ಸ್ವಲ್ಪ ತಾಳಿ...

ವ್ಯಕ್ತಿಯ ಪ್ರತಿ ಹೆಜ್ಜೆ, ನಿರ್ಧಾರ, ಮಾತಿಗೆ ಅವನ ಜೊತೆಯಲ್ಲೇ ಇದ್ದು ಅವನನ್ನು ಬೆಂಬಲಿಸುವ ಬಹುಮುಖ್ಯ ಗೆಳೆಯ 'ತಾಳ್ಮೆ'. ಕೇವಲ ಕಾಯುವುದು, ನಿಧಾನವಾಗಿ ಕೆಲಸ ಮಾಡುವುದಷ್ಟೇ ತಾಳ್ಮೆ ಅಲ್ಲ. ಯಾವುದೇ ಕೆಲಸಕ್ಕೆ ಒಂದು ಯೋಜನೆ ಬೇಕು. ಆ ಯೋಜನೆಗೆ ಸಂಪನ್ಮೂಲ ಬೇಕು ಹಾಗೂ ಯೋಚನೆಯಂತೆ ಯೋಜನೆಯನ್ನು ಸರಿಯಾದ ಸಮಯಕ್ಕೆ ಸಿದ್ಧಪಡಿಸುವ, ಪೂರ್ಣಗೊಳ್ಳುವ ವರೆಗೂ ಕಾಯುವ ಮನಸ್ಥಿತಿಯೇ ತಾಳ್ಮೆ.
ನಮಗೆ ಏನೆಲ್ಲ ಬುದ್ಧಿಶಕ್ತಿ, ಧೈರ್ಯ, ಉತ್ಸಾಹವಿದ್ದು ಅದರ ಜೊತೆ 'ತಾಳ್ಮೆ' ಎಂಬ ದೊಡ್ಡಗುಣ ಇರದಿದ್ದರೆ ಉಳಿದೆಲ್ಲ ಗುಣಗಳೂ ನಿಷ್ಫಲವಾಗುತ್ತವೆ. ಯಶಸ್ಸು ಒಂದೆರಡು ದಿನಗಳಲ್ಲಿ ಕಟ್ಟಿಕೊಳ್ಳುವ ಬದುಕಲ್ಲ. ಅದಕ್ಕೆ ಅನೇಕ ವರ್ಷಗಳ ಪ್ರಯತ್ನ, ಶ್ರಮ ಮತ್ತು ಮುಖ್ಯವಾಗಿ ಕಾಯುವ ತಾಳ್ಮೆ ಬೇಕು. ಹಾಗಾಗಿಯೇ ನಮ್ಮ ಹಿರಿಯರು 'ತಾಳಿದವನು ಬಾಳಿಯಾನು' ಎಂದಿದ್ದಾರೆ. ಹಾಗಾದರೆ, ಬದುಕಿನಲ್ಲಿ ತಾಳ್ಮೆಯನ್ನು ರೂಢಿಸಿಕೊಳ್ಳುವುದು ಹೇಗೆ?
ನಿತ್ಯದ ಬದುಕಿನಲ್ಲಿ ನೀವು ಕೋಪಕ್ಕೆ ಎಷ್ಟು ಮಹತ್ವ ನೀಡುತ್ತೀರೊ ಅಷ್ಟೇ ಮಹತ್ವ ತಾಳ್ಮೆಗೂ ನೀಡಿ. ತಾಳ್ಮೆಗೆ ನಿಮ್ಮಲ್ಲಿ ಜಾಗ ನೀಡದಿದ್ದರೆ ಕ್ರಮೇಣ ಕ್ರೂರ ಪ್ರವೃತ್ತಿ ಮನೆ ಮಾಡುತ್ತಾ ಹೋಗುತ್ತದೆ.
ಪ್ರತಿಯೊಬ್ಬರಿಗೂ ತಾಳ್ಮೆ ಅತ್ಯಗತ್ಯ. ಆದರೆ, ಇತರರಿಂದ ಕಿರಿಕಿರಿ, ಒತ್ತಡ, ಅನ್ಯಾಯವಾದರೆ ಪ್ರತಿಭಟಿಸುವ ಮನೋಭಾವವೂ ತಾಳ್ಮೆಯ ಜೊತೆಗಿರಲಿ.
ಯಾವಾಗ ಯಾವ ವಿಷಯಕ್ಕೆ ತಾಳ್ಮೆ ವಹಿಸಬೇಕು, ಯಾವ ವಿಷಯಕ್ಕೆ ಸಿಡಿದೇಳಬೇಕು ಎಂಬುದು ಗೊತ್ತಿರಲಿ. ತಾಳ್ಮೆ ನಮ್ಮ ಬಲ ಹೌದು. ಆದರೆ, ಅದು ಬಲಹೀನತೆ ಆಗದಂತೆ ಜಾಗೃತೆ ವಹಿಸಿ.
ವೇಗದ ಜಮಾನದಲ್ಲಿ ಸಹಜವಾಗಿಯೇ ಒತ್ತಡ ಹೆಚ್ಚು. ಸಾಧ್ಯವಾದಷ್ಟು ತಾಳ್ಮೆಯಿಂದಲೇ ನಿಭಾಯಿಸುವ ಕೌಶಲ್ಯ ಬೆಳೆಸಿಕೊಳ್ಳಿ. ಹೆಚ್ಚೆಚ್ಚು ಒತ್ತಡಕ್ಕೆ ಸಿಲುಕಿ ಸುಖಾಸುಮ್ಮನೆ ಮನಸ್ಸಿನ ಶಾಂತಿ, ನೆಮ್ಮದಿ, ಆರೋಗ್ಯ ಎಲ್ಲವೂ ಹದಗೆಡಿಸಿಕೊಳ್ಳುವ ಬದಲು ಸಾಧ್ಯವಾದಷ್ಟು ಸಹನೆಯಿಂದಿರಲು ಯತ್ನಿಸಿ.
ಒತ್ತಡದ ಬದುಕಿನಿಂದ ಪಾರಾಗಲು ಬಿಡುವಿನ ಸಮಯದಲ್ಲಿ ಯೋಗ, ಧ್ಯಾನ, ಉತ್ತಮ ಪುಸ್ತಕಗಳ ಮೋರೆ ಹೋಗಿ.
ಇತರರು ಉದ್ದೇಶಪೂರ್ವಕವಾಗಿ ಕಿರಿಕಿರಿ ನೀಡುತ್ತಿದ್ದರೆ, ಸಾಧ್ಯವಾದಷ್ಟೂ ಸುಮ್ಮನಿರಿ ಇಲ್ಲವೇ ತಿಳಿಹೇಳಿ ಅಥವಾ ಪ್ರತಿಭಟಿಸಿ. ಸಂಬಂಧ ಮುರಿಯುವ ಮಾತು ಬೇಡ. ಆದರೆ, ಎಲ್ಲವನ್ನೂ ಸಹಿಸುತ್ತಲೇ ಸುಮ್ಮನಿದ್ದರೆ ಫ್ರೀಯಾಗಿ ಇವ 'ಗಾಂಧಿ ತುಂಡು' ಎಂಬ ಬಿರುದು ಕೊಡುತ್ತಾರೆ.
ಕೆಲವರು ನಿಜವಾದ ಕಾಳಜಿ ಇರುವ ವ್ಯಕ್ತಿಗೆ ತೋರಿಸದ ತಾಳ್ಮೆ, ಪ್ರೀತಿಯನ್ನು ಮತ್ತಾರೋ ಹೊರಗಿನ ವ್ಯಕ್ತಿಗೆ ತೋರುತ್ತಾರೆ. ಇಂಥ ತಾಳ್ಮೆ ತಪ್ಪಲ್ಲವಾದರೂ ನಮ್ಮವರಿಗೆ ತೋರದ ತಾಳ್ಮೆ ಹೊರಗಿನವರಿಗೆ ತೋರಿಸಿದರೆ ಅದು ಬೂಟಾಟಿಕೆ. ಇಂತಹ ಬೂಟಾಟಿಕೆ ತಾಳ್ಮೆ ಬೇಡವೆಬೇಡ.
ಕೆಲವರಿಗೆ ಗುರಿ, ಫಲಿತಾಂಶ ತಲುಪಲು ಇನ್ನೇನು ಕೆಲವೇ ಅಂತರ ಇರುವಾಗಲೇ ಗರ್ವದಿಂದ ಮುಗ್ಗರಿಸುತ್ತಾರೆ. ನಂತರ, ಎಲ್ಲ ಸರಿಯಾಗಿತ್ತು, ಸ್ವಲ್ಪ ಕಾದಿದ್ದರೆ ಸರಿಯಾಗುತ್ತಿತ್ತು, ತಾಳ್ಮೆ ವಹಿಸದೆ ಅವಸರ ಪಟ್ಟು ಎಡವಟ್ಟು ಮಾಡಿಕೊಂಡೆವು ಎಂದು ಗೋಳಾಡುತ್ತಾರೆ. ಹಾಗಾಗಿ ಅನ್ನ ಬೇಯುವ ವರೆಗೆ ಕಾದು, ಬಿಸಿ ಆರುವ ವರೆಗೆ ಕಾಯಲೇನು ಕಷ್ಟ?
ಸೋ... ತಾಳ್ಮೆಯಿಂದಿರಿ.
ಗಣೇಶ್ ಕಮ್ಲಾಪುರ
ganeshkamlapur@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


