ಆರೋಗ್ಯ-ಜೀವನಶೈಲಿ

ಸ್ವಚ್ಛ ಪಾಕಸ್ಥಾನ

ಅಡುಗೆ ಮನೆ ಎಂದರೆ ಕೇವಲ ಅಡುಗೆ ಪಾತ್ರೆಗಳು, ಕಿಟಕಿ, ಕಪಾಟುಗಳಿರುವ ಸ್ಥಳವಲ್ಲ. ಬದಲಾಗಿ, ಅದೊಂದು ಕುಟುಂಬವೆಲ್ಲ...

ಸ್ವಚ್ಛ ಪಾಕಸ್ಥಾನ
Published On :

ಅಡುಗೆ ಮನೆ ಎಂದರೆ ಕೇವಲ ಅಡುಗೆ ಪಾತ್ರೆಗಳು, ಕಿಟಕಿ, ಕಪಾಟುಗಳಿರುವ ಸ್ಥಳವಲ್ಲ. ಬದಲಾಗಿ, ಅದೊಂದು ಕುಟುಂಬವೆಲ್ಲ ಒಟ್ಟಿಗೆ ಸೇರಲು ಮತ್ತು ಪ್ರೀತಿಪಾತ್ರರ ಜೊತೆಗೂಡಿ ಊಟ ಮಾಡುವ ಸ್ಥಳ. ಹಾಗಾಗಿ ಮನೆ ಎಷ್ಟೇ ದೊಡ್ಡದಾಗಿ ಸುಂದರವಾಗಿ ನಿರ್ಮಿಸಿ ಅಡುಗೆಮನೆ ಸರಿಯಿಲ್ಲವೆಂದರೆ ಹೆಣ್ಮಕ್ಕಳ ಕೋಪಕ್ಕೆ ಗುರಿಯಾಗುವುದಂತೂ ನಿಶ್ಚಿತ. ಅದರಲ್ಲೂ ದಿನದ ಬಹುತೇಕ ಸಮಯ ಕಳೆಯುವ ಅಡುಗೆಮನೆಗೆ ಆಧುನಿಕ ಮಹಿಳೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾಳೆ.
ಅಡುಗೆಮನೆ ಸ್ವಚ್ಛವಾಗಿದ್ದರೆ ಇಡೀ ಮನೆಯೇ ಸ್ವಚ್ಛ. ಹಾಗಾಗಿ, ಅಡುಗೆಮನೆ ಶುಚಿಯಾಗಿಡಲು ಸದಾ ದುಬಾರಿ ಬೆಲೆಯ ಔಷಧ ಸಿಂಪರಣೆ ಕೊಳ್ಳುವ ಬದಲು, ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ಅಡುಗೆಮನೆಯನ್ನು ಸ್ವಚ್ಛವಾಗಿಡಬಹುದು.
    ನಿತ್ಯ ಬಳಸುವ ಸ್ಟೀಲ್ ಪಾತ್ರೆಗಳು ಕಾಲಕ್ರಮೇಣ ಹೊಳಪು ಕಳೆದುಕೊಳ್ಳುತ್ತವೆ. ಹಾಗಾಗಿ ನಿತ್ಯ ಅಡುಗೆಗಾಗಿ ಕತ್ತರಿಸಿದ ಈರುಳ್ಳಿ ತುಂಡಿನಿಂದ ಪಾತ್ರೆಗಳನ್ನು ಉಜ್ಜಿ ತೊಳೆದರೆ ಪಾತ್ರೆಗಳು ಪುನಃ ಹೊಳಪು ಪಡೆಯುತ್ತವೆ. ದೋಸೆ, ಚಪಾತಿ ಮಾಡುವ 'ತವಾ'ಕ್ಕೆ ಈರುಳ್ಳಿ ಉಜ್ಜಿ ನಂತರ ದೋಸೆ, ಚಪಾತಿ ಮಾಡಿದರೆ ದೋಸೆ ತಳಕ್ಕೆ ಅಂಟದೆ ಸರಾಗವಾಗಿ ಮೇಲೆಳುತ್ತದೆ.
    ಅಡುಗೆಯಾದ ತಕ್ಷಣ ಸ್ಟೌ ಅನ್ನು ಒರೆಸಿಡಿ. ಇದರಿಂದ ಸ್ಟೌ ತುಕ್ಕು ಹಿಡಿಯಲ್ಲ. ಜೊತೆಗೆ ಹಾಲು ಮತ್ತಿತರ ಪದಾರ್ಥಗಳು ಉಕ್ಕಿ ಸ್ಟೌ ಮೇಲೆ ಚೆಲ್ಲದಂತೆ ನಿಗಾವಹಿಸಿ. ಎಲ್ಲ ಬಗೆಯ ಸಾಮಾನು ಒರೆಸಲು ಒಂದೇ ಬಟ್ಟೆ ಬಳಸಬೇಡಿ. ಬದಲಿಗೆ, ಜಿಡ್ಡಿನ ಪದಾರ್ಥ, ಕೈ ಒರೆಸಲು, ತೊಳೆದ ಪಾತ್ರೆ ಒರೆಸಲು ಬೇರೆ ಬೇರೆ ಬಟ್ಟೆ ಬಳಸಿ.
    ಸ್ಟೌ ಮತ್ತಿತರ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿದರೆ ಆಲೂಗಡ್ಡೆಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ತುಕ್ಕಿನ ಭಾಗಕ್ಕೆ ಉಜ್ಜಿದರೆ ತುಕ್ಕು ತಕ್ಷಣ ಮಾಯ.
    ಮನೆಗೆ ಹೊಸ ಪಾತ್ರೆಗಳನ್ನು ತಂದಾಗ ಅದರ ಲೇಬಲ್ ತೆಗೆಯಲು ಕಷ್ಟಪಡುವ ಬದಲು ಅದಕ್ಕೆ ಪೀನಟ್ ಬಟರ್ (ನೆಲಗಡಲೆಯಿಂದ ತಯಾರಿಸಿದ ಬೆಣ್ಣೆ) ಅನ್ನು ಲೇಬಲ್ ಮೇಲೆ ಹಚ್ಚಿ ಕೆಲ ನಿಮಿಷಗಳ ನಂತರ ಕಿತ್ತರೆ ಸುಲಭವಾಗಿ ಬರುತ್ತದೆ. ಅದೇ ರೀತಿ ಯಂತ್ರಗಳು ತುಕ್ಕು ಹಿಡಿದಾಗ ಎಣ್ಣೆ ಅಥವಾ ಗ್ರೀಸ್ ಬಳಸುವಂತೆ ಪೀನಟ್ ಬಟರ್ ಬಳಸಬಹುದು.
    ಅಡುಗೆ ಕೆಲಸ ಮುಗಿದ ನಂತರ ಪಾತ್ರೆ, ಕೋಣೆಯನ್ನು ಸ್ವಚ್ಛಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಿ. ಊಟ, ಅಡುಗೆ ಮಾಡಿದ ಪಾತ್ರೆಗಳನ್ನು ತಕ್ಷಣವೇ ತೊಳೆದಿಡಿ. ಕನಿಷ್ಠ 10-15 ದಿನಗಳಿಗೊಮ್ಮೆ ನಿತ್ಯ ಬಳಕೆ ಅಡುಗೆ ಪಾತ್ರೆಗಳನ್ನು ತೊಳೆದಿಡಿ.
    ಎಲ್ಲ ವಸ್ತುಗಳನ್ನು ಅದರದ್ದೇ ಜಾಗದಲ್ಲಿ ಹೊಂದಿಸಿಡಿ. ಸಿಂಕ್ ಪಾಚಿಗಟ್ಟದಂತೆ ನೋಡಿಕೊಳ್ಳುವ ಜೊತೆಗೆ ಜಿರಲೆ, ಹಲ್ಲಿಗಳು ಬಾರದಂತೆ ಎಚ್ಚರವಹಿಸಿ.
    ಅತಿಯಾದ ರಾಸಾಯನಿಕ, ಗಾಢ ವಾಸನೆ ಬೀರುವ ಕ್ಲೀನರ್‌ಗಳ ಬಳಕೆ ಕಡಿಮೆ ಮಾಡಿ. ಇವು ಅಡುಗೆ ಮನೆಯ ಹೊಳಪನ್ನು ಕಳೆಗುಂದಿಸುತ್ತವೆ.
    ತಿಂಡಿ ಮತ್ತಿತರ ಜಿಡ್ಡು ಪದಾರ್ಥಗಳನ್ನು ತಯಾರಿಸುವಾಗ ಸ್ಟೌ ಸುತ್ತ ಪೇಪರ್ ಹೊಂದಿಸಿಡಿ. ಇದರಿಂದ ಸಿಡಿದ, ಚೆಲ್ಲಿದ ಎಣ್ಣೆ ಅಂಶ ಪೇಪರ್‌ಗೆ ಅಂಟುತ್ತದೆ. ನಂತರ ಪೇಪರ್ ಅನ್ನು ಕಸದ ಬುಟ್ಟಿಗೆ ಹಾಕಿ. ಇದರಿಂದ ಸ್ಟೌ ಮೇಲೆ ಅನಗತ್ಯ ಜಿಡ್ಡಿನಾಂಶ ಕೂರುವುದು, ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.
    ತರಕಾರಿ ಹೆಚ್ಚುವಾಗ ಕೆಳಗಡೆ ಪೇಪರ್ ಹಾಸಿಕೊಳ್ಳಿ. ಸಿಪ್ಪೆ ಮತ್ತಿತರ ಕೊಳೆತ ಭಾಗವನ್ನು ನೆಲದ ಮೇಲೆ ಹಾಕದೆ ನೇರವಾಗಿ ಕಸದಬುಟ್ಟಿಗೆ ಹಾಕಿ. ಇದರಿಂದ ನೆಲ ಗಲೀಜಾಗುವುದು ಮತ್ತು ವಾಸನೆಗಟ್ಟುವುದು ತಪ್ಪುತ್ತದೆ.
    ಕೈ ಜಿಡ್ಡು ಅಥವಾ ಒದ್ದೆಯಾಗಿಸಿಕೊಂಡು ಅಡುಗೆ ಮನೆಯ ಫ್ರಿಡ್ಜ್, ಕಪಾಟು, ಪಾತ್ರೆ, ಡಬ್ಬಿಗಳನ್ನು ಮುಟ್ಟಬೇಡಿ. ಇದರಿಂದ ಎಲ್ಲೆಂದರಲ್ಲಿ ಜಿಡ್ಡು ಹರಡುತ್ತದೆ.
    ಫ್ರಿಡ್ಜ್, ಚಾಕು, ಚಾಪರ್, ಈಳಿಗೆಮಣೆಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ. ಜೊತೆಗೆ ಮಿಕ್ಸರ್ ಉಪಯೋಗಿಸಿದ ನಂತರ ಒರೆಸಿಡಿ, ಇಲ್ಲದಿದ್ದರೆ ಅಲ್ಲಿ ಗುಳ ಕಟ್ಟಿದಂತಾಗುತ್ತದೆ.
    ಗ್ಲಾಸ್, ಕಿಟಕಿ, ಸಿಂಕ್, ತಾಮ್ರದ ಪಾತ್ರೆ, ಅಡುಗೆಯಿಂದ ತಳಕ್ಕಂಟಿದ ಪಾತ್ರೆ ಶುಚಿಗೊಳಿಸಲು ಕೋಲಾ ಪಾನೀಯ ಬಳಸಿ. ಇದರಲ್ಲಿ ಸಿಟ್ರಿಕ್ ಆ್ಯಸಿಡ್ ಇರುವುದರಿಂದ ಪರಿಕರಗಳು ಶುದ್ಧಗೊಳ್ಳುತ್ತವೆ. ಅಲ್ಲದೆ, ಸುಂದರ ಸ್ವಚ್ಛ ಅಡುಗೆ ಮನೆಯಿದ್ದರೆ ಆರೋಗ್ಯವೂ ಇಮ್ಮಡಿಗೊಳ್ಳುತ್ತದೆ.


-ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.