೆಯರಿಗೆ ವಿಶೇಷ ರೀತಿಯ ಆರೈಕೆಯ ಅಗತ್ಯವಿರುತ್ತದೆ. ವಿಪರ್ಯಾಸವೆಂದರೆ ಬಹುತೇಕ ಮಹಿಳೆಯರು ಇಂಥ ಸಂದರ್ಭಗಳಲ್ಲಿ ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸದೆ ನಿರ್ಲಕ್ಷಿಸಿ ಬಿಡುತ್ತಾರೆ.
ಋತುಬಂಧ ನಿಂತ ಬಳಿಕ ಕೆಲ ವೈದ್ಯಕೀಯ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ಋತುಬಂಧದ ಅಂತಿಮ ಹಂತದಲ್ಲಿರುವ ಮಹಿಳೆಯರಿಗೆ ಇಂದು ವಿವಿಧ ಹಾರ್ಮೋನ್ ಥೆರಪಿಗಳು ಲಭ್ಯವಿದೆ. ಆದರೆ, ಮುಖ್ಯ ವಿಚಾರ ಎಂದರೆ ಈ ಕುರಿತಾಗಿ ವೈದ್ಯರ ಬಳಿ ಚರ್ಚಿಸಲು ಎಂದಿಗೂ ಅಂಜಿಕೊಳ್ಳಬಾರದು.
ವ್ಯಾಯಾಮ ಮಾಡಿ
ನಿಮ್ಮಲ್ಲಿನ ಈಸ್ಟ್ರೋಜೆನ್ ಗುಣಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಹೃದಯ ಹಾಗೂ ರಕ್ತನಾಳ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿಯೇ ಋತುಚಕ್ರ ನಿಂತ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವಂತಹ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಆರೋಗ್ಯ ಭರಿತ ಆಹಾರ ಸೇವನೆ, ನಿತ್ಯ ವ್ಯಾಯಾಮಗಳ ಮೂಲಕ ದೇಹ ತೂಕ ಕಾಪಾಡಿಕೊಳ್ಳುವುದು ಅಗತ್ಯ. ಒಂದು ವೇಳೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದಲ್ಲಿ ಅದನ್ನು ಕಡಿಮೆಗೊಳಿಸಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಮೂಳೆ ಬಗ್ಗೆ ಎಚ್ಚರ
ಮುಟ್ಟು ಶಾಶ್ವತವಾಗಿ ನಿಂತ ನಂತರದ ಕೆಲ ವರ್ಷಗಳಲ್ಲಿ ಶೀಘ್ರಗತಿಯಲ್ಲಿ ಮೂಳೆ ಸವೆತದ ಸಮಸ್ಯೆ ಎದುರಾಗಬಹುದು. ಬೆನ್ನು ನೋವು, ಸೊಂಟ ನೋವು ಹಾಗೂ ಬೆನ್ನು ಮೂಳೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ವಿಟಮಿನ್ ಡಿ ಹೆಚ್ಚು ಸೇವಿಸುವುದು, ಸೂರ್ಯನ ಬೆಳಕಿಗೆ ಮೈ ಒಡ್ಡುವುದರಿಂದ ಶರೀರಕ್ಕೆ ಬೇಕಾದ ಅಗತ್ಯ ಪ್ರಮಾಣದ ಕ್ಯಾಲ್ಶಿಯಂ ಪಡೆದುಕೊಳ್ಳಬಹುದು.
ಮೂತ್ರದ ಅವಸರ
ಯೋನಿ ಭಾಗದಲ್ಲಿನ ಸ್ನಾಯುಗಳು ತಮ್ಮ ಹಿಗ್ಗುವಿಕೆಯ ಗುಣ ಕಳೆದುಕೊಳ್ಳುವುದರಿಂದ ಇದ್ದಕ್ಕಿದ್ದಂತೆಯೇ ಮೂತ್ರಕ್ಕೆ ಹೋಗುವಂತಾಗುತ್ತದೆ. ನಿಯಂತ್ರಿಸಲಾಗದ ರೀತಿಯಲ್ಲಿ ಈ ಸಮಸ್ಯೆ ಕಾಡುತ್ತದೆ. ಇದರಿಂದ ಸೋಂಕುಗಳಿಗೂ ತುತ್ತಾಗಬಹುದು. ಕೆಲ ನಿರ್ದಿಷ್ಟ ವ್ಯಾಯಾಮಗಳ ಮೂಲಕ ಇಂತಹ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ.
ಲೈಂಗಿಕ ಕ್ರಿಯೆ
ಮುಟ್ಟು ನಿಂತ ಬಳಿಕ ಯೋನಿ ಭಾಗದ ಸ್ನಾಯುಗಳು ಹಿಗ್ಗುವಿಕೆಯ ಗುಣವನ್ನು ಕಳೆದುಕೊಳ್ಳುತ್ತವೆ ಹಾಗೂ ತೇವಾಂಶವನ್ನು ಕೂಡಾ ಕಳೆದುಕೊಳ್ಳುವುದರಿಂದ ಲೈಂಗಿಕ ಕ್ರಿಯೆಯ ವೇಳೆ ರಕ್ತಸ್ರಾವ ಸಂಭವಿಸುತ್ತದೆ. ಇದರಿಂದಾಗಿ ನಿಮ್ಮ ಲೈಂಗಿಕಾಸಕ್ತಿ ದೂರಾವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನೀರಿನ ಅಂಶದಿಂದ ಕೂಡಿರುವಂತಹ ಮಾಯಿಶ್ಚರೈಸರ್ ಅಥವಾ ಲ್ಯೂಬ್ರಿಕೆಂಟ್‌ಗಳ ಬಳಕೆ ಉಪಯುಕ್ತ.
ತೂಕ ಹೆಚ್ಚುವಿಕೆ
ಋತುಚಕ್ರ ನಿಲ್ಲುತ್ತಿದ್ದಂತೆಯೇ ಬಹುತೇಕ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಆರಂಭವಾಗುತ್ತದೆ. ಹೀಗಾಗಿ ತೂಕ ನಿಯಂತ್ರಿಸಲು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ.
(ಲೇಖಕರು ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಒಬಿಜಿ ವಿಭಾಗದ ಮುಖ್ಯಸ್ಥರು. ಸಂಪರ್ಕ: 080-49694969)
ಯಾವ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು?
ಋತುಚಕ್ರದ ಅಂತಿಮ ಹಂತದಲ್ಲಿ ಹಾಗೂ ಅದನ್ನು ದಾಟಿದ ಬಳಿಕ ಆಗಿಂದ್ದಾಗ್ಗೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ. ಆರೋಗ್ಯ ವಿಚಾರವಾಗಿ ಮುನ್ನೆಚ್ಚರಿಕೆ ವಹಿಸಿದಲ್ಲಿ ಬಹುತೇಕ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ವೈದ್ಯರು ಕೆಲ ತಪಾಸಣೆಗೆ ಒಳಪಡುವಂತೆ ಸಲಹೆ ನೀಡುತ್ತಾರೆ. ಸ್ತನ ಹಾಗೂ ಅಸ್ಥಿ ಪರೀಕ್ಷೆ, ಮ್ಯಾಮೊಗ್ರಫಿ, ಥೈರಾಯ್ಡ್ ಪರೀಕ್ಷೆಗಳು ಮೊದಲಾದ ತಪಾಸಣೆಗಳಿಗೆ ಒಳಪಡುವಂತೆ ಸೂಚಿಸುತ್ತಾರೆ. ಋತುಬಂಧ ನಿಂತ ಬಳಿಕ ಯೋನಿ ಭಾಗದಲ್ಲಿ ರಕ್ತಸ್ರಾವಕ್ಕೆ ಹಲವು ಕಾರಣಗಳಿರಬಹುದು. ಇಂಥ ತೊಂದರೆ ಕಾಣಿಸಿಕೊಂಡರೆ ವೈದ್ಯಕೀಯ ಸಲಹೆ ಪಡೆದುಕೊಳ್ಳುವುದು ಉತ್ತಮ. ಋತುಬಂಧ ನಿಂತ ಬಳಿಕ ಮಹಿಳೆಯರು ಆತಂಕಕ್ಕೆ ಒಳಗಾಗುವುದು ಸಾಮಾನ್ಯ ಸಂಗತಿಯಾಗಿದೆ. ಈ ಸಮಸ್ಯೆಯನ್ನೂ ಸೂಕ್ತ ರೀತಿಯ ವೈದ್ಯಕೀಯ ನೆರವಿನಿಂದ ನಿಭಾಯಿಸಲು ಸಾಧ್ಯವಿದೆ.
= ಡಾ. ಪ್ರಭಾ ರಾಮಕೃಷ್ಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


