ಓಹೋ ಹಿಮಾಲಯ!
ಹಿಮಾಲಯ ಎಂಬ ಹೆಸರು ಕೇಳಿದಾಕ್ಷಣ ನೆನಪಾಗುವುದು 'ಹಿಮಾಲಯ ಹರ್ಬಲ್ ಹೆಲ್ತ್ ಕೇರ್'. ...

ಹಿಮಾಲಯ ಎಂಬ ಹೆಸರು ಕೇಳಿದಾಕ್ಷಣ ನೆನಪಾಗುವುದು 'ಹಿಮಾಲಯ ಹರ್ಬಲ್ ಹೆಲ್ತ್ ಕೇರ್'.
ಹಿಮಾಲಯದಲ್ಲಿರುವ ಶಿಖರದ ಎತ್ತರದಂತೆ ಗಿಡಮೂಲಿಕೆಗಳಿಂದ ತಯಾರಿಸಿದ ಉತ್ಪನ್ನಗಳಲ್ಲಿ ಹಿಮಾಲಯ ಹರ್ಬಲ್ ಹೆಲ್ತ್ ಕೇರ್ ಕಂಪನಿ ಹೆಸರುವಾಸಿ ಆಗಿದೆ. ಹಿಮಾಲಯ ಉತ್ಪನ್ನಗಳಿಗೆ ವಿಶ್ವದೆಲ್ಲೆಡೆ ಬಹು ಬೇಡಿಕೆ ಇದೆ. 85 ದೇಶಗಳಿಗೆ ರಫ್ತಾಗುವ ಹಿಮಾಲಯ ಉತ್ಪನ್ನಗಳು ತಯಾರಾಗುವುದು ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಮಕಾಲಿಯಲ್ಲಿ! ಸುಸಜ್ಜಿತ ಕಂಪನಿಯಲ್ಲಿ ಗಿಡಮೂಲಿಕೆಗಳ ಪರಿಷ್ಕರಣೆಯಿಂದ ಉತ್ಪನ್ನಗಳ ಪ್ಯಾಕಿಂಗ್ ಆಗುವಲ್ಲಿಯವರೆಗೆ ವ್ಯವಸ್ಥೆ ಇದೆ. ಭಾರತ ಮತ್ತು ಇತರೆ ದೇಶಗಳಿಂದ ಕಾಂಟ್ರಾಕ್ಟ್ ಮೂಲಕ ಗಿಡ ಮೂಲಿಕೆಗಳನ್ನು ಇಲ್ಲಿಗೆ ತರಿಸಲಾಗುತ್ತದೆ. ಕುಟ್ಟಿ ಪುಡಿ ಮಾಡಿ ಕಳಿಸಿದ ಗಿಡಮೂಲಿಕೆಗಳನ್ನು ಮೊದಲಿಗೆ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ. ತಯಾರಿಸಲ್ಪಡುವ ಉತ್ಪನ್ನಗಳಿಗೆ ಎಷ್ಟು ಪ್ರಮಾಣದ ಮೂಲಿಕೆಗಳು ಬೇಕು ಎಂಬುದನ್ನು ಅಳೆಯಲಾಗುತ್ತದೆ. ಅಲ್ಲಿ ಒಂದು ಗ್ರಾಂನ ವ್ಯತ್ಯಾಸವೂ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಹಿಮಾಲಯ ಕಂಪನಿಯಿಂದ ದೇಶಕ್ಕೆ ಯಾವುದೇ ಉತ್ಪನ್ನಗಳು ರಫ್ತಾಗುವುದಿಲ್ಲ. ಇಲ್ಲಿನ ವಿಶೇಷ ಎಂದರೆ ಎಲ್ಲಾ ಉತ್ಪನ್ನಗಳು ವಿದೇಶಕ್ಕೇ ರಫ್ತಾಗುತ್ತವೆ. ಭಾರತಕ್ಕಾಗಿ ಬೇರೆಡೆ ವಿಶೇಷ ಕಂಪನಿ ಚಾಲ್ತಿಯಲ್ಲಿದೆ.
ವ್ಯವಸ್ಥಿತ ನಿರ್ವಹಣೆ
ಪ್ರತಿ ಹಂತಕ್ಕೂ ಸುಸಜ್ಜಿತ ಯಂತ್ರಗಳು ಕೆಲಸ ನಿರ್ವಹಿಸುತ್ತವೆ. ಕಂಪನಿಯಲ್ಲಿ 400 ಕೆಲಸಗಾರರಿದ್ದು ಬಹಳ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಾರೆ. ಕಂಪನಿಯ ಒಳಗೆ ಪ್ರವೇಶಿಸಲು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಾರೆ. ಕಾಲುಗಳಿಗೆ ಪ್ಲಾಸ್ಟಿಕ್ ತೊಡಿಸಲಾಗುತ್ತದೆ. ಒಳಪ್ರವೇಶಿಸುತ್ತಿದ್ದಂತೆ ಮೊದಲ ಪ್ರವೇಶ ದ್ವಾರದಲ್ಲಿ ವೇಗವಾಗಿ ಬೀಸುವ ಫ್ಯಾನ್ ಅಳವಡಿಸಲಾಗಿರುತ್ತದೆ. ಮುಂದೆ ಹೋದಂತೆ ಕೈಗಳನ್ನು ಸ್ವಚ್ಛಗೊಳಿಸಿ ಒಣಗಿಸಿ ಅವರು ನೀಡುವ ವಸ್ತ್ರವನ್ನು ಧರಿಸಿದ ಮೇಲಷ್ಟೇ ಕೆಲಸ ನಿರ್ವಹಿಸುವ ಯಂತ್ರಗಳಿರುವಲ್ಲಿಗೆ ಪ್ರವೇಶ ನೀಡುತ್ತಾರೆ. ಅಷ್ಟು ವ್ಯವಸ್ಥಿತವಾಗಿ ಭೇಟಿ ಮಾಡುವವರಿಗೆ ಧರಿಸಲು ಹೇಳುವುದು ಯಾಕೆಂದರೆ ಸಣ್ಣ ದೂಳಿನ ಕಣವೂ ಒಳಪ್ರವೇಶಿಸಬಾರದು ಎಂಬ ಕಾರಣಕ್ಕೆ. ವೇಗವಾಗಿ ಬೀಸುವ ಗಾಳಿ ಕೂದಲ ನಡುವೆ ಇರಬಹುದಾದ ಧೂಳಿನ ಕಣವನ್ನು ಓಡಿಸುತ್ತದೆ. ತಲೆಗೂದಲು ಬೀಳದಂತೆ ಕಾಲಿನ ಧೂಳು ಒಳಪ್ರವೇಶಿಸದಂತೆ ವಿಶೇಷ ಕವಚಗಳನ್ನು ನೀಡುತ್ತಾರೆ.
50ಕ್ಕೂ ಹೆಚ್ಚು ಉತ್ಪನ್ನಗಳು!
50ಕ್ಕೂ ಹೆಚ್ಚು ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಕ್ಯಾಪ್ಸೂಲ್‌ಗಳ ತಯಾರಿಕ ಘಟಕಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ದ್ರಾವಣಗಳ ತಯಾರಿಕೆಗೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಉತ್ಪನ್ನಗಳನ್ನು ಮೊದಲಿಗೆ ಬಾಮ್, ದ್ರಾವಣ, ಕ್ಯಾಪ್ಸೂಲ್ ಹೀಗೆ ಪ್ರತ್ಯೇಕಿಸಲಾಗುತ್ತದೆ. ಪ್ಯಾಕಿಂಗ್‌ಗೆ ಬೇಕಿರುವ ವಸ್ತುಗಳ ಸಂಗ್ರಹಣೆಗೂ ಪ್ರತ್ಯೇಕ ವ್ಯವಸ್ಥೆಯನ್ನೇ ಕಲ್ಪಿಸಲಾಗಿರುತ್ತದೆ. ಯಾವುದೇ ಎರಡು ವಸ್ತುಗಳನ್ನು ಒಂದೆಡೆ ಶೇಖರಿಸಿಡಲಾಗುವುದಿಲ್ಲ.
1930ರಲ್ಲಿ ಪ್ರಾರಂಭಿಸಲಾದ ಹಿಮಾಲಯ ಮುಂದುವರಿದಂತೆ ತನ್ನ ಉತ್ಪನ್ನಗಳನ್ನು ಹಂತ ಹಂತವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಮಾರುಕಟ್ಟೆ ವಿಭಾಗದಲ್ಲಿ ನಂ.1 ಆಗುವ ಒತ್ತಾಸೆಯಿಂದ, ಎಲ್ಲ ಜನರಿಗೂ ಭಾರತ ಗಿಡಮೂಲಿಕೆಯ ಪರಿಚಯವಾಗಬೇಕು ಎಂಬ ಕಾರಣದಿಂದ ತನ್ನ ಉತ್ಪನ್ನಗಳ ಮೇಲೆ ವಿಶೇಷ ಕಾಳಜಿ ವಹಿಸಿ ನಿರ್ವಹಿಸುತ್ತಿದೆ.
ಹಿಮಾಲಯ ಎಂದಾಕ್ಷಣ ಅರಿವಿಗೆ ಬರುವುದು ಫೇಸ್ ವಾಶ್! ಆದರೆ ಉತ್ತಮ ಆರೋಗ್ಯಕ್ಕೆ ಪರಿಣಾಮಕಾರಿಯಾಗಬಲ್ಲ ಪ್ರತಿ ಉತ್ಪನ್ನಗಳಿಗೂ ಹಿಮಾಲಯ ಜೀವ ನೀಡುತ್ತಿದೆ. ಹಿಮಾಲಯ ಕಂಪನಿಯ ಮುಖ್ಯಸ್ಥರಿಗೆ ಹೆಮ್ಮೆಯ ವಿಚಾರ ಎಂದರೆ ಭಾರತದ ಸಸ್ಯಮೂಲಿಕೆಗಳಿಗೆ ವಿಶ್ವದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿದೆ. ಆದರೆ ಭಾರತದಲ್ಲಿ ಮಾತ್ರ ಸಸ್ಯಮೂಲಿಕೆಗಳಿಂದ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ಇಲ್ಲ. ಸರ್ಕಾರ ಹಿಮಾಲಯದ ವಿಚಾರವಾಗಿ ಯಾವುದೇ ರೀತಿಯಲ್ಲಿ ಸಹಕಾರ ನೀಡದಿರುವುದು ಬೇಸರ ಉಂಟು ಮಾಡಿದೆ ಎನ್ನುತ್ತಾರೆ.
ಲೀವ್.52ಗೆ ವ್ಯಾಪಕ ಬೇಡಿಕೆ
ಹಿಮಾಲಯದಿಂದ ತಯಾರಿಸಲ್ಪಟ್ಟ ಲೀವ್.52ಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ನಂ.1 ಸ್ಥಾನದಲ್ಲಿ ಲೀವ್.52 ವಿದೇಶದಾದ್ಯಂತ ಮಾರಾಟ ಕಾಣುತ್ತಿದೆ. ನೀಮ್ ಫೇಸ್‌ವಾಶ್ ಹೇಗೆ ಬ್ರ್ಯಾಂಡ್ ಆಗಿದೆಯೋ ಅಂತೆಯೇ ಲೀವ್.52 ಒಂದು ಬ್ರ್ಯಾಂಡ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಅಬಾನ, ಬ್ಲೆಮಿನಾರ್, ಬೊನ್ನಿಸನ್, ಬ್ರೆಸೋಲ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಉತ್ಪನ್ನಗಳು ಬಹು ಬೇಡಿಕೆಗೆ ಒಳಗಾಗುತ್ತಿವೆ.
ವಿಶೇಷ ಎಂದರೆ ಪ್ರತಿ ದೇಶಕ್ಕೂ ಪ್ರತ್ಯೇಕವಾಗಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಮತ್ತು ಶೇಖರಿಸಲಾಗುತ್ತದೆ. ಅಲ್ಲಿನ ಉಷ್ಣಾಂಶಕ್ಕೆ ಅನುಗುಣವಾಗಿ ಇಲ್ಲಿ ಶೇಖರಣಾ ವ್ಯವಸ್ಥೆ ಮಾಡಲಾಗಿದೆ. ಹಲವಾರು ಪರಿಷ್ಕರಣ ಸಂಸ್ಥೆಗಳಿಂದ ಮಾನ್ಯತೆ ಪಡೆದುಕೊಂಡಿದೆ. ಭಾರತದಲ್ಲೂ ತನ್ನ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆಗೆ ಬರಲಿ ಎಂಬುದು ಹಿಮಾಲಯದ ಪ್ರತಿಯೊಬ್ಬನ ಹಾರೈಕೆಯಾಗಿದೆ.
- ಮಂಜು ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


