ಗರ್ಭವತಿ ಭಕ್ಷ್ಯಾಂ ದೇಹಿ

ತಾಯ್ತನ ಮಹಿಳೆಯರ ಪಾಲಿಗೆ ಮರೆಯಲಾಗದ ಅನುಭವ. ಸ್ತ್ರೀ ಗರ್ಭವತಿಯಾದ ದಿನದಿಂದಲೂ ಮಗುವಿನ ಆರೋಗ್ಯದ ಸಲುವಾಗಿ ಕಾಳಜಿ ವಹಿಸುತ್ತಾಳೆ. ಆದರೆ, ಬಹುತೇಕ ವೇಳೆ ನೀವು ನಿಮ್ಮ ಮಗುವಿನ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ಕಾಳಜಿಗೂ, ನಿಜವಾಗಿ ತೆಗೆದುಕೊಳ್ಳಬೇಕಾದ ಕಾಳಜಿಗೂ ಸಾಕಷ್ಟು ಅಂತರವಿರುತ್ತದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಮಗುವಿನ ಆರೈಕೆ ಮಾಡುವುದರ ಕುರಿತು ತಿಳಿದುಕೊಳ್ಳುವ ಅವಶ್ಯವಿದೆ.
ಯೋಗ್ಯ ಪೋಷಕಾಂಶ ಸೇವಿಸದಿದ್ದರೆ...
ಅಕಾಲಿಕ ಜನನ, ಶಿಶುವಿನ ಕಡಿಮೆ ತೂಕ, ಉಸಿರಾಟದ ತೊಂದರೆಗಳು, ಅಪಾಯಕಾರಿ ಸೋಂಕುಗಳು ಹಾಗೂ ಸರಿಯಾದ ಬೆಳವಣಿಗೆ ಆಗದೇ ಇರುವುದು ಹೀಗೆ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಗುವಿನ ಜನನ ವೇಳೆ ಆಗುವಂಥ ಒತ್ತಡವನ್ನು ಶಿಶು ಸಹಿಸಿಕೊಳ್ಳಲು ಸಾಧ್ಯವಾಗದೆ ಹೋಗುವ ಕಾರಣ 'ಸಿ' ವಿಭಾಗದಲ್ಲಿ ಡೆಲಿವರಿ ಮಾಡಿಸುವಂತಾಗುತ್ತದೆ.
ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ಮಹಿಳೆಯರಿಗೆ ತಾವು ಗರ್ಭವತಿಯಾಗಿರುವ ವಿಚಾರ ತಿಳಿಯುವುದಕ್ಕೂ ಮೊದಲೇ ಶಿಶುವಿನ ಮೆದುಳಿನ ಬೆಳವಣಿಗೆ ಆರಂಭವಾಗಿರುತ್ತದೆ. ಹಾಗಾಗಿ ಮಹಿಳೆ ಸದಾ ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ರೂಢಿಸಿಕೊಳ್ಳಬೇಕು.
ಫಾಲಿಕ್ ಆಸಿಡ್ ಹಾಗೂ ಐಯೋಡಿನ್‌ನಂಥ ಪೋಷಕಾಂಶಗಳು ಸೂಕ್ತ ರೀತಿಯಲ್ಲಿ ಮಗುವಿಗೆ ಲಭ್ಯವಾಗುವಂತೆ ಆರೋಗ್ಯಕರ ಆಹಾರ ಕ್ರಮ ಅನುಸರಿಸಬೇಕು. ಇಲ್ಲವಾದಲ್ಲಿ ಹುಟ್ಟುವ ಮಗುವಿನಲ್ಲಿ ಕಡಿಮೆ ಐಕ್ಯೂ ಅಥವಾ ಮೆದುಳಿನ ಆರೋಗ್ಯ ಸಮಸ್ಯೆ ಹಾಗೂ ನ್ಯೂಟ್ರಲ್ ಟ್ಯೂಬ್‌ನಂಥ ಮೆದುಳು, ಬೆನ್ನು ಮೂಳೆಯ ಮೇಲೆ ಪ್ರಭಾವ ಬೀರುವಂಥ ಸಮಸ್ಯೆಗಳು ಎದುರಾಗುತ್ತವೆ.
ಪೋಷಕಾಂಶಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಗುವು ಪ್ರೌಢಾವಸ್ಥೆ ತಲುಪುವ ಸಂದರ್ಭದಲ್ಲೂ ಹಲವು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
= ಗರ್ಭಾವಸ್ಥೆಯ ಸಂದರ್ಭದಲ್ಲಿನ ಒತ್ತಡದ ಸ್ಥಿತಿಗಳಿಂದಾಗಿ ಮಗುವಿನ ಬೆಳವಣಿಗೆಯಲ್ಲಿ ಕೆಲ ಬದಲಾವಣೆಗಳಾಗಿರುವ ಸಾಧ್ಯತೆಗಳಿರುತ್ತದೆ. ಇದರಿಂದ ಮಗುವಿನ ಶರೀರ ರಚನೆಯಲ್ಲಿ ಹಾಗೂ ಚಯಾಪಚಯ ಕ್ರಿಯೆಗಳಲ್ಲಿ ಬದಲಾವಣೆಗಳು ಕಂಡುಬಂದು ಸಮಸ್ಯೆಗೆ ಕಾರಣವಾಗುತ್ತದೆ. ಇಂಥ ಬದಲಾವಣೆಗಳಿಂದಾಗಿ ಮಗುವು ಪ್ರೌಢಾವಸ್ಥೆ ತಲುಪಿದ ಬಳಿಕ ಹೃದಯ ಸಂಬಂಧಿ ಕಾಯಿಲೆಗಳು, ಬ್ಲಡ್ ಪ್ರೆಷರ್, ಸ್ಥೂಲಕಾಯ ಹಾಗೂ ಇನ್ಸುಲಿನ್ ಮೇಲೆ ಅವಲಂಬನೆಯಾಗುವಂಥ ಮಧುಮೇಹ ಮೊದಲಾದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮಾನಸಿಕ, ದೈಹಿಕ ಸಮಸ್ಯೆಗಳೂ ಎದುರಾಗಬಹುದು.
= ಇಷ್ಟೇ ಅಲ್ಲದೆ, ಮಗು ಹುಟ್ಟಿದ ನಂತರ ಎದೆಹಾಲು ಉಣಿಸುವುದು ಅತ್ಯಂತ ಮಹತ್ವದ್ದು. ಇದು ಮಗುವಿಗೆ ಅಗತ್ಯವಾದ ಬಹುತೇಕ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಮಗುವಿನ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತಾಯಿ ಮಗುವಿನ ಬಾಂಧವ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. <
ಹೆಚ್ಚಿದ ಕುಂಠಿತ ಬೆಳವಣಿಗೆ ಸಮಸ್ಯೆ
ಯುನಿಸೆಫ್‌ನ 2013ರ ವರದಿ ಪ್ರಕಾರ, ಇಂದು ವಿಶ್ವಾದ್ಯಂತ 165 ಮಿಲಿಯನ್ ಮಕ್ಕಳು (5 ವರ್ಷ ವಯಸ್ಸಿನೊಳಗಿನ) ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 61.7 ದಶಲಕ್ಷ ಮಕ್ಕಳು ಕುಂಠಿತ ಬೆಳವಣಿಗೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂಖ್ಯೆ ವಿಶ್ವದ ಇತರ ರಾಷ್ಟ್ರಗಳಿಂಗಿಂತಲೂ ಅತ್ಯಧಿಕವಾಗಿದೆ. ಆದ್ದರಿಂದಲೇ ಇಂದು ಭಾರತದಲ್ಲಿ ಗರ್ಭವತಿಯ ಸೂಕ್ತ ಆರೈಕೆಯ ಅಗತ್ಯವಿದೆ.
= ಡಾ. ಆರತಿ ರಮಾರಾವ್
ಸಕ್ರಾವರ್ಡ್ ಹಾಸ್ಪಿಟಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


