ಮೆಚ್ಚು ಮುನಿಯಮ್ಮ!

ಇಂದು ತೀರಾ ಅನ್ಯೋನ್ಯ ದಂಪತಿಯೆಂದು ಕರೆಸಿಕೊಂಡ ಕುಟುಂಬಗಳಲ್ಲೂ ಅಸಮಾಧಾನ ಸಾಮಾನ್ಯ. 'ಗಂಡ ಹೆಂಡತಿ ಜಗಳ ಗಂಧ ತೀಡಿದಾಂಗ' ಎನ್ನುವ ಮಾತು ಕೆಲ ಕುಟುಂಬಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿವೆ. ಅದರಲ್ಲೂ ಸಣ್ಣ ಅಂಶಗಳನ್ನೇ 'ಮೆಗಾ ಸೀರಿಯಲ್'ಗಳಂತೆ ಎಳೆಯುವುದೇ ಬಹುತೇಕ ಕುಟುಂಬಗಳಲ್ಲಿನ ಗಂಡಹೆಂಡಿರ ಕಾಯಕ.
ಸಣ್ಣಸಣ್ಣ ವಿಚಾರಕ್ಕೂ ಮುನಿಸಿಕೊಂಡು ಅದನ್ನೇ ದೊಡ್ಡದು ಮಾಡಿಬಿಡುವ ಹೆಣ್ಣುಮಕ್ಕಳು, ಪತಿರಾಯ ಹೇಳುವ ಮಾತು ಸರಿ ಎಂದು ಗೊತ್ತಿದ್ದರೂ ಅದನ್ನವರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹಾಗೆಂದು ಗಂಡನಾದವನು ಮಾತಿಗೆ ಮಾತು, ಮುನಿಸಿಗೆ ಮುನಿಸು ತೊರುತ್ತಾ ಹೋದರೆ ಸಂಸಾರ ಅಧೋಗತಿ. ಹಾಗಾಗಿ ಪತಿರಾಯ ಸೋತು ಮುನಿಸಿಕೊಂಡ ಮಡದಿಯನ್ನು ಪ್ರೀತಿಯಿಂದ ಗೆದ್ದು ಸಮಾಧಾನಪಡಿಸಬೇಕು. ಅದಕ್ಕಾಗಿ ಪ್ರತಿ ಪತಿರಾಯ ಕೆಲ ಮಾರ್ಗಗಳನ್ನು ಅನುಸರಿಸಿದರೆ ಮುನಿಸಿಕೊಂಡ ನಲ್ಲೆಯನ್ನು ಕ್ಷಣಾರ್ಧದಲ್ಲಿ ಸಲೀಸಾಗಿ ನೈಸ್ ಮಾಡಿಬಿಡಬಹುದು.
- ತಪ್ಪು ಆಕೆಯದ್ದೇ ಆಗಿದ್ದರೂ ಮುದ್ದಿನ ಮಡದಿಗೋಸ್ಕರ ಆಕೆಯ ಸಂತೋಷಕ್ಕಾಗಿ ತಪ್ಪು ನಿಮ್ಮದೇ ಅಂತ ಒಪ್ಪಿಕೊಳ್ಳಿ. ಅಲ್ಲದೆ, ಆಕೆ ವಾದವನ್ನು ಒಪ್ಪಿಕೊಂಡರೆ ನೀವೂ ಸೇಫ್ ಝೋನ್‌ನಲ್ಲಿರುತ್ತೀರಿ. ಇಲ್ಲದಿದ್ದರೆ ಎಡವಟ್ಟು ನಿಶ್ಚಿತ.
- ಅವಳ ಮೇಲಿನ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರಿ. ಸಾಧ್ಯವಾದರೆ ಆಕೆಯನ್ನು ಇತರರ ಮುಂದೆ ಹೊಗಳಿ, ಕೊಂಡಾಡಿ. ಇದರಿಂದ ಆಕೆ ಯ ಮುನಿಸು ಕಡಿಮೆಯಾಗುವ ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಬಲಗೊಳ್ಳುತ್ತದೆ.
- ಯಾವುದೇ ವಿಚಾರಕ್ಕೂ ನಿಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾದಾಗ ಆಕೆಯೊಂದಿಗೆ ವಾದಕ್ಕಿಳಿದು, ಕೋಪಗೊಳ್ಳದೆ ಪ್ರೀತಿಯಿಂದ ವರ್ತಿಸಿ, ಆಗವಳ ಮುನಿಸು ಐಸ್‌ನಂತೆ ನೈಸ್ ಆಗೋದು ಗ್ಯಾರಂಟಿ.
- ಒಬ್ಬರಿಗೊಬ್ಬರು ಎನ್ನುವಂತೆ ಬದುಕಿದಾಗಲೇ ಸಂಸಾರ ಸಸಾರ. ಸಣ್ಣ ಕಲಹಕ್ಕೆ ತೋಳೇರಿಸಿಕೊಂಡು ನಾನೇನು ಕಮ್ಮಿ ಎಂದುಕೊಂಡು ಗಂಡಸುತನ ಪ್ರದರ್ಶಿಸಲು ಹೋದರೆ 'ಹೋಮ್ ಮಿನಿಸ್ಟರ್' ಹೋಮ್ ಕ್ಲೋಸ್ ಮಾಡೋದು ನಿಶ್ಚಿತ. ಸೋ... ಹುಷಾರು.
- ಮುನಿಸಿಕೊಂಡಾಗ ಆಕೆಯನ್ನು ವೈಯಕ್ತಿಕವಾಗಿ ಕೂರಿಸಿಕೊಂಡು ಸಮಾಧಾನಿಸಿ, ಬುದ್ಧಿ ಹೇಳಿ, ಪರಿಸ್ಥಿತಿ ತಿಳಿಹೇಳಲು ಯತ್ನಿಸಿ.
- ಮುನಿಸಿಕೊಂಡ ನಲ್ಲೆಯನ್ನು ಖುಷಿಪಡಿಸಲು ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲು ಯತ್ನಿಸಿ. ನಿಮ್ಮಾಕೆ ಕೊಪಗೊಂಡಾಗ ನೀವು ಕೋಪಗೊಂಡರೆ ಇಬ್ಬರ ಮೂಡೂ ಹಾಳು.
- ಮುನಿಸಿಕೊಂಡ ಸಮಯ, ದಿನದಲ್ಲಿ ಸಾಧ್ಯವಾದಷ್ಟು ಬೇರೆ ಕೆಲಸಕ್ಕೆ ಫುಲ್‌ಸ್ಟಾಪ್ ಹಾಕಿ. ಆಕೆಯನ್ನು ಮೆಚ್ಚಿಸಲು ಅವಳ ಉಡುಗೆ, ತೊಡುಗೆ, ಅಡುಗೆ, ಆಕೆ ಪ್ರೇಮಿಸುವ ರೀತಿಯನ್ನು ಹಾಡಿ ಹೊಗಳಿ. ಹೊಗಳಿಕೆಗೆ ಮರುಳಾಗದ ಮಡದಿಯರಿಲ್ಲ. ಅಲ್ಲದೆ, ಹೊಗಳಿಕೆಗೆ ಹಣ ಖರ್ಚು ಮಾಡಬೇಕಿಲ್ಲ.
- ಆಕೆಯ ಮುನಿಸಿಗೆ ನೀವೇ ಕಾರಣವಾದ್ದರಿಂದ ಆಕೆಗೆ ಇಷ್ಟವಾದ ಸಿನಿಮಾ, ಶಾಪಿಂಗ್‌ಗೆಂದು ಒಂದಿಷ್ಟು ಹಣ ಖರ್ಚು ಮಾಡಿ. ಹೆಂಡತಿ ಮುನಿಸಿಗಿಂತ ದೊಡ್ಡದೇನಲ್ಲ ಹಣ. ಹಾಗಾಗಿ ಧಾರಾಳವಾಗಿ ಖರ್ಚು ಮಾಡಿ. ಮುನಿಸಿನ ನಂತರದ ರಾಜಿ ನೀಡುವ ಖುಷಿ ಮತ್ತೊಂದು ಬಗೆಯ ಸಿಹಿ. ಹಾಗಾಗಿ ಗಂಡಂದಿರೇ ರಾಜಿಗೆ ಮುಂದಾಗಿ.
- ಆಕೆಗೆ ಇಷ್ಟವಾದ ಸ್ಥಳ, ತವರುಮನೆಗೆ ಕರೆದುಕೊಂಡು ಹೋಗಿ, ಆಕೆಯ ಮನೆಮಂದಿಯೊಂದಿಗೆ ಮುಕ್ತವಾಗಿ ಬೆರೆತು ಒಂದಷ್ಟು ಕಾಲ ಅಲ್ಲೇ ಕಳೆಯಿರಿ. ಜೊತೆಗೆ ಊಟ ಮಾಡಿ. ಆಗ ನೋಡಿ ಮಡದಿಯ ಮುನಿಸು ಮಂಗಮಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


