ಆರೋಗ್ಯ-ಜೀವನಶೈಲಿ

ನಿದ್ದೆ ಕದ್ದೀಯಲ್ಲೇ ನುಂಗಿ

ನಿದ್ದೆ ಕದ್ದೀಯಲ್ಲೇ ನುಂಗಿ
Published On :

ಆಹಾರ, ನಿದ್ರೆ, ಭಯ, ಮೈಥುನಗಳು ಜೀವಿಗಳ ಸಹಜ ಕ್ರಿಯೆ. ನಿರ್ದಿಷ್ಟ ಪ್ರಮಾಣದಲ್ಲಿ ಇರಬೇಕಾದ ಈ ಅಂಶಗಳಲ್ಲಿ ಸ್ವಲ್ಪ ಏರುಪೇರಾದರೂ, 'ದೇಶ' ಹಾಗೂ ದೇಹದ ಸ್ವಾಸ್ಥ್ಯಕ್ಕೆ ಧಕ್ಕೆ ನಿಶ್ಚಿತ. ಇಂದಂತೂ ನಿದ್ದೆಗೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿದೆ. ಇದು ಆರೋಗ್ಯದಲ್ಲಿ ತಳಮಳವನ್ನು ಹೆಚ್ಚಿಸಿದೆ. ಆದರೆ, ಹಾಯಾಗಿ ನಿದ್ರಿಸುವುದು ಯಾರಿಗೆ ಬೇಡ? ಸಿಕ್ಕ ಸ್ವಲ್ಪ ಸಮಯದಲ್ಲೂ ಆಹ್ಲಾದ ನಿದ್ರೆ ಬೇಕು. ವಿಶೇಷವಾಗಿ ನಾವು ತಿನ್ನುವ ಆಹಾರ ನಮ್ಮ ನಿದ್ರೆಯ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಮೆಗ್ನೀಷಿಯಂ, ಪೊಟ್ಯಾಶಿಯಂ, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಹಲವು ಅಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ದೇಹ ಸೇರುವುದು ನಿದ್ರೆಗೆ ಪೂರಕ.
ನಿದ್ದೆಗೇನು ಬೇಕು?
ಮೆಗ್ನೀಷಿಯಂ ನರನಾಡಿಗಳ ಬಿಗಿತವನ್ನು ಕಡಿಮೆ ಮಾಡಿ, ಮಾನಸಿಕ ಆತಂಕವನ್ನು ದೂರ ಮಾಡುತ್ತದೆ. ರಕ್ತದೊತ್ತಡ ಸುಸ್ಥಿತಿಯಲ್ಲಿಟ್ಟು ತಲೆನೋವಿಗೆ ಇದು ಗುಡ್ ಬೈ ಹೇಳಬಲ್ಲದು. ಮಲಗುವ ಮುನ್ನ ನಿರ್ದಿಷ್ಟ ಪ್ರಮಾಣದ ಮೆಗ್ನೀಷಿಯಂ ಇರುವ ಬಾದಾಮಿ, ಗೋಡಂಬಿ, ಪಿಸ್ತಾ ಸೇರಿದಂತೆ ವಿವಿಧ ಬಗೆಯ ಬೀಜಗಳು, ಹಸಿರು ಸೊಪ್ಪು, ಮೀನು, ಬಾಳೇಹಣ್ಣಿನ ಸೇವನೆ ಒಳಿತು.
ಮೊಸರು, ಓಟ್ಸ್ ಓಕೆ
ದೇಹಕ್ಕೆ ಅಗತ್ಯ ಉಷ್ಣಾಂಶವನ್ನು ನೀಡುವ ಪೊಟ್ಯಾಷಿಯಂ ದೇಹದಲ್ಲಿ ನೀರಿನ ಅಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಹಣ್ಣು, ಮೊಸರು, ಓಟ್ಸ್ ಮೊದಲಾದ ಪದಾರ್ಥಗಳು ದೇಹಕ್ಕೆ ಪೊಟ್ಯಾಷಿಯಂ ನೀಡಿ ರಕ್ತದೊತ್ತಡವನ್ನು ಸರಿಯಾಗಿಡುತ್ತದೆ.
ವಿಟಮಿನ್ ಬಿ6
ಮಾನಸಿಕ ಒತ್ತಡ ದೂರ ಮಾಡುವ ವಿಟಮಿನ್ ಬಿ6 ಹಿತವಾದ ನಿದ್ರೆಗೂ ಸಹಕಾರಿ. ಈ ವಿಟಮಿನ್ ನಿರ್ದಿಷ್ಟ ಪ್ರಮಾಣದಲ್ಲಿ ದೇಹವನ್ನು ಸೇರಿದರೆ ಸದ್ದಿಲ್ಲದೆ ನರನಾಡಿಗಳನ್ನು ಶುದ್ಧಗೊಳಿಸುತ್ತದೆ. ಕಡಲೆಕಾಯಿ, ಬೆಣ್ಣೆ, ಬಾಳೇಹಣ್ಣು, ಬಾದಾಮಿ, ಅವರೆಕಾಳು, ಮೀನು, ಗೆಣಸಿನಲ್ಲಿ ಈ ಅಂಶ ಹೆಚ್ಚಿರುತ್ತದೆ.
ಹಾಲು, ಕೋಸು ಸೇವಿಸಿ
ಮೂಳೆ ಗಟ್ಟಿಯಾಗಿರುವುದರಿಂದ ಹಿಡಿದು ಇಡೀ ದೇವನ್ನು ವಿಶ್ರಾಂತವಾಗಿರಿಸಲು ಕ್ಯಾಲ್ಷಿಯಂ ಅಗತ್ಯ. ಇದು ಆತಂಕವನ್ನೂ ದೂರ ಮಾಡುತ್ತದೆ. ಬಾದಾಮಿ ಹಾಲು, ಕೋಸುಗೆಡ್ಡೆಯಿಂದ ಅಗತ್ಯ ಕ್ಯಾಲ್ಸಿಯಂ ದೇಹಕ್ಕೆ ದಕ್ಕುತ್ತದೆ.
ದಿನಕ್ಕೊಂದು ಮೊಟ್ಟೆ
ಚಲನಶೀಲ ದೇಹಕ್ಕೆ ಅವಶ್ಯವಾದ ಕಬ್ಬಿಣ ಮತ್ತು ಪ್ರೊಟೀನ್‌ಗಳು ಉತ್ತಮ ನಿದ್ರೆಗೂ ಬೇಕು. ರಕ್ತದಲ್ಲಿ ನಿರ್ದಿಷ್ಟ ಪ್ರಮಾಣದ ಸಕ್ಕರೆ ಇರುವಂತೆ ನೋಡಿಕೊಳ್ಳುವ ಇವು ದೇಹವು ಆರೋಗ್ಯದಲ್ಲಿರುವಂತೆ ಮಾಡುತ್ತದೆ. ಮೊಟ್ಟೆ, ಮೀನು, ಮಾಂಸ, ಹಸಿ ತರಕಾರಿ, ಹಾಲು ಮೊದಲಾದ ಆಹಾರ ಪದಾರ್ಥಗಳ ಸೇವನೆ ದೇಹಕ್ಕೆ ಕಬ್ಬಿಣ ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ.

= ಸುಧೀಂದ್ರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.