ಪ್ರೆಗ್ನೆಂಟ್ ಪಾಲಿಸಿ
ಮನೆಗೆ ಹೊಸ ಕುಡಿ ಕಾಲಿಡಲಿದೆ ಎಂಬ ಸುದ್ದಿ ತಿಳಿದಾಕ್ಷಣ ನಿಮ್ಮಲ್ಲಾಗುವ ಸಂಭ್ರಮ, ಕಾತರ ಅಷ್ಟಿಷ್ಟಲ್ಲ. ಅದಾಗಲೇ...

ಮನೆಗೆ ಹೊಸ ಕುಡಿ ಕಾಲಿಡಲಿದೆ ಎಂಬ ಸುದ್ದಿ ತಿಳಿದಾಕ್ಷಣ ನಿಮ್ಮಲ್ಲಾಗುವ ಸಂಭ್ರಮ, ಕಾತರ ಅಷ್ಟಿಷ್ಟಲ್ಲ. ಅದಾಗಲೇ ಮಗುವಿನ ಭವಿಷ್ಯದ ಬಗ್ಗೆ ನಿಮ್ಮ ಕನಸೂ ಚಿಗುರೊಡೆದಿರುತ್ತದೆ. ಗಂಡು ಅಥವಾ ಹೆಣ್ಣು ಹುಟ್ಟಿದರೆ ಏನು ಹೆಸರಿಡಬೇಕು? ಯಾವ ಶಾಲೆಗೆ ಸೇರಿಸಬೇಕು? ಮುಂದಿನ ಭವಿಷ್ಯ ಹೇಗೆ ರೂಪಿಸಬೇಕು? ಅದಕ್ಕಾಗಿ ಎಷ್ಟು ಹಣ ಕೂಡಿಡಬೇಕು ಎಂದು ಮನಸ್ಸಿನಲ್ಲೇ ಗುಣಾಕಾರ, ಭಾಗಾಕಾರ ಹಾಕುತ್ತಿರುತ್ತೀರಿ. ಆದರೆ ಈ ಹುಟ್ಟುವ ಮಗು ಗರ್ಭದಲ್ಲಿ ಹೇಗೆ ಬೆಳೆಯಬೇಕು? ಏನೇನು ಮುಂಜಾಗ್ರತೆ ವಹಿಸಬೇಕು ಎಂಬಲ್ಲೇ ಕೆಲವರು ಎಡವುತ್ತಾರೆ. ನಿಮಗೆ ಗೊತ್ತಿರಲಿ, ನೀವು ಮಾಡುವ ಮೊದಲ ಅಪರಾಧವೇ ಇದು. ಅದು ಹೇಗೆ ಅಂತೀರಾ? ಗರ್ಭದಲ್ಲಿ ನಿಮ್ಮ ಮಗುವಿನ ಬೆಳವಣಿಗೆ, ಆರೋಗ್ಯ ಸ್ಥಿತಿ, ತಾಯಿಯ ದೇಹಸ್ಥಿತಿಯ ಮೇಲಿನ ಪರಿಣಾಮ ಎಂಬಿತ್ಯಾದಿ ಅಂಶಗಳು ಪ್ರಮುಖವಾಗಿರುತ್ತವೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಅನುಸರಿಸಲೇಬೇಕಾದ ಮಹತ್ವದ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ...
ಗರ್ಭ ಧರಿಸಿದ ತಕ್ಷಣ ನೀವು ಮಾಡಬೇಕಾದ ಮೊದಲ ಕೆಲಸ ವೈದ್ಯರನ್ನು ಭೇಟಿಯಾಗುವುದು.
ವೈದ್ಯರೊಂದಿಗೆ ಮಾತನಾಡಿ ನೀವು ತೆಗೆದುಕೊಳ್ಳಬೇಕಾದ ಔಷಧ, ಮಾತ್ರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು.
ಗರ್ಭವತಿ ಮದ್ಯ ಸೇವನೆ, ಧೂಮಪಾನ ಮಾಡುತ್ತಿದ್ದರೆ ಅದನ್ನು ತತ್‌ಕ್ಷಣದಲ್ಲೇ ಬಿಡಬೇಕು.
ನೆನಪಿಡಿ, ವೈದ್ಯರಲ್ಲಿ ಯಾವುದೇ ವಿಷಯವನ್ನು ಮುಚ್ಚಿಡಬೇಡಿ. ಅದು ಈ ಮುಂಚೆ ನೀವು ತೆಗೆದುಕೊಳ್ಳುತ್ತಿದ್ದ ಔಷಧಗಳ ಬಗ್ಗೆ ಮೊದಲೇ ತಿಳಿಸಿಬಿಡಿ. ಮತ್ತು ನಂತರದ ದಿನಗಳಲ್ಲಿ ಅವುಗಳನ್ನು ಸೇವಿಸಬೇಕೇ, ಬೇಡವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇಂಥ ಔಷಧಗಳು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.
ಈ ಸಂದರ್ಭದಲ್ಲಿ ನೀವು ಸೇವಿಸಬೇಕಾದ ಪೌಷ್ಟಿಕ ಆಹಾರದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.
ಸಂಬಂಧಿಕರಲ್ಲಿ ಮದುವೆ ಆಗಿದ್ದರೆ ಅನುವಂಶೀಯತೆ ಕುರಿತು ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ತಪ್ಪದೆ ವೈದ್ಯರಿಂದ ಸಲಹೆ ಪಡೆದು ಮುನ್ನಡೆಯುವುದು ಒಳಿತು.
ಗರ್ಭಿಣಿಗೆ ಹೆಚ್ಚಿನ ಕ್ಯಾಲೊರಿಗಳ ಅವಶ್ಯ ಇರುತ್ತದೆ. ಏಕೆಂದರೆ ನಿಮ್ಮ ದೇಹ ರಚನೆಯಲ್ಲಿ ಆಗುವ ವ್ಯತ್ಯಾಸಕ್ಕೆ ಹೆಚ್ಚಿನ ಪೌಷ್ಟಿಕ ಆಹಾರ ಅವಶ್ಯ. ಇದಕ್ಕೆ ಸೂಕ್ತ ಆಹಾರ ಮತ್ತು ನೀರೂ ಅಷ್ಟೇ ಮುಖ್ಯ.
ಆಲೂಗಡ್ಡೆಯ ರೀತಿ ಸುಮ್ಮನೆ ಕುಳಿತಲ್ಲೇ ಕೂರಬೇಡಿ. ವೈದ್ಯರು ಹೇಳುವ ತನಕ ನಿರಂತರ ಚಟುವಟಿಕೆಯಲ್ಲಿರಿ. ವಾಯುವಿಹಾರ, ಈಜುವುದು, ನೃತ್ಯ ಮಾಡುವುದು ಸೇರಿದಂತೆ ಹಲವಾರು ಮನೆಗೆಲಸಗಳನ್ನು ಮಾಡಿಕೊಳ್ಳಿ. ಇದು ನಿಮ್ಮ ದೇಹವನ್ನು ಗಟ್ಟಿಯಾಗಿಸುವುದರ ಜತೆಗೆ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಆದರೆ ಕಷ್ಟಕರವಾದ ದೈಹಿಕ ಚಟುವಟಿಕೆಗಳಾದ ಕ್ರೀಡೆ, ತೀರಾ ಇಳಿಜಾರು ಪ್ರದೇಶದಲ್ಲಿ ಸಂಚಾರ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್‌ಳಲ್ಲಿರುವ ಮೋಜಿನ ಆಟ ಒಳಿತಲ್ಲ.
ಇದು ನಿಮಗೆ ನೀರು ಕುಡಿಯುವ ಸಮಯ. ಎಷ್ಟು ನೀರು ಸೇವಿಸುತ್ತೀರೋ ಅಷ್ಟು ಒಳ್ಳೆಯದು. ಕೊನೆ ಪಕ್ಷ ದಿನಕ್ಕೆ 10 ಗ್ಲಾಸು ನೀರನ್ನಾದರೂ ಸೇವಿಸಿ.
ಊಟವಾದ ತಕ್ಷಣ ತಪ್ಪದೇ ಹಲ್ಲುಜ್ಜಿ. ನಿಮ್ಮ ವಸಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಈ ಸಮಯದಲ್ಲಿ ನಿಮ್ಮ ಶಕ್ತಿ ಹೆಚ್ಚು ವ್ಯಯವಾಗುತ್ತದೆ. ಹೀಗಾಗಿ ನಿಮಗೆ ತೀವ್ರ ದಣಿವಾಗಿದೆ ಎನಿಸಿದರೆ ವಿಶ್ರಾಂತಿ ಪಡೆಯಿರಿ.
ಗರ್ಭ ಧರಿಸಿದ ನಂತರ ನಿಮಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆನ್ನಿಸಿದರೆ ನಿರೋಧ್ ಬಳಕೆ ಕಡ್ಡಾಯ. ಏಕೆಂದರೆ, ನಿಮಗೆ ಮತ್ತು ನಿಮ್ಮ ಮಗುವಿಗೆ ಯಾವುದೇ ಸೋಂಕು ಬಾರದ ರೀತಿ ಇದು ತಡೆಯುತ್ತದೆ.
- ರಾಸಾಯನಿಕ ವಸ್ತುಗಳಿಂದ ದೂರವಿರಿ. ಹೇರ್ ಡೈಗಳಿಂದ ಆದಷ್ಟು ದೂರ ಇರುವುದು ಒಳಿತು. ಆದಷ್ಟು ನಿಮ್ಮ ಕೂದಲಿನ ಆರೋಗ್ಯವನ್ನು ಇವುಗಳ ಬಳಕೆಯಿಲ್ಲದೆ ಕಾಪಾಡಿಕೊಳ್ಳಿ.
- ಕಾಲಕಾಲಕ್ಕೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರ ಮೂಲಕ ನಿಮ್ಮ ಹಾಗೂ ಮಗುವಿನ ಬೆಳವಣಿಗೆ, ಆರೋಗ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿರಿ. ಅದಕ್ಕೆ ಸೂಕ್ತ ಆಹಾರ ಮತ್ತು ಔಷಧ ಸೇವಿಸಿ.
- ಈ ಸಮಯದಲ್ಲಿ ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಿ. ಅಲ್ಲದೆ ಆದಷ್ಟು ಬಿಸಿಯ ಆಹಾರವನ್ನು ಸೇವಿಸಬೇಕು. ಒಮ್ಮೆಲೆ ಅಧಿಕ ಪ್ರಮಾಣದ ಆಹಾರ ಸೇವಿಸದೆ ಮೇಲಿಂದ ಮೇಲೆ ತಿನ್ನುತ್ತಿರಿ. ಕರಿದ, ಕೊಬ್ಬಿನ, ಎಣ್ಣೆ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.
- ಗುಣಾತ್ಮಕವಾಗಿಯೇ ಯೋಚಿಸಿ. ನಿಮ್ಮನ್ನು ಪ್ರೀತಿಸುವ ಹಾಗೂ ಕಾಳಜಿ ವಹಿಸುವವರ ಜೊತೆಯೇ ಇರಿ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯ ಸ್ಥಿತಿ ಮೇಲೆ ಉತ್ತಮ ಪರಿಣಾಮ ಬೀರುವ ಜೊತೆಗೆ ಮಗುವಿನ ಜನನಕ್ಕೂ ಅನುಕೂಲವಾಗುತ್ತದೆ.
ವೀರೇಶ ಜಿ. ಮಠ
mathvg@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


