ಆರೋಗ್ಯ-ಜೀವನಶೈಲಿ

ಶುಭ ನಗ್ನ

'ಬರುವಾಗಲೂ ಬೆತ್ತಲೆ, ಹೋಗುವಾಗಲೂ ಬೆತ್ತಲೆ'. - ಇದು ಹಳೇ ವ್ಯಾಖ್ಯಾನ...

ಶುಭ ನಗ್ನ
Published On :

'ಬರುವಾಗಲೂ ಬೆತ್ತಲೆ, ಹೋಗುವಾಗಲೂ ಬೆತ್ತಲೆ'.
- ಇದು ಹಳೇ ವ್ಯಾಖ್ಯಾನ.
'ಇರುವಾಗಲೂ ಬೆತ್ತಲೆ'.
- ಇದು ಹೊಸ ವ್ಯಾಖ್ಯಾನ!

ಈ ವ್ಯಾಖ್ಯಾನ ನೋಡಿ ನೀವು ಮೂಗು ಮುರಿಯಬಹುದು. ಮಡಿವಂತರು ಛೀ... ಎನ್ನಲೂಬಹುದು. ಆದರೆ ಒಮ್ಮೆ ಯೋಚಿಸಿ. ನಾವೇನೋ ಈಗ 21ನೇ ಶತಮಾನದಲ್ಲಿದ್ದೇವೆ. ಈಗಿನ ಆಧುನಿಕತೆಗೆ ತಕ್ಕಂತೆ ಬಟ್ಟೆಗಳನ್ನು ಧರಿಸುತ್ತೇವೆ. ಅದೇ ನಾಗರಿಕತೆಗಿಂತ ಹಿಂದಿನ ದಿನಗಳನ್ನು ನೋಡಿದರೆ ಯಾರಿಗಿತ್ತು ಬಟ್ಟೆ?
ಹೋಗಲಿ ಬಿಡಿ. ಈಗ ವಿಷಯ ಅದಲ್ಲ. ಬೆತ್ತಲಾಗುವುದು ಎಂದರೆ ಎಲ್ಲರೆದುರೂ ಹೀಗೆ ಓಡಾಡಿ ಅಂತಲೂ ಅಲ್ಲ. ಅದು ತಪ್ಪು ಕೂಡ. ನೀವು ಏಕಾಂತದಲ್ಲಿದ್ದಾಗ ಒಮ್ಮೆ ವಿವಸ್ತ್ರರಾಗಿ ನೋಡಿ. ಆಗ ನಿಮಗೆ ಸಿಗುವ ನೆಮ್ಮದಿ, ಖುಷಿ, ನಿರುಮ್ಮಳ ಭಾವ (ಕೆಲವೊಮ್ಮೆ ಮುಜುಗರವೂ ಆಗಬಹುದು) ಅಷ್ಟಿಷ್ಟಲ್ಲ. ಆದರೆ ಇದರಿಂದಾಗುವ ಪ್ರಯೋಜನವನ್ನು ಕೇಳಿದರೆ, ನೀವು ಖಂಡಿತಾ ಹೀಗೆ ಮಾಡುತ್ತೀರಿ. ಏನೀ ಉಪಯೋಗ? ಬನ್ನಿ ನೋಡೋಣ...
ಜೀವಸತ್ವ- ಡಿ ಹೆಚ್ಚಳ
ನಿಮ್ಮ ಕೋಣೆಗಿರುವ ದೊಡ್ಡ ಕಿಟಕಿ, ಬಾಗಿಲುಗಳಲ್ಲಿ ಏಕಾಂತ ಸ್ಥಳದಲ್ಲಿ ಸೂರ್ಯ ಕಿರಣಗಳು ನೇರವಾಗಿ ಬೀಳುವ ಪ್ರದೇಶದಲ್ಲಿ ಸಂಪೂರ್ಣ ಬೆತ್ತಲಾಗಿ ಬೆಳಗಿನ ಕಿರಣಗಳಿಗೆ ಮೈಯೊಡ್ಡಿ. ಕನಿಷ್ಠ 10ರಿಂದ 15 ನಿಮಿಷ ಹೀಗೆಯೇ ವಿಶ್ರಾಂತಿ ಪಡೆಯಿರಿ. ಇದರಿಂದ ದೇಹದಲ್ಲಿ ವಿಟಮಿನ್ 'ಡಿ' ಹೆಚ್ಚುತ್ತದೆ ಅಂತಾರೆ ಚರ್ಮರೋಗಶಾಸ್ತ್ರಜ್ಞರು. ಅಲ್ಲದೆ ಹೀಗೆ ಮಾಡುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಮೆದುಳಿನ ನರ- ನಾಡಿಗಳು ಚೇತರಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಹಲವರು ಬಿಸಿಲಿಗೆ ಚರ್ಮ ಕಂದುಬಣ್ಣಕ್ಕೆ ತಿರುಗುತ್ತದೆ, ಕಾಂತಿ ಕಳೆದುಕೊಳ್ಳುತ್ತದೆ ಎಂದು ನಂಬಿದ್ದಾರೆ. ಆದರೆ, ಬೆಳಗಿನ ಬಿಸಿಲಿನಿಂದ ಹೀಗಾಗದು ಎಂಬುದು ನೆನಪಿರಲಿ.
ಚರ್ಮದ ಕಲೆಗಳು ಮಾಯ
ಇಂದು ಬಿಗಿ ಬಟ್ಟೆಯೇ ಫ್ಯಾಶನ್ ಆಗಿಬಿಟ್ಟಿದೆ. ಇದು ಆರೋಗ್ಯ ತೀರಾ ಪೆಟ್ಟು ನೀಡುತ್ತದೆ. ಚರ್ಮ ಕೆಂಪಾಗುತ್ತದೆ. ಉದಾಹರಣೆಗೆ ಎಲಸ್ಟಿಕ್‌ವುಳ್ಳ ನಿಕ್ಕರ್, ಬ್ರಾ, ಪ್ಯಾಂಟಿ, ಜೀನ್ಸ್ ಮತ್ತು ಟೀ-ಶರ್ಟ್‌ಗಳು ಮತ್ತಿತರ ಬಿಗಿಯಾದ ಉಡುಪುಗಳನ್ನು ಧರಿಸಿದರೆ ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ. ಅದಕ್ಕಾಗಿ ಸಡಿಲವಾಗಿರುವ ಉಡುಪುಗಳನ್ನು ಧರಿಸಿ. ಏಕಾಂತದಲ್ಲಿದ್ದಾಗಲಾದರೂ ವಿವಸ್ತ್ರವಾಗಿದ್ದು ದೇಹದ ಪ್ರತಿ ಭಾಗದಲ್ಲೂ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಿ.
ನೆಮ್ಮದಿ ಭಾವ
ವಿವಸ್ತ್ರವಾಗಿರೋದು ಆರಂಭದಲ್ಲಿ ಕಷ್ಟಕರವೆನಿಸುತ್ತದೆ. ಆದರೂ ವೈದ್ಯಶಾಸ್ತ್ರದ ಪ್ರಕಾರ- ಹೀಗೆ ಇರುವುದರಿಂದ ಮಾನಸಿಕ ಒತ್ತಡ, ಕೀಳರಿಮೆ, ದುಗುಡ ದೂರವಾಗುತ್ತದೆ. ಅಲ್ಲದೆ ದೇಹ ಪೂರ್ತಿ ಸ್ವತಂತ್ರವಾಗಿ ಮನಸ್ಸಿನಲ್ಲಿ ನಿರುಮ್ಮಳ ಭಾವ ಬರುತ್ತದೆ.
ಮೆದುಳಿಗೂ ಉತ್ತಮ
ಮಾನವನ ಅಡಿಯಿಂದ ಮುಡಿಯವರೆಗಿನ ನರನಾಡಿಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಪಾದರಕ್ಷೆಗಳೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಪಾದವು ನೇರವಾಗಿ ಮೆದುಳಿಗೆ ಸಂಬಂಧಿಸಿದ್ದು, ಮಧ್ಯವಯಸ್ಕರರು ಬರಿಗಾಲಿನಲ್ಲಿ ನಡೆದರೆ, ಓಡಿದರೆ ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಅದರ ಬೆಳವಣಿಗೆಗೆ ಪೂರಕವಾಗಿ ದೇಹದ ಎಲ್ಲ ನರಮಂಡಲಕ್ಕೆ ಉತ್ತೇಜನ ಸಿಗುತ್ತದೆ.
ಸೋಂಕು ದೂರ
ಸಾಧ್ಯವಾದಷ್ಟು ವೇಳೆ ಬೆತ್ತಲೆಯಾಗಿದ್ದರೆ ಅಂಟುರೋಗಗಳಿಂದಲೂ ಮುಕ್ತವಾಗಿರಲು ಸಾಧ್ಯ. ಯಾವಾಗಲೂ ದೇಹಕ್ಕೆ ಅಂಟಿಕೊಂಡ ಬಟ್ಟೆ ಧರಿಸಿದರೆ ಕಲ್ಮಷ ಬೆವರಿನ ಮೂಲಕ ಹೊರಬಂದು ಮತ್ತೆ ಬೆವರು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು ಚರ್ಮಕ್ಕೆ ಸೋಂಕು, ಅಂಟುರೋಗಗಳಿಗೆ ಕಾರಣವಾಗುತ್ತದೆ.

'ಪುರುಷ'ರಿಗೆ ಅನುಕೂಲ
ಎಲಸ್ಟಿಕ್ ನಿಕ್ಕರ್, ಅಂಡರ್‌ವೇರ್ ಧರಿಸುವುದರಿಂದ ಪುರುಷ ಜನನಾಂಗಕ್ಕೆ ತೊಂದರೆ ಅಧಿಕ. ಇವುಗಳು ನರಗಳ ರಕ್ತ ಪರಿಚಲನೆಯನ್ನು ತಡೆಯುತ್ತವೆ. ಆಗ ರಕ್ತ ಹೆಪ್ಪುಗಟ್ಟುತ್ತದೆ. ಅಲ್ಲದೆ ವೀರ್ಯ ಉತ್ಪತ್ತಿಯೂ ಕುಂದುತ್ತದೆ. ಜನನಾಂಗದ ಸ್ಥಳದಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚು.



ಆರೋಗ್ಯಪೂರ್ಣ ಚರ್ಮಕ್ಕಾಗಿ...
ಚರ್ಮವೂ ಉಸಿರಾಡುತ್ತದೆ. ಅದಕ್ಕೂ ಉತ್ತಮ ಗಾಳಿ ಬೇಕು. ಬಿಗಿ ಬಟ್ಟೆ ತೊಡುವವರ ಚರ್ಮ ಕ್ರಮೇಣ ದುರ್ಬಲವಾಗುತ್ತಾ ಹೋಗುತ್ತದೆ. ಜೀವಸತ್ವಗಳು ಅಶಕ್ತಗೊಳ್ಳುತ್ತವೆ. ಇದರಿಂದ ಸುಕ್ಕುಗಟ್ಟುವಿಕೆ, ಕಲೆಗಳು ಬೀಳುತ್ತದೆ. ಅಲ್ಲದೆ ಗುಳ್ಳೆಗಳು ಏಳುವ ಸಾಧ್ಯತೆಗಳಿವೆ. ಚರ್ಮ ಬೆವರುಗಟ್ಟುವಿಕೆಯಿಂದಲೇ ಹೆಚ್ಚು ತೊಂದರೆಯಾಗುತ್ತದೆ ಎಂಬುದು ತಜ್ಞರ ಅಧ್ಯಯನದಿಂದ ದೃಢಪಟ್ಟಿದೆ.


-ವಿಜಿಎಂ
mathvg@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.