ವೆಜ್ ಜ್ಞಾನ

ಅಯ್ಯೋ ಅವನೊಬ್ಬ ಪುಳ್ಚಾರು ಎಂದು ಶಾಕಾಹಾರಿ ಜನರನ್ನು ಹೀಯಾಳಿಸುವವರೇ ಹೆಚ್ಚು. ಆದರೆ, ನೀವು ತಿಳಿದ ಹಾಗೆ ಶಾಕಾಹಾರ ಕೆಳದರ್ಜೆಯದಲ್ಲ. ಶಾಕಾಹಾರಿಗಳಿಗೆ ಅನೇಕ ಲಾಭಗಳಿವೆ. ಈ ವಿಷಯದಲ್ಲಿ ವಿಜ್ಞಾನ ಕೂಡಾ ಶಾಕಾಹಾರ ಪರ ನಿಂತಿದೆ.
ಪ್ರೊಟೀನ್‌ಗಳ ಆಗರ
ಮಾಂಸಾಹಾರದಲ್ಲಿ ಪ್ರೊಟೀನ್‌ಗಳು ಹೆಚ್ಚು ಎಂಬುದು ಅನೇಕರ ಅಭಿಪ್ರಾಯ. ಆದರೆ, ಇದು ಶುದ್ಧಸುಳ್ಳು. ನಿಜ ಹೇಳಬೇಕೆಂದರೆ ಶಾಕಾಹಾರದಲ್ಲೇ ಭರಪೂರ ಪ್ರೊಟೀನ್‌ಗಳಿವೆ. ವನಸ್ಪತಿಗಳಿಂದ ಸಿಗುವ ಪ್ರೊಟೀನ್‌ಗಳು ಕೊಲೆಸ್ಟ್ರಾಲ್‌ರಹಿತವಾಗಿವೆ. ಅಲ್ಲದೆ, ಶಾಕಾಹಾರದಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಮತ್ತು ಎಲುಬುಗಳು ಬಲವಾಗಿ ರೂಪುಗೊಳ್ಳಲು ಬೇಕಾದ ಫೈಬರ್ ಅಂಶ ಹೇರಳವಾಗಿದೆ. ಇವುಗಳ ಹೊರತಾಗಿ ಶಾಕಾಹಾರ ಭೋಜನದಲ್ಲಿ ಎಲ್ಲ ಥರದ ಬೇಳೆಕಾಳುಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸುವುದರಿಂದ ಇವುಗಳಲ್ಲಿ ಹೇರಳವಾಗಿ ಪ್ರೊಟೀನ್‌ಗಳು ದೊರೆಯುತ್ತವೆ. ಚಿಕನ್ ಮತ್ತು ಮೊಟ್ಟೆಗಳಲ್ಲಿ ಫೈಬರಿನ ಅಂಶ ಬಿಲ್‌ಕುಲ್ ಇರುವುದೇ ಇಲ್ಲ. ಈ ಎಲ್ಲ ಕಾರಣಗಳಿಂದಾಗಿ ಶಾಕಾಹಾರ ಹೃದಯ ಮತ್ತು ಕಿಡ್ನಿಯ ಸುರಕ್ಷತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಮಾಂಸಾಹಾರದಲ್ಲಿ ದೊರೆಯುವ ಪ್ರೊಟೀನ್ ಮತ್ತು ಕಬ್ಬಿಣದ ಅಂಶ ಮಕ್ಕಳ ವಿಕಾಸಕ್ರಿಯೆಯಲ್ಲಿ ಪ್ರಮುಖವಾಗಬಹುದು. ಅದರರ್ಥ ಶಾಕಾಹಾರಿ ಮಕ್ಕಳು ಆರೋಗ್ಯವಂಥರಲ್ಲ ಎಂದಲ್ಲ. ಶಾಕಾಹಾರಿ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಡೈರಿ, ತರಕಾರಿ ಮತ್ತು ವಿವಿಧ ಬೇಳೆಕಾಳುಗಳನ್ನು ಆಹಾರದ ಮೂಲಕ ಕೊಡುವುದರಿಂದ ಅವರ ಶಾರೀರಿಕ ಬೆಳವಣಿಗೆ ಸರಿಯಾಗಿ ಆಗುವುದರಲ್ಲಿ ಸಂದೇಹವೇ ಇಲ್ಲ. ವಿವಿಧ ಪ್ರಕಾರದ ಬೇಳೆಗಳಲ್ಲಿ ಮತ್ತು ತರಕಾರಿಗಳಲ್ಲಿ ಸಿಗುವ ಅಮಿನೋ ಆ್ಯಸಿಡ್ ಪ್ರೊಟೀನ್‌ನ ಮೂಲವೇ ಆಗಿದೆ. ಅದೇ ರೀತಿ ಹಸಿರು ಎಲೆಗಳುಳ್ಳ ತರಕಾರಿಗಳಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ ಅಂಶ ಇದ್ದೇ ಇರುತ್ತದೆ.
ಕ್ಯಾಲೊರಿ ಪ್ರಮಾಣ ಕಡಿಮೆಯೇ?
ಶಾರೀರಿಕವಾಗಿ ಅಧಿಕ ಶ್ರಮ ವಹಿಸುವವರಿಗೆ ಶಾಕಾಹಾರ ಭೋಜನದಲ್ಲಿ ಪರ್ಯಾಪ್ತ ಪ್ರಮಾಣದಲ್ಲಿ ಕ್ಯಾಲೊರಿ ಸಿಗುವುದಿಲ್ಲ ಎಂಬ ವಾದವುಂಟು. ಸೇನೆ, ಪೊಲೀಸ್, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರಲ್ಲಿ ನಾನ್‌ವೆಜ್ ಮಂದಿಯೇ ಹೆಚ್ಚು ಎಂಬ ಮಾತೂ ಉಂಟು. ಆದರೆ, ಅಮೆರಿಕದ ಅಥ್ಲೀಟ್ ಕಾರ್ಲ್ ಲೂಯಿಸ್, ಖ್ಯಾತ ಬಾಕ್ಸರ್ ಮೈಕ್ ಟೈಸನ್ ಮತ್ತು ಭಾರತದ ಕುಸ್ತಿ ಪಟು ಸುಶೀಲ್‌ಕುಮಾರ್ ಈ ಮಾತನ್ನು ಸುಳ್ಳು ಮಾಡಿದ್ದಾರೆ. ಶಾಕಾಹಾರಿಗಳೂ ಕಠಿಣಾತೀತ ಕಠಿಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಶಾಕಾಹಾರ ಭೋಜನದಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್, ಮೈಕ್ರೋನ್ಯೂಟ್ರಿಯೆಂಟ್ ಸಮಪ್ರಮಾಣದಲ್ಲಿರುತ್ತವೆ. ಮಾಂಸಾಹಾರದ ತುಲನೆಯಲ್ಲಿ ಹಣ್ಣು ಹಂಪಲುಗಳು, ತರಕಾರಿಗಳು ಮತ್ತು ಬೇಳೆಕಾಳುಗಳಲ್ಲಿ ಮೈಕ್ರೋನ್ಯೂಟ್ರಿಯೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದೇ ಕಾರಣಕ್ಕೆ ಮಾಂಸಾಹಾರದ ಜತೆ ಫ್ರೂಟ್ ಮತ್ತು ತರಕಾರಿಗಳ ಸಲಾಡ್‌ಗಳನ್ನೂ ಬಳಸಲು ಸಲಹೆ ನೀಡಲಾಗುತ್ತದೆ.
- ಎಂ.ಬಿ. ನಾಯಕ ಹಾಸನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


