ಬೇರೆ ದಾರಿ

ಕಾಯಿಲೆಯ ಹೆಸರಲ್ಲಿ 'ಸಕ್ಕರೆ' ಇದ್ದರೂ ನೆಮ್ಮದಿ ಮಾತ್ರ ಇಲ್ಲ. ಮಧುಮೇಹದಿಂದ ಬಳಲುತ್ತಿರುವವರ ಗೋಳು ಹೇಳತೀರದು. ಸಿಹಿ ಸಂಭ್ರಮದಲ್ಲೂ ಬಾಯಿಗೆ ಬೀಗ ಹಾಕ್ಕೊಂಡು ಇರಬೇಕಾದ ಸ್ಥಿತಿ. ದೇಹದ ಆರೈಕೆ ಮೇಲೆ ಸದಾ ಕಣ್ಣು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ದಢೂತಿ ದೇಹ ಹೊಂದಿದ ಬೊಜ್ಜು ಸಮಸ್ಯೆಯೂ ಇದಕ್ಕೆ ಹೊರತಲ್ಲ. ವೈದ್ಯಕೀಯ ರಂಗದಲ್ಲಿ ಹೊಸ ಹೊಸ ಆವಿಷ್ಕಾರಗಳಾದರೂ ಮಧುಮೇಹ, ಬೊಜ್ಜಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದರೆ ಈಗ ಹೊಸ ಆಶಾಕಿರಣ ಮೂಡಿದೆ. ಅದುವೇ ಬೇರಿಯಾಟ್ರಿಕ್ ಸಲ್ಯೂಷನ್! ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶ ಸಿಕ್ಕಿದೆ. ಭಾರತದಲ್ಲಿ ಸದ್ಯ ಮಧುಮೇಹಪೀಡಿತರ ಸಂಖ್ಯೆ 6.50 ಕೋಟಿ. ಇನ್ನೂ 3 ಕೋಟಿ ಮಂದಿ ಮಧುಮೇಹಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ. ಮುಂದಿನ 15 ವರ್ಷಗಳಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಮಧುಮೇಹಿಗಳನ್ನು ಹೊಂದಿರುವ ದೇಶ ಎನಿಸಿಕೊಳ್ಳಲಿದೆ! ದೇಶದ ಜನಸಂಖ್ಯೆಯ ಶೇ.5ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ. ವಿಪರ್ಯಾಸವೆಂದರೆ ಬೊಜ್ಜು ಮತ್ತು ಮಧುಮೇಹ ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆ.
ಏನಿದು ಸಲ್ಯೂಷನ್?
ಬೊಜ್ಜು ಸಮಸ್ಯೆ ಇರುವವರಲ್ಲಿ ಅಂದರೆ ಯಾರ ರಕ್ತದಲ್ಲಿ ಸಕ್ಕರೆ ಅಂಶ ನಿಗದಿತ ಮಿತಿಯನ್ನು ಮೀರಿರುತ್ತದೆಯೋ ಅಂಥವರಿಗೆ ಸಮರ್ಪಕವಾದ ಚಿಕಿತ್ಸೆ ಈಗ ಲಭ್ಯವಿದೆ. ಅದುವೇ ಬೇರಿಯಾಟ್ರಿಕ್ ಸರ್ಜರಿ. ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವ ಬೊಜ್ಜು ದೇಹದವರಿಗೆ ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯು ರೋಗಿಯ ದೇಹದ ಜೀರ್ಣ ವ್ಯವಸ್ಥೆಯಲ್ಲೇ ಬದಲಾವಣೆ ತರುತ್ತದೆ. ಆ ಮೂಲಕ ಕಡಿಮೆ ಆಹಾರ ಸೇವಿಸುವಂತೆ ಮಾಡುತ್ತದೆ. ಜತೆಗೆ ಆಹಾರದಲ್ಲಿನ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವ ಪ್ರಮಾಣವನ್ನೂ ಗಣನೀಯವಾಗಿ ತಗ್ಗಿಸುತ್ತದೆ. ಇದೆಲ್ಲದರಿಂದಾಗಿ ದೇಹದ ತೂಕದಲ್ಲಿ ಭಾರಿ ಇಳಿಮುಖವಾಗುತ್ತದೆ. ಬೊಜ್ಜು ಕರಗುತ್ತದೆ. ಅಂದರೆ ಈ ಬೇರಿಯಾಟ್ರಿಕ್ ಸರ್ಜರಿ ಚಿಕಿತ್ಸೆಯು ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿರುವವರಿಗೆ ಬಹಳ ಪರಿಣಾಮಕಾರಿಯಾದ ಹಾಗೂ ದೀರ್ಘ ಕಾಲದ ಪರಿಹಾರ ಒದಗಿಸುವ ಚಿಕಿತ್ಸೆಯಾಗಿದೆ.
ಸರ್ಜರಿ ಮಾಡೋದು ಹೇಗೆ?
ಗ್ಯಾಸ್ಟ್ರಿಕ್ ಸ್ಲಿವ್ ರಿಸೆಕ್ಷನ್ ಎಂಬುದು ಬೇರಿಯಾಟ್ರಿಕ್ ಸರ್ಜರಿಯ ಜನಪ್ರಿಯ ಮಾದರಿ. ಏಕೆಂದರೆ, ಇದು ದೇಹದ ತೂಕ ತಗ್ಗಿಸುವ ಇತರೆ ಎಲ್ಲ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತಲೂ ಬಹಳ ಕಡಿಮೆ ಪ್ರಮಾಣದ ಕಾಂಪ್ಲಿಕೇಷನ್ಸ್ ಒಳಗೊಂಡಿದೆ. ಗ್ಯಾಸ್ಟ್ರಿಕ್ ಸ್ಲಿವ್ ರಿಸೆಕ್ಷನ್ ವಿಧಾನದಲ್ಲಿ ಉದರದ ಗಾತ್ರವನ್ನೇ ಚಿಕ್ಕದು ಮಾಡಲಾಗುತ್ತದೆ. ಇದರಿಂದ ಚಿಕಿತ್ಸೆಗೊಳಗಾದ ವ್ಯಕ್ತಿಗೆ ಬಹಳ ಕಡಿಮೆ ಆಹಾರ ಸೇವಿಸಿದಾಗಲೇ ಹೊಟ್ಟೆ ತುಂಬಿದಂತೆನಿಸುತ್ತದೆ. ಆ ಮೂಲಕ ದೇಹದ ತೂಕ ಕಡಿಮೆಯಾಗಲು ಅವಕಾಶ ಮಾಡಿಕೊಡುತ್ತದೆ. ಬೇರಿಯಾಟ್ರಿಕ್ ಸರ್ಜರಿಯನ್ನು ಲ್ಯಾಪ್ರೊಸ್ಕೋಪಿ ಅಥವಾ ಕೀಹೋಲ್ ವಿಧಾನದಲ್ಲಿ ಮಾಡಲಾಗುತ್ತದೆ. ಅಂದರೆ ಹೊಟ್ಟೆಯನ್ನು ಉದ್ದಕ್ಕೆ ಕೊಯ್ಯದೆ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಕೊರೆದು ಕ್ಯಾಮೆರಾ ಅಳವಡಿಸಿದ ಕೊಳವೆಯನ್ನು ಒಳಕ್ಕೆ ತೂರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಹಾಗಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಎಲ್ಲಿಯೂ ಶಸ್ತ್ರಚಿಕಿತ್ಸೆ ನಡೆಸಿದ ಗಾಯದ ಕಲೆ ಮೂಡುವುದಿಲ್ಲ.
= ಚೆನ್ನು ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


