ಆರೋಗ್ಯ-ಜೀವನಶೈಲಿ

ಪ್ರಾಣಿಪಾಠ

ಯಾರಾದರೂ ಪ್ರಾಣಿಗಳಿಗೆ ನಮ್ಮನ್ನು ಹೋಲಿಸಿದರೆ ನಮ್ಮ ಮೂಗಿನ ತುದಿಯಲ್ಲಿನ ಕೋಪ ಕೆಂಪಾಗಿ ಕಣ್ಣಿಗೆ ಶಿಫ್ಟ್ ಆಗಿ, ಅಲ್ಲಿಂದ ಬಾಯಿಗೆ ಬಂದು ಬಾಯಿಗೆ ಬಂದಂತೆ ...

ಪ್ರಾಣಿಪಾಠ
Published On :

ಯಾರಾದರೂ ಪ್ರಾಣಿಗಳಿಗೆ ನಮ್ಮನ್ನು ಹೋಲಿಸಿದರೆ ನಮ್ಮ ಮೂಗಿನ ತುದಿಯಲ್ಲಿನ ಕೋಪ ಕೆಂಪಾಗಿ ಕಣ್ಣಿಗೆ ಶಿಫ್ಟ್ ಆಗಿ, ಅಲ್ಲಿಂದ ಬಾಯಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುವಂತಾಗುತ್ತದೆ ಅಲ್ಲವೇ? ಆದರೆ,  ನಿಜವಾಗಿಯೂ ಹಲವು ವಿಷಯಗಳಲ್ಲಿ ಅವುಗಳಿಗೆ ಹೋಲಿಸುವುದಿರಲಿ, ನಾವು ಪ್ರಾಣಿಗಳಿಗಿಂತ ಕಡೆ. ಉಳಿದೆಲ್ಲ ವಿಷಯಗಳನ್ನು ಬದಿಗಿಟ್ಟು ಆರೋಗ್ಯಕ್ಕೆ ಬಂದರೂ ಪ್ರಾಣಿಗಳನ್ನು ನೋಡಿ ನಾವು ಕಲಿಯಬೇಕಾದುದು ಬಹಳಷ್ಟಿದೆ.

ಒಂದು ಟೈಮಲ್ಲಿ ಒಂದೇ ಕೆಲ್ಸ
ನಾಯಿಗಳಿಗೇನಾದರೂ ಒಂದು ಕೆಲಸ ನೀಡಿದಾಗ ಅವು ತಮ್ಮ ಅಟೆನ್ಷನ್ ಇನ್ನೊಂದೆಡೆ ಶಿಫ್ಟ್ ಆಗದಂತೆ ಕೆಲಸ ಮಾಡುತ್ತವೆ. ನಾವೂ ಒಂದು ಬಾರಿಗೆ 50 ಕೆಲಸ ಮಾಡುವ ಸಾಹಸ ಬಿಟ್ಟು ನಾಯಿಯನ್ನು ಅನುಕರಿಸುವುದೊಳಿತು. ಈ ಕಡೆ ಮೇಲ್ ಚೆಕ್ ಮಾಡ್ಕೋಬೇಕು, ಇನ್ನೊಂದೆಡೆ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಬೇಕು. ಅದೇ ಸಮಯಕ್ಕೆ ಕಚೇರಿ ಕೆಲಸವೂ ಆಗುತ್ತಿರಬೇಕು, ಮನೆಗೂ ಫೋನ್ ಮಾಡಬೇಕು. ಲಕ್ಷ್ಮಿ ಸರಸ್ವತಿಯರಂತೆ ನಮಗೇನು ನಾಲ್ಕಾರು ಕೈಗಳೂ, ಬ್ರಹ್ಮನಂತೆ 3 ತಲೆಯೂ ಇಲ್ಲವಷ್ಟೆ. ಸಂಶೋಧನೆಗಳು ಹೇಳುವಂತೆ ಹೀಗೆ ಏಕಕಾಲದಲ್ಲಿ ಅನೇಕ ಕಡೆ ಗಮನ ನೀಡಿದರೆ ಯಾವೊಂದು ಕೆಲಸವೂ ಗುಣಮಟ್ಟದ್ದಾಗಿರುವುದಿಲ್ಲ. ಅಲ್ಲದೆ ಇದು ನಮ್ಮ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನೂ ಹಾನಿಗೊಳಿಸುತ್ತದೆ. ಇದರಿಂದ ಸಮಯ ಉಳಿತಾಯವಾಗುವುದಕ್ಕಿಂತಾ ವ್ಯರ್ಥವಾಗುವುದೇ ಹೆಚ್ಚು.

ವಿಶ್ರಾಂತಿಯಿಂದ ಮನಃಶಾಂತಿ
ನಿಮ್ಮ ಮುದ್ದಿನ ಯಾವುದೇ ಸಾಕುಪ್ರಾಣಿ ಬೆಳಗಿನಿಂದ ಸಂಜೆಯವರೆಗೂ ಕಣ್ಣು ಮುಚ್ಚದೆ ಕೆಲಸ ಮಾಡುವುದನ್ನು, ಆಡುವುದನ್ನು ನೋಡಿದ್ದೀರಾ? ಅಧ್ಯಯನಗಳು ಹೇಳುವಂತೆ ಈ ಬೆಕ್ಕಿನ ನಿದ್ರೆಯಿಂದ ಮನುಷ್ಯ ಹೃದಯ ಸಂಬಂಧಿ ಕಾಯಿಲೆಗಳಿಂದ ಬಚಾವ್ ಆಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಇದರಿಂದ ಹೆಚ್ಚು ಜಾಗೃತರಾಗಿರಲು, ಕೆಲಸದಲ್ಲಿ ಉತ್ತಮ ಫಲಿತಾಂಶ ಹೊಂದಲು ಸಾಧ್ಯ.

ನಡೆ ನಡೆ ಆರೋಗ್ಯ ಪಡೆ
ನಡೆಯುವುದರಿಂದ ಸಿಗುವ ಆರೋಗ್ಯಕ್ಕೆ ಹೋಲಿಸಿಕೊಂಡರೆ ನಿಮಗೆ ಎರಡು ಕಾಲಿದೆಯೋ, ನಾಲ್ಕಿದೆಯೋ ಎಂಬುದು ದೊಡ್ಡ ವಿಷಯವೇ ಅಲ್ಲ. ವಾಕಿಂಗ್ ಅತ್ಯಂತ ಅಗ್ಗದಲ್ಲಿ ಆರೋಗ್ಯ ದೊರಕಿಸುತ್ತದೆ. ಇದು ದೇಹದಲ್ಲಿ ಉದಾಸೀನದಿಂದ ಹರಡಿ ಕುಳಿತ ಬೊಜ್ಜನ್ನು ಕರಗಿಸಿ ಹೃದಯವನ್ನು ಗಟ್ಟಿಗೊಳಿಸುತ್ತದೆ. ಖಿನ್ನತೆ ಓಡಿಸಲು, ತೂಕ ಕಡಿಮೆಯಾಗಿಸಲು, ಬ್ರೆಸ್ಟ್ ಕ್ಯಾನ್ಸರ್, ಟೈಪ್ 2 ಸಕ್ಕರೆ ಕಾಯಿಲೆಗೆ ಗುಡ್ ಬಾಯ್ ಹೇಳಲು ವಾಕಿಂಗ್‌ಗಿಂತಾ ಉತ್ತಮ ಮದ್ದು ಇನ್ನೊಂದಿಲ್ಲ.

ಗೆಳೆತನದಿಂದ ಹೊಸತನ
ಬಾಯಿ ಬರದ ನಾಯಿಗಳೇ ಬಾಲ ಅಲ್ಲಾಡಿಸಿ ಅಲ್ಲಾಡಿಸಿ ಎಲ್ಲರಿಗೂ ಹಾಯ್ ಹೇಳಿ ಗೆಳೆತನ ಸಂಪಾದಿಸುತ್ತವೆ.
ಅಂಥದ್ದರಲ್ಲಿ ನಾವು ಮನುಷ್ಯರು ನಮ್ಮನ್ನೇ ನಾವು ಸ್ನೇಹಜೀವಿಗಳೆಂದು ಕರೆದುಕೊಂಡವರು. ಪಕ್ಕದಲ್ಲಿ ಕುಳಿತವರ ನೋಡಿ ನಗಲೂ ಜುಗ್ಗತನ ಮಾಡುತ್ತೇವೆ. ಸ್ನೇಹ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವನ ಪ್ರೀತಿ ಬೆಳೆಸುತ್ತದೆ.

ಕ್ಷಣಕ್ಷಣವೂ ಬದುಕಿ
ಸಾಕುಪ್ರಾಣಿಗಳಿಂದ ಕಲಿಯಬಹುದಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಈ ಕ್ಷಣದಲ್ಲಿ ಬದುಕುವುದು. ಸಂಶೋಧನೆಗಳು ಹೇಳುವ ಪ್ರಕಾರ, ಅಲೆದಾಡುವ ಮನಸ್ಸು ಯಾವತ್ತೂ ದುಃಖದಲ್ಲಿರುತ್ತದೆ. ಯಾವಾಗ ಮನಸ್ಸನ್ನು ಕೇಂದ್ರೀಕರಿಸುವಂಥ ಕೆಲಸ ಮಾಡುತ್ತೇವೋ ಆಗ ಹೆಚ್ಚು ಸಂತೋಷವಾಗಿರುತ್ತೇವೆ.

ಹಗೆತನಕ್ಕೆ ಹೊಗೆ ಹಾಕಿ
ಯಾವುದಾದರೂ ನಾಯಿ ಎಂದಿನದೋ ಸಿಟ್ಟಿಗೆ ಇಂದು ಬೊಗಳುವುದನ್ನು ನೋಡಿದ್ದೀರಾ? ಹಳೆಯ ದ್ವೇಷ, ಸಿಟ್ಟು, ಸೇಡುಗಳನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿ ಬೆಂಕಿ ಹಾಕಿ. ಇದರಿಂದ ಮನಸ್ಸೂ ಹಗುರವಾಗುತ್ತದೆ. ಬಿಪಿ ಮತ್ತು ಆತಂಕವೂ ದೂರಾಗುತ್ತದೆ. ಸಿಟ್ಟು ಹೆಚ್ಚಾದರೆ ಶ್ವಾಸಕೋಶದ ಕೆಲಸಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಕುತೂಹಲ ಕಾಪಾಡಿಕೊಳ್ಳಿ
ಪ್ರಸಿದ್ಧ ಹೇಳಿಕೆಯೊಂದರಂತೆ ಕುತೂಹಲ ಬೆಕ್ಕಿಗೆ ಕೆಟ್ಟದ್ದಿರಬಹುದು. ಆದರೆ ಮನುಷ್ಯರಿಗೆ ಮಾತ್ರ ಜ್ಞಾನ ಹೆಚ್ಚಿಸಿಕೊಳ್ಳಲು, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಕುತೂಹಲ ಇರಲೇಬೇಕು. ಅಲ್ಲದೆ ಕುತೂಹಲ ಹೆಚ್ಚಿರುವವರು ಜೀವನದಲ್ಲಿ ಹೆಚ್ಚಿನ ಅರ್ಥವನ್ನು ಕಾಣುತ್ತಾರಂತೆ. ಹಾಗಂತ ಕುತೂಹಲ ಪಕ್ಕದ ಮನೆಯವರ ಬಗ್ಗೆ ಅಲ್ಲದಿರುವುದು ಒಳಿತು!

ಮಳ್ ಹರಿಯಿರಿ
ಆರೋಗ್ಯವಂತ ಹೃದಯ ಸಣ್ಣಸಣ್ಣದಕ್ಕೂ ನಗುತ್ತದೆ. ಇತರರನ್ನೂ ನಗಿಸುತ್ತದೆ. ತನ್ನೆಡೆಗೆ ನೋಡಿಯೂ ನಗಲು ಅರಿತಿರುತ್ತದೆ. ಆಗಾಗ ಒಂದಿಷ್ಟು ತುಂಟತನ, ತಮಾಷೆ ಬದುಕನ್ನು ಹೆಚ್ಚು ಆಪ್ತವಾಗಿಸುತ್ತದೆ. ಅಲ್ಲದೆ ಹೃದಯ ರೋಗಗಳಿಗೆ ನಗುವಿಗಿಂತಾ ಉತ್ತಮ ಮದ್ದಿಲ್ಲ.

ಮೈದಡವಿಸಿಕೊಳ್ಳಿ
ನಾಯಿಯೋ, ಬೆಕ್ಕನ್ನೋ ನೋಡಿ, ಯಾರಾದರೂ ಮೈದಡವುತ್ತಿದ್ದರೆ ಉಳಿದೆಲ್ಲ ಕೆಲಸ ಬಿಟ್ಟು ಬೆಚ್ಚಗೆ ಮಲಗುತ್ತವೆ. ಈ ಸ್ಪರ್ಶದ ಪವರ್ರೇ ಅಂಥದ್ದು. ಹಾಗಾಗಿ ಆಗಾಗ ಮಸಾಜ್ ಮಾಡಿಸಿಕೊಳ್ಳಿ. ಇದು ರಕ್ತ ಸಂಚಾರವನ್ನು ಸುಗಮಗೊಳಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರಾಮ ತರುತ್ತದೆ. ಅದರಲ್ಲೂ ಈ ಸ್ಪರ್ಶ ಪ್ರೀತಿಪಾತ್ರರದ್ದಾಗಿದ್ದರೆ ಡಬಲ್ ಎಫೆಕ್ಟ್ ಗ್ಯಾರಂಟಿ.

ಪ್ರೀತಿ ವ್ಯಕ್ತಪಡಿಸಿ
ಪ್ರೀತಿಪಾತ್ರರು ಬಂದಾಗ ನಿಮ್ಮ ಮುದ್ದಿನ ನಾಯಿಯನ್ನೇ ನೋಡಿ, ಯಾಕೋ ನಿಂತಲ್ಲಿ ನಿಲ್ಲಾಂಗಿಲ್ಲ, ಕೂತಲ್ಲಿ ಕೂರಂಗಿಲ್ಲ ಎಂದು ಕುಣಿದಾಡುತ್ತವೆ. ನೀವೂ ಹಾಗೆ, ಪ್ರೀತಿಪಾತ್ರರಿಗೆ ಸಂಕೋಚ ಬಿಟ್ಟು ಪ್ರೀತಿ ವ್ಯಕ್ತಪಡಿಸಿ. ಇದು ಸಂಬಂಧವನ್ನು ಗಟ್ಟಿಗೊಳಿಸಿ ಮಾನಸಿಕ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

- ರೇಶ್ಮಾ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.