ಆರೋಗ್ಯ-ಜೀವನಶೈಲಿ

ಫೈರ್‌ಬ್ರಾಯಿಡ್!

ಫೈರ್‌ಬ್ರಾಯಿಡ್!
Published On :

ಬಂಜೆತನಕ್ಕೆ ನಾನಾ ಕಾರಣಗಳು. ಅದು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಂಬಂಧಿಸಿದ್ದು. ಈ ಅತ್ಯಾಧುನಿಕ ಯುಗದಲ್ಲಿ ಸುಮಾರಷ್ಟು ಸಮಸ್ಯೆಗಳಿಗೆ ಪರಿಹಾರವಿದೆ. ಬಂಜೆತನಕ್ಕೆ ಗರ್ಭಕೋಶದ ಫೈಬ್ರಾಯಿಡ್ ಕೂಡಾ ಕಾರಣ ಎಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ.
ಗರ್ಭಕೋಶದ ಗಂಟುಗಳೆಂದರೆ ಮೂಳೆಯ ಪದರಗಳಿಗೆ ಅಂಟಿಕೊಂಡಂತಿರುವ ಗಡ್ಡೆಗಳು. ಈ ಗಂಟುಗಳು ಸಂಖ್ಯೆಯಲ್ಲಿ ಒಂದಕ್ಕಿಂತ ಹೆಚ್ಚೂ ಇರಬಹುದು ಅಥವಾ ಕಮ್ಮಿಯೂ ಇರಬಹುದು. ಕೇವಲ ಒಂದೇ ಒಂದು ಗಂಟೂ ಕೂಡ ಗರ್ಭಕೋಶದ ಫೈಬ್ರಾಯಿಡ್ ಆಗಿರಬಹುದು. ಅಲ್ಲದೇ ಈ ಫೈಬ್ರಾಯಿಡ್ ಗಡ್ಡೆಯಿಂದ ಗರ್ಭಕೋಶದ ಗಾತ್ರ- ಆಕಾರ ಏರುಪೇರಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಈ ಗಂಟುಗಳಿಗೆ 'ಮ್ಯೂಮಸ್‌' ಅಥವಾ 'ಲಿಯೋಮ್ಯೊವುಸ್‌' ಎಂದೂ ಕರೆಯಲಾಗುತ್ತದೆ. ಗರ್ಭಕೋಶದಲ್ಲಿ ಈ ಗಂಟುಗಳು ಕಾಣಿಸಿಕೊಳ್ಳಲು ಅಥವಾ ಸೃಷ್ಟಿಯಾಗಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ಅಧ್ಯಯನದ ಪ್ರಕಾರ ವಂಶಪಾರಂಪರ್ಯ, ಹಾರ್ಮೊನ್‌ಗಳ ಏರುಪೇರು ಕಾರಣ ಎಂದು ನಂಬಲಾಗಿದೆ.
ಯಾವ ಪ್ರಮಾಣದಲ್ಲಿ?
ಭಾರತದಲ್ಲಿ ಬಂಜೆತನ ಸಮಸ್ಯೆ ಹೊಂದಿರುವ ಶೇ.5ರಿಂದ 10ರಷ್ಟು ಮಹಿಳೆಯರಲ್ಲಿ ಫೈಬ್ರಾಯಿಡ್ ಗಂಟುಗಳು ಕಾಣಿಸಿಕೊಳುತ್ತವೆ. ಹಾಗೆಯೇ ಸಂತಾನ ಹೊಂದಬಹುದಾದ ಸಾಮರ್ಥ್ಯವಿರುವ ಶೇ.20ರಷ್ಟು ಮಹಿಳೆಯರಲ್ಲಿ ಮತ್ತು ಶೇ.2ರಿಂದ 12ರಷ್ಟು ಗರ್ಭಿಣಿಯರಲ್ಲಿ ಈ ಗಂಟುಗಳು ಕಾಣಿಸಿಕೊಳ್ಳುತ್ತಿವೆ.
ಬಂಜೆತನಕ್ಕೆ ಹೇಗೆ ಕಾರಣ?
ಗರ್ಭದ ರಂಧ್ರದಲ್ಲಿ ಉಂಟಾಗುವ ಸಬ್‌ಮ್ಯೂಕಸ್ ಫೈಬ್ರಾಯಿಡ್‌ಗಳು ಮತ್ತು ಒಟ್ಟಾರೆ ಗರ್ಭಕೋಶದಲ್ಲಿ ಕಂಡು ಬರುವ ದೊಡ್ಡ ಗಾತ್ರದ (6 ಸೆಂ.ಮೀ. ಸುತ್ತಳತೆಗೂ ದೊಡ್ಡವು) ಫೈಬ್ರಾಯಿಡ್‌ಗಳು ಸಂತಾನ ಫಲವತ್ತತೆಯನ್ನು ಕುಂಠಿತಗೊಳಿಸುವ ಮೂಲಕ ಬಂಜೆತನಕ್ಕೆ ದಾರಿ ಮಾಡಿಕೊಡುತ್ತವೆ. ವೀರ್ಯಾಣು ಹಿಡಿದಿಟ್ಟುಕೊಳ್ಳಬೇಕಾದ ಜನನೇಂದ್ರಿಯದ ಕೊರಳಿನಾಕಾರದ ಜಾಗದ ಸ್ಥಳವನ್ನು ಬದಲಿಸುವ ಮೂಲಕ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಲ್ಲವು. ಅಲ್ಲದೆ, ಈ ಫೈಬ್ರಾಯಿಡ್‌ಗಳು ವೀರ್ಯಾಣು ಹಾಗೂ ಗರ್ಭದಲ್ಲಿರುವ ಶಿಶುವಿನ ಭ್ರೂಣದ ಆರಂಭಿಕ ಅವಸ್ಥೆಯಲ್ಲಿ ಮಧ್ಯಪ್ರವೇಶಿಸುವುದರಿಂದ ಗರ್ಭಧಾರಣೆ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಗರ್ಭಕೋಶಕ್ಕೆ ರಕ್ತ ಪೂರೈಸಲು ತೊಡಕಾಗುತ್ತವೆ.
ಸಾಮಾನ್ಯ ರೋಗಲಕ್ಷಣಗಳು
= ಗರ್ಭಾಶಯದಿಂದ ತೀವ್ರ ರಕ್ತಸ್ರಾವ.
= ಮೂತ್ರಪಿಂಡದಲ್ಲಿ ತೀವ್ರ ನೋವು ಅಥವಾ ಈ ಭಾಗದಲ್ಲಿ ಒತ್ತಡದ ಅನುಭವ.
= ಮಲಬದ್ಧತೆ.
= ಪದೇಪದೆ ಗರ್ಭಪಾತ.
= ಸಂಭೋಗದ ವೇಳೆ ನೋವು.
= ಬಂಜೆತನ ಕಾಣಿಸಿಕೊಳ್ಳುವುದು.
ಗರ್ಭಧಾರಣೆ ವೇಳೆ ತೊಂದರೆ ಏನು?
= ಫೈಬ್ರಾಯಿಡ್‌ಗಳಿದ್ದರೆ ಗರ್ಭಪಾತವಾಗುವ ಅಪಾಯ ಹೆಚ್ಚು.
= ರಕ್ತಸ್ರಾವ ಸಂಭವಿಸುತ್ತಿರುತ್ತದೆ.
= ಅವಧಿಗೆ ಪೂರ್ವ ಹೆರಿಗೆಯೂ ಆದೀತು.
= ಪ್ಲೆಸೆಂಟಾ ಪ್ರಿವಿಯಾ ಸಮಸ್ಯೆ.
= ದೀರ್ಘವಾದ ಹೆರಿಗೆ ಬೇನೆ
= ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಾಗ ವಿಪರೀತ ರಕ್ತಸ್ರಾವ.
= ಹೆರಿಗೆಗೆ ಕಷ್ಟವಾಗುವುದು.
ಪತ್ತೆ ಹೇಗೆ?
ಫೈಬ್ರಾಯಿಡ್‌ಗಳಿವೆಯೇ ಮತ್ತು ಇದ್ದರೆ ಅವು ತರುವ ಹಾನಿ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಲು ವೈದ್ಯಕೀಯ ತಪಾಸಣೆ ಮಾಡಬೇಕಾಗುತ್ತದೆ. ಉದರ ಅಥವಾ ಜನನೇಂದ್ರಿಯದ ಅಲ್ಟ್ರಾಸೌಂಡ್ ಪರೀಕ್ಷೆ ಈ ಮೂಲಕ ಫೈಬ್ರಾಯಿಡ್ ದೇಹದ ಯಾವ ಭಾಗದಲ್ಲಿದೆ? ಯಾವ ಗಾತ್ರದ್ದಾಗಿದೆ? ಎಷ್ಟು ಸಂಖ್ಯೆಯಲ್ಲಿವೆ? ಎಂದು ಪತ್ತೆ ಹಚ್ಚಬೇಕು. ಅಲ್ಲದೆ, ಇವು ಗರ್ಭದ ರಂಧ್ರಕ್ಕೆ ಮಾಡಿರಬಹುದಾದ ಹಾನಿಯನ್ನು ಪತ್ತೆ ಹಚ್ಚಲು 3ಡಿ ಸ್ಕ್ಯಾನ್ ಮಾಡಿಸಬೇಕಾಗುತ್ತದೆ. ಗರ್ಭರಂಧ್ರದಲ್ಲಿ ಯಾವ ಮಟ್ಟದಲ್ಲಿ ಫೈಬ್ರಾಯಿಡ್ ಕಾಣಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸೊನೊಹಿಸ್ಟಿರೊಗ್ರಾಫಿ ಪರೀಕ್ಷೆ ನಡೆಸಬೇಕು. ಅಲ್ಲದೆ, ಗರ್ಭನಾಳ ಅಥವಾ ರಂಧ್ರ ಸಾಮಾನ್ಯ ಸ್ಥಿತಿಯಲ್ಲಿದೆಯೇ ಎಂಬುದನ್ನು ಪತ್ತೆ ಹಚ್ಚಲು ಹಿಸ್ಟಿರೊಸ್ಕೊಪಿ ಪರೀಕ್ಷೆ ಮಾಡಬೇಕು.
ಚಿಕಿತ್ಸೆ ಹೇಗೆ?
ಫೈಬ್ರಾಯಿಡ್ ಹೊಂದಿರುವ ಮಹಿಳೆಗೆ ಜಿಎನ್‌ಆರ್‌ಎಚ್ ವೈದ್ಯ ಚಿಕಿತ್ಸೆಯನ್ನು ಪ್ರತಿ ತಿಂಗಳು ಇಂಜೆಕ್ಷನ್ ಮೂಲಕ ನೀಡಬಹುದು. ಹೀಗೆ 3ರಿಂದ 6 ತಿಂಗಳು ನೀಡಿದಾಗ ಫೈಬ್ರಾಯಿಡ್ ಗಾತ್ರ ಶೇ.50ರಿಂದ 80ರಷ್ಟು ಕಡಿಮೆ ಆಗುತ್ತದೆ. ಇದರಿಂದಾಗಿ ಶಸ್ತ್ರಚಿಕಿತ್ಸೆಗೆ ಸೂಕ್ತ ಭೂಮಿಕೆ ಸಿದ್ಧವಾಗುತ್ತದೆ.
ಫೈಬ್ರಾಯಿಡ್ ನಿವಾರಿಸಲು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-41312600 ಅಥವಾ 080- 26673585.


= ಡಾ. ದೇವಿಕಾ ಗುಣಶೀಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.