ಪ್ರೆಷರ್ ಕುಕ್ಕರ್

ಒತ್ತಡ ಎಂಬುದು ನಮ್ಮಲ್ಲಿ ಭಯದ ಭಾವ ಹುಟ್ಟಿಸುವ ಅಥವಾ ಯಾವುದೋ ವಿಧದಲ್ಲಿ ನಮ್ಮ ಸಮತೋಲನವನ್ನು ಬಿಗಡಾಯಿಸುವ ಒಂದು ಸಾಮಾನ್ಯ ಭೌತಿಕ ಪ್ರಕ್ರಿಯೆ. ರಕ್ತದೊತ್ತಡದಲ್ಲಿ ಏರಿಕೆ, ತೀವ್ರಗತಿಯಲ್ಲಿ ಉಸಿರಾಟ, ಹೆಚ್ಚುವ ಹೃದಯ ಬಡಿತ, ಪಚನಕ್ರಿಯೆ ಕುಂಠಿತ, ರೋಗನಿರೋಧಕ ಶಕ್ತಿಯ ಕುಸಿತ, ಸ್ನಾಯುಗಳ ಉದ್ವಿಗ್ನತೆ, ನೀದ್ರಾಹೀನತೆ ಒತ್ತಡದ ಪ್ರಮುಖ ಲಕ್ಷಣಗಳು. ಒತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಒತ್ತಡಕ್ಕೆ ಒಳಗಾದಾಗ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸಿದರೆ ಒಳಿತು. ಇದು ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಇಂಥ ಆಹಾರಗಳ ಬಗ್ಗೆ ಒಂದು ಝಲಕ್...
'ಸಿ' ಹೆಚ್ಚಿರುವ ಕಿತ್ತಳೆ
ಒತ್ತಡವನ್ನು ಕಡಿಮೆ ಮಾಡುವಲ್ಲಿ ಮತ್ತು ಒತ್ತಡ ಉಂಟಾದಾಗ ರಕ್ತದೊತ್ತಡ, ಕಾರ್ಟಿಸೋಲ್ ಹಾರ್ಮೋನ್ ಸಾಧಾರಣ ಮಟ್ಟಕ್ಕೆ ಮರಳಲು 'ಸಿ' ವಿಟಮಿನ್ ಸಹಕರಿಸುತ್ತದೆ ಎಂಬುದನ್ನು ಸೃಕೊಫಾರ್ಮಾಕಾಲಜಿಯಲ್ಲಿನ ಒಂದು ಜರ್ಮನ್ ಅಧ್ಯಯನ ದೃಢಪಡಿಸಿದೆ. ಅದಕ್ಕೆ 'ಸಿ' ವಿಟಮಿನ್ ಹೆಚ್ಚಿರುವ ಕಿತ್ತಳೆ, ನೆಲ್ಲಿಕಾಯಿ ಸೇವಿಸಿ.
ನಾರಿನಂಶದ ಗೆಣಸು
ನಾವು ಒತ್ತಡದಲ್ಲಿರುವಾಗ ಸಿಹಿ ಗೆಣಸಿನ ಸೇವನೆ ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳು ಹಾಗೂ ಸಿಹಿ ಅಂಶಗಳನ್ನು ಪೂರೈಸುತ್ತದೆ. ಇದರಲ್ಲಿ ಬಿಟಾ ಕೆರೋಟಿನ್ ಮತ್ತು ಇತರೆ ವಿಟಮಿನ್‌ಗಳಿರುತ್ತವೆ. ಈ ಗೆಣಸಿನಲ್ಲಿರುವ ನಾರಿನಂಶ ನಿಧಾನ ಮತ್ತು ಸ್ಥಿರವಾದ ರೀತಿಯಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಪೂರೈಸುತ್ತದೆ.
ಮೆಗ್ನೀಷಿಯಂ ಇರುವ ಏಪ್ರಿಕಾಟ್
ಡ್ರೈ ಫ್ರೂಟ್ ಆದ ಒಣ ಏಪ್ರಿಕಾಟ್‌ಗಳು ಮೆಗ್ನೀಷಿಯಂ ಭರಿತವಾಗಿವೆ. ಅವು ಒತ್ತಡ ನಿವಾರಕ ಮತ್ತು ಸ್ವಾಭಾವಿಕ ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುತ್ತವೆ.
'ಇ', 'ಬಿ'ಗೆ ಪಿಸ್ತಾ, ಬಾದಾಮಿ
ಪಿಸ್ತಾ, ಬಾದಾಮಿ ಹಾಗೂ ಆಕ್ರೂಟ್‌ಗಳಲ್ಲಿ 'ಇ' ಮತ್ತು 'ಬಿ' ವಿಟಮಿನ್‌ಗಳು ಹೇರಳವಾಗಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿಸ್ತಾ ಮತ್ತು ಆಕ್ರೋಟ್, ವಾಲ್‌ನಟ್‌ಗಳು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ.
ಅರ್ಧ ತಲೆ ನೋವಿಗೆ ಪಾಲಾಕ್
ಮೆಗ್ನೀಷಿಯಂ ಕೊರತೆಯಿಂದ ಅರ್ಧ ತಲೆ ನೋವು ಮತ್ತು ಅಯಾಸ ಕಾಡುತ್ತದೆ. ಒಂದು ಕಪ್ ಪಾಲಾಕ್ ಸೊಪ್ಪು ನಮ್ಮ ದಿನದ ಅಗತ್ಯದ ಶೇ.40ರಷ್ಟು ಮೆಗ್ನೀಷಿಯಂ ಅನ್ನು ಒದಗಿಸುತ್ತದೆ.
ವಿಟಮಿನ್ ಆಗರ ಹಸಿರು ತರಕಾರಿ
ಬ್ರೊಕಲಿ ಮುಂತಾದ ಕಡು ಹಸಿರು ತರಕಾರಿಗಳು ವಿಟಮಿನ್‌ಗಳ ಆಗರ. ಇವು ಒತ್ತಡಕ್ಕೊಳಗಾದಾಗ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸುತ್ತದೆ.
ಪೊಟ್ಯಾಷಿಯಂ ಬೇಕು...
ಬೆಣ್ಣೆ ಹಣ್ಣಿನಲ್ಲಿ ಲಭ್ಯವಿರುವ ಮಾನೋಸ್ಯಾಚ್ಯುರೇಟೆಡ್ ಕೊಬ್ಬುಗಳು ಮತ್ತು ಪೊಟ್ಯಾಷಿಯಂ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಸಹಕರಿಸುತ್ತವೆ. ಆಹಾರದಲ್ಲಿ ಸಾಕಷ್ಟು ಪೊಟ್ಯಾಷಿಯಂ ಸೇವನೆ ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಧಾನಗಳಲ್ಲಿ ಒಂದು ಎಂದು ನ್ಯಾಶನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್ಸ್‌ಟಿಟ್ಯೂಟ್ ಹೇಳಿದೆ. ಬೆಣ್ಣೆಹಣ್ಣಿನಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚು ಪೊಟ್ಯಾಷಿಯಂ ಅಂಶವಿರುತ್ತದೆ.
ಹಾರ್ಮೋನ್ ಕಂಟ್ರೋಲ್‌ಗೆ ಮೀನು
ಒಮೆಗಾ-3 ಫ್ಯಾಟಿ ಆ್ಯಸಿಡ್ ಯಥೇಚ್ಛವಿರುವ ಆಹಾರಗಳು ಹೃದ್ರೋಗದಿಂದ ನಮ್ಮನ್ನು ರಕ್ಷಿಸುತ್ತವೆ. ಒಮೆಗಾ-3 ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್‌ಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಮಧುಮೇಹ ಮತ್ತು ಮೇಟಾಬಾಲಿಸಿಂನ (ಚಯಾಪಚಯ) ಒಂದು ಅಧ್ಯಯನ ದಿಂದ ಸಾಬೀತಾಗಿದೆ.
ಹಿತಾನುಭವಕ್ಕೆ ಅಮಿನೋಆಮ್ಲ
ಟರ್ಕಿ ಕೋಳಿಯ ಮಾಂಸ ಎಲೆಟ್ರಿಪ್ಟಾನ್ ಎಂಬ ಒಂದು ಅಮಿನೋ ಅಮ್ಲವನ್ನು ಹೊಂದಿರುತ್ತದೆ. ಇದು ಮೆದುಳಿಗೆ ಹಿತಾನುಭವವನ್ನುಂಟು ಮಾಡುವ ರಾಸಾಯನಿಕವಾದ ಸಿರೊಟೊನಿನ್ ಬಿಡುಗಡೆಗೆ ಪ್ರಚೋದಿಸುತ್ತದೆ. ಇದರಿಂದಲೇ ಕೆಲವರು ಟರ್ಕಿ ಕೋಳಿ ಮಾಂಸ ಸೇವಿಸಿದ ನಂತರ ಶಾಂತವಾಗಿ ಅಥವಾ ಮತ್ತೆ ಕೆಲವರು ಆಯಾಸವಾದಂತೆ ಕಾಣಿಸುತ್ತಾರೆ. ಇದು ಎಲೆಟ್ರಿಪ್ಟಾನ್‌ನ ಪ್ರಭಾವ.
ಒತ್ತಡ ಒತ್ತಟ್ಟಿಗಿರಲಿ
- ಒತ್ತಡವನ್ನು ನಿಯಂತ್ರಣದಲ್ಲಿಡಲು ನಿಯಮಿತ ವ್ಯಾಯಾಮ ಮಾಡಿ.
- ಪ್ರಾಣಾಯಾಮ, ಧ್ಯಾನ ಒಳ್ಳೆಯದು.
- ಬೆಳಗಿನ ಉಪಹಾರದೊಂದಿಗೆ ಯಾವುದಾದರೊಂದು ಶಕ್ತಿವರ್ಧಕ ಪೇಯ ಸೇವಿಸಿ.
- ರಕ್ತದಲ್ಲಿ ಸಕ್ಕರೆ ಕಡಿಮೆಯಾದಾಗ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಶಕ್ತಿ ಕಡಿಮೆಯಾಗಿ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಶುಗರ್ ಲೆವೆಲ್ ಸ್ಥಿರವಾಗಿರಲು ಪದೇ ಪದೇ ಸಣ್ಣ ಪ್ರಮಾಣದ ಆಹಾರ ಸೇವಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


