Walk ಶಕ್ತಿ
ನಡೆದರೆ ಅದು ವ್ಯಾಯಾಮವೇ? ಈ ಪ್ರಶ್ನೆ ಎಲ್ಲರಿಗೂ ಬಂದಿರಬಹುದು. ಹೌದು. ನಡೆಯೋದು...

ನಡೆದರೆ ಅದು ವ್ಯಾಯಾಮವೇ?
ಈ ಪ್ರಶ್ನೆ ಎಲ್ಲರಿಗೂ ಬಂದಿರಬಹುದು. ಹೌದು. ನಡೆಯೋದು ಅತಿ ಸುಲಭ ವ್ಯಾಯಾಮದ ರೀತಿ. ನಡಿಗೆ ಹೇಗಿರಬೇಕು? ತ್ವರಿತವಾದ ನಡಿಗೆ. ದೊಡ್ಡ ದೊಡ್ಡ ಉಸಿರು ತಗೊಳ್ತಾ, ಎರಡೂ ಕೈಗಳನ್ನು ಎದೆಯ ಮಟ್ಟದವರೆಗೆ ಬೀಸುತ್ತಾ ನಡೆದರೆ ಅದು ಖಂಡಿತ ವ್ಯಾಯಾಮ. ಸ್ನೇಹಿತರೊಡನೆ ಮಾತಾಡಿಕೊಂಡು ನಡೆದರೆ ಅಥವಾ ಕಿವಿಗೆ ಫೋನ್ ಸಿಕ್ಕಿಸಿಕೊಂಡು ಹಾಡು, ಸಂಗೀತ, ಕೇಳ್ಕೊಂಡು ನಡೆದರೆ ಬೋರ್ ಆಗೋದಿಲ್ಲ. ನಡೆಯುವ ಸಮಯ ಕಳೆದದ್ದು ಗೊತ್ತಾಗುವುದಿಲ್ಲ. ಸಾಕಿದ ನಾಯಿಯ ಜೊತೆ ನಡೆದರೆ ಇನ್ನೂ ಉತ್ತಮ. ನಾಯಿಯ ವೇಗಕ್ಕೆ ನಾವು ನಡೆಯುವಂತಾಗುತ್ತದೆ. ನಡೆಯುವುದಕ್ಕೆ ಸರಿಹೊಂದುವ ಟ್ರ್ಯಾಕ್ಸ್ ಮತ್ತು ಶೂ ಧರಿಸಿದ್ದರೆ ಇನ್ನೂ ಉತ್ತಮ.
ಮರಗಿಡಗಳು ಹೆಚ್ಚಾಗಿ ಇರೋ ಸ್ಥಳಗಳಲ್ಲಿ ನಡೆದರೆ ಒಳ್ಳೆಯದು. ಗಿಡಗಳು ಇಂಗಾಲವನ್ನು ತಮ್ಮೊಳಗೆ ತಗೊಂಡು ಆಮ್ಲಜನಕವನ್ನು ಹೊರಗೆ ಹಾಕಿರುತ್ತವೆ. ಅದಕ್ಕೆ ಬೆಳಗಿನ ಜಾವ ಗಿಡಗಳ ಸುತ್ತಮುತ್ತ ನಡೆದರೆ, ಬಹಳಷ್ಟು ಆಮ್ಲಜನಕ ಸಿಗುತ್ತದೆ ನಮ್ಮ ದೇಹಕ್ಕೆ. ನಡಿಗೆಯ ಅಂತರವನ್ನು ದಿನೇ ದಿನೇ ಕ್ರಮೇಣವಾಗಿ ಹೆಚ್ಚಿಸಿಕೊಳ್ಳಬೇಕು. ಒಂದೇ ದಿವ್ಸ ಹೆಚ್ಚು ನಡೆಯೋದು, ಮತ್ತೆ... ಮೂರ್ನಾಲ್ಕು ದಿನ ನಡೆಯದೆ ಇರೊದು ಸರಿಯಲ್ಲ. ಕ್ರಮದಿಂದ ನಡೆಯುವುದು ಮುಖ್ಯವಾಗುತ್ತದೆ.
ನಡೆದರೆ ಲಾಭಗಳೇನು?
ತೀವ್ರ ನಡಿಗೆಯಿಂದ ಸ್ನಾಯುಗಳಲ್ಲಿ ಚಲನೆಯ ಕ್ರಮ ಹೆಚ್ಚಾಗಿ, ಜೀವಕೋಶಗಳಿಗೆ ಸಕ್ಕರೆ ಹೆಚ್ಚು ಬೇಕಾಗುತ್ತದೆ. ಇವುಗಳಿಗೆ ಸಕ್ಕರೆ ಒದಗಿಸಲು... ಇನ್ಸುಲಿನ್ ಹಾರ್ಮೋನ್ಸ್ ಸಕ್ಕರೆಯನ್ನು ರಕ್ತದಿಂದ ಜೀವಕೋಶಗಳಿಗೆ ತಳ್ಳುತ್ತದೆ. ಹೀಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಮಧುಮೇಹಕ್ಕೆ ನಡೆಯೋದು ಅತ್ಯವಶ್ಯ. ಅಂತೆಯೇ ನಡೆದಾಗ... ಜೀವಕೋಶಗಳೆಗೆ ಹೆಚ್ಚು ಹೆಚ್ಚು ಆಮ್ಲಜನಕ ಬೇಕಾಗುತ್ತದೆ. ಇದನ್ನು ಒದಗಿಸಲು ರಕ್ತ ಎಲ್ಲ ರಕ್ತನಾಳಗಳಲ್ಲೂ ಉತ್ತಮವಾಗಿ ಚಲಿಸಿ ಇದರಿಂದ ರಕ್ತದೊತ್ತಡ ಕೂಡ ಸುಧಾರಿಸುತ್ತದೆ.
ದೇಹದ ತೂಕ ಜಾಸ್ತಿ ಇದ್ದರೆ, ತೀವ್ರ ನಡಿಗೆಯಿಂದ ಕೊಬ್ಬಿನಂಶ ಕರಗಿ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿನ ಹಾರ್ಮೋನ್ ವ್ಯತ್ಯಾಸಗಳೂ ಸರಿಹೋಗುತ್ತವೆ.
ವೇಗವಾಗಿ ನಡೀಬೇಕಾ?
ಎಲ್ಲರೂ ಬೇಡ. ವೃದ್ಧರು ಅವರವರ ಶಕ್ತಿಗನುಸಾರವಾಗಿ ನಡೆಯಬೇಕು. ಮುಖ್ಯವಾಗಿ ನಾವು ನಮ್ಮ ದೇಹವನ್ನು ಅರಿತುಕೊಳ್ಳಬೇಕು. ಎಷ್ಟು ನಡೆದರೆ ಉತ್ತಮವೆಂದು. ತೀವ್ರ ಉತ್ಸಾಹದಿಂದ ಬಹಳ ಹೆಚ್ಚು ಕಾಲ ನಡೆಯೊದು ಒಳ್ಳೆದಲ್ಲ. ನಿಗದಿತವಾಗಿ ನಡೆಯಬೇಕು, ಸ್ವಲ್ಪ ಹೊತ್ತು ಕೂರಬೇಕು. ಸಕ್ಕರೆ ಕಾಯಿಲೆ ಇರೋವ್ರು, ಅಕಸ್ಮಾತ್ ರಕ್ತದ ಸಕ್ಕರೆ ಅಂಶ ಕಮ್ಮಿಯಾಗುವ ಸಾಧ್ಯತೆ ಇರೋದ್ರಿಂದ ಬಳಿಯಲ್ಲಿ ಚಾಕ್ಲೇಟ್ ಇಟ್ಕೊಂಡಿದ್ರೆ, ನಡೆದಾಗ ತಲೆ ಸುತ್ತು ಅಥವಾ ಸುಸ್ತಾದರೆ, ಉಪಯೊಗಕ್ಕೆ ಬರುತ್ತದೆ.
ಮತ್ತೆ ನಡೆಯೊದರಿಂದ ದೇಹದಲ್ಲಿನ ಎಲ್ಲ ಗಂಟುಗಳೂ ಚಲನಕ್ರಮಕ್ಕೆ ಒಗ್ಗುತ್ತವೆ. ಸ್ನಾಯುಗಳು ಕೆಲಸ ಮಾಡಿದಷ್ಟು, ನಮ್ಮ ದೇಹ ಎಂಡಾರ್ಫಿನ್ಸ್ ಎನ್ನುವ ರಾಸಾಯನಿಕ ಉತ್ಪತ್ತಿ ಮಾಡುತ್ತದೆ. ಈ ಎಂಡಾರ್ಫಿನ್ ನಮ್ಮ ಮೆದುಳಲ್ಲಿ ನೋವನ್ನು ತಡೆಗಟ್ಟುವ ಕೆಲಸ ಮಾಡಿ, ದೇಹದಲ್ಲಿ ಹೆಚ್ಚು ಉತ್ಸಾಹ ಮತ್ತು ಚೈತನ್ಯ ತುಂಬುತ್ತದೆ. ನಡೆಯೋದ್ರಿಂದ ಹೊಸ ಪಾಸಿಟಿವ್ ಶಕ್ತಿ ಖಂಡಿತ.
-ಡಾ. ರೂಪಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


