ನೆಗಡಿಪಾರು
ನೆಗಡಿ ಎಲ್ಲರ ಮನೆಯ ಅತಿಥಿ. ಕೆಲವರಿಗಿದು ಚಳಿಗಾಲದ ಸಮಸ್ಯೆ. ಮತ್ತೆ ಕೆಲವರಿಗೆ ನಿತ್ಯದ ತೊಂದರೆ. ಹಾಗಂತ ಕಡೆಗಣಿಸಿದರೆ ದೊಡ್ಡ ...

ನೆಗಡಿ ಎಲ್ಲರ ಮನೆಯ ಅತಿಥಿ. ಕೆಲವರಿಗಿದು ಚಳಿಗಾಲದ ಸಮಸ್ಯೆ. ಮತ್ತೆ ಕೆಲವರಿಗೆ ನಿತ್ಯದ ತೊಂದರೆ. ಹಾಗಂತ ಕಡೆಗಣಿಸಿದರೆ ದೊಡ್ಡ ರೋಗವಾಗುವ ಸಾಧ್ಯತೆ ಹೆಚ್ಚು. ವೈರಾಣುವಿನ ಸೋಂಕು ಹರಡುವ ಕಾಯಿಲೆ ಇದಾಗಿದೆ. ಮೂಗಿನ ವೈರಾಣುಗಳ (ರೈನೋವೈರಸ್‌ಗಳು) ಮತ್ತು ಮುಕುಟ ವೈರಾಣುಗಳಿಂದ(ಕರೋನಾ ವೈರಸ್‌ಗಳು) ಈ ಸಮಸ್ಯೆ ಉಂಟಾಗುತ್ತದೆ.
ಚಳಿಗಾಲದ ನಾಲ್ಕೈದು ತಿಂಗಳು ವಾತಾವರಣದ ಉಷ್ಣತೆ ಕಡಿಮೆಯಾದಂತೆ ಶುಷ್ಕ ಗಾಳಿ ನೆಗಡಿಯನ್ನು ತರಿಸುತ್ತದೆ. ಮನುಷ್ಯನ ಜೀವಿತಾವಧಿಯಲ್ಲಿ 200-300 ಬಾರಿ ನೆಗಡಿಯಾಗುತ್ತದೆ. ಈ ವೇಳೆ ಮೂಗು ಕಟ್ಟುವುದರಿಂದ ಉಸಿರಾಟದ ತೊಂದರೆ, ತಲೆ ನೋವು ಕಾಡುತ್ತದೆ. ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ವಾರದೊಳಗೆ ವಾಸಿಯಾಗುತ್ತದೆ. ಆದರೆ ವೈರಾಣುವಿನಿಂದ ಉಂಟಾದ ನೆಗಡಿ ವಾಸಿಯಾಗಲು 7-14 ದಿನಗಳು ಬೇಕು.
ನೆಗಡಿಯು ಗಾಳಿ, ನೀರು, ಸ್ಪರ್ಶದಿಂದ ಹಾಗೂ ವೈರಾಣುಗಳಿರುವ ಜಾಗಗಳನ್ನು ಮುಟ್ಟುವುದರಿಂದಲೂ ಹರಡುತ್ತದೆ. ಹಾಗಂತ ಪ್ರತಿ ಐದು ನಿಮಿಷಕ್ಕೊಮ್ಮೆ ಕೈತೊಳೆಯುವುದಕ್ಕಾಗುವುದಿಲ್ಲ. ಸಣ್ಣ ಮಟ್ಟದ ನೆಗಡಿಗೆ ಮನೆ ಮದ್ದೇ ಪರಿಹಾರ.
ನೆಗಡಿ ಎಂದು ರಗ್ಗು ಹೊದ್ದು ಮಲಗದೆ ಹದವಾದ ವ್ಯಾಯಾಮ ಮಾಡಿದರೆ ಕಟ್ಟಿದ ಮೂಗು ಸಡಿಲವಾಗುತ್ತದೆ. ಉಸಿರಾಟ ಸುಲಲಿತವಾಗುತ್ತದೆ. ಹಾಗೆಯೇ ಪ್ರಾಣಾಯಾಮ ಹೆಚ್ಚು ಪರಿಣಾಮಕಾರಿ. ಅತಿಯಾದ ಆಂಟಿಬಯೋಟಿಕ್ಸ್ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಏಕೆಂದರೆ ಆಂಟಿಬಯೋಟಿಕ್ಸ್ ವೈರಾಣುಗಳಿಗಿಂತ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಯಾವುದೇ ಕಾರಣಕ್ಕೂ ಡಾಕ್ಟರ್ ಅಣತಿ ಇಲ್ಲದೆ ನೀವೇ ವೈದ್ಯರಾಗಲು ಹೋಗಬೇಡಿ.
ಮುನ್ನೆಚ್ಚರಿಕೆ ಕ್ರಮಗಳು
- ತುಳಸಿ ಎಲೆ ಜಗಿಯುವುದು ಅಥವಾ ಬಿಸಿ ನೀರಿಗೆ ತುಳಸಿ ದಳ ಹಾಕಿ ಅದನ್ನು ಕುಡಿಯುವುದರಿಂದ ನೆಗಡಿ ಬರುವುದಿಲ್ಲ.
- ಕೈ ಕಾಲಿಗೆ ನೀಲಗಿರಿ ಎಣ್ಣೆಯಿಂದ ನಿತ್ಯ ರಾತ್ರಿ ಮಲಗುವಾಗ ಮಸಾಜ್ ಮಾಡಿಕೊಳ್ಳಿ.
- ಮನೆಯಿಂದ ಹೊರಗೆ ಹೋಗುವಾಗ ಕಿವಿಗೆ ಹತ್ತಿ ಇಟ್ಟುಕೊಳ್ಳಿ.
- ಆರೋಗ್ಯಕರವಾದ ಆಹಾರ ಕ್ರಮ ಪಾಲಿಸಿ. ಏನೇ ತಿಂದರೂ, ಕುಡಿದರೂ ಬಿಸಿಬಿಸಿಯಾಗಿರಲಿ.
- ತಲೆಗೆ ಉಣ್ಣೆಯ ಸ್ಕಾರ್ಫ್ ಬಳಸುವುದು ಸೂಕ್ತ.
- ನಿತ್ಯ ರಾತ್ರಿ ಮಲಗುವುದಕ್ಕೆ ಮುಂಚೆ ಹಾಲು ಕುಡಿದು ಮಲಗುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಮೊಸರು, ಹುಳಿಯಾದ ಪದಾರ್ಥ, ಕರಿದ ಆಹಾರ, ಬೇಕರಿ ತಿನಿಸು, ಐಸ್‌ಕ್ರೀಂ, ಚಾಕೊಲೆಟ್‌ನಿಂದ ದೂರವಿರಿ.
ಮನೆ ಮದ್ದು ಏನು?
- ಶೀತದ ಮೊದಲ ಹಂತವಾದ ಗಂಟಲು ನೋವು ಮತ್ತು ಗಂಟಲ ಕಿರಿಕಿರಿಗೆ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ದಿನಕ್ಕೆ ಮೂರು ಬಾರಿ ಗಂಟಲನ್ನು ಮುಕ್ಕಳಿಸಿದರೆ ಆರಾಮದಾಯಕವೆನಿಸುತ್ತದೆ.
- ಶುಂಠಿ ಹಾಕಿದ ಕಾಫಿ ಅಥವಾ ಟೀ ಕುಡಿಯುವುದು ಒಳ್ಳೆಯದು.
- ಜೇನು ತುಪ್ಪಕ್ಕೆ ಕರಿ ಮೆಣಸು ಮತ್ತು ತುಳಸಿ ರಸ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿ.
- ಬಿಸಿ ಹಾಲಿಗೆ ಅರಿಶಿನ ಮತ್ತು ಬೆಳ್ಳುಳ್ಳಿ ಎಸಳು ಸೇರಿಸಿ ಕುಡಿಯಿರಿ.
- ಒಂದು ಚಮಚ ರಾಗಿ ಹಿಟ್ಟು, ಕಾಲು ಚಮಚ ಅರಿಶಿನ, ಚಿಟಿಕಿ ಸಾಂಬ್ರಾಣಿ ಪುಡಿಯನ್ನು ಕೆಂಡದ ಮೇಲೆ ಹಾಕಿ ಹೊಗೆ ತೆಗೆದುಕೊಳ್ಳಿ.
- ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


