ಅಶುಭ ಗುಳಿಗೆ
'ಅದು' ಪ್ರಕೃತಿ ಸಹಜ ಪ್ರಕ್ರಿಯೆ. ಸಹಜವಾಗಿಯೇ ನಡೆಯಬೇಕು. ನಂತರದ ಫಲಿತಾಂಶ ಏನೇ ಇರಲಿ. ತಡೆ ಹಿಡಿಯಲು ಪ್ರಯತ್ನಿಸಿದರೆ 'ಪ್ರಕೃತಿ' ವಿಕೋಪ ಖಚಿತ.

'ಫಲಿತಾಂಶ' ತಡೆ ಹಿಡಿಯಲು ಹೋದರೆ ಮುಂದೆ 'ಫೇಲಾದೀರಿ' ಜೋಕೆ!
ಆದರೆ, ಈ ಎಚ್ಚರಿಕೆ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಲ್ಲ, ಪತಿ-ಪತ್ನಿಯರಿಗೆ!
ಹೌದು, ದಂಪತಿಗಳು ಸೇರಿ ಬ(ಬೆ)ರೆವ ಪರೀಕ್ಷೆಯ ಬಳಿಕದ ಫಲಿತಾಂಶಕ್ಕೆ ಅಡ್ಡಿಪಡಿಸಿದಲ್ಲಿ ಮುಂದೆ ಫೇಲಾಗುವ ಸಾಧ್ಯತೆಯೇ ಹೆಚ್ಚು.
'ಅದು' ಪ್ರಕೃತಿ ಸಹಜ ಪ್ರಕ್ರಿಯೆ. ಸಹಜವಾಗಿಯೇ ನಡೆಯಬೇಕು. ಆ ನಂತರದ ಫಲಿತಾಂಶ ಏನೇ ಇರಲಿ. ಅದನ್ನು ತಡೆ ಹಿಡಿಯಲು ಪ್ರಯತ್ನಿಸಿದರೆ 'ಪ್ರಕೃತಿ' ವಿಕೋಪ ಬಹುತೇಕ ಖಚಿತ. ಅಂಥ ವಿಕೋಪ ಎದುರಿಸಬಹುದಾದ 'ಪ್ರಕೃತಿ- ಪುರುಷ'ರು ಸಮಾಜದಲ್ಲಿ ಸಾಕಷ್ಟಿರುವುದರಿಂದ ತಜ್ಞರು 'ಆ ಗಳಿಗೆ'ಯ ಆಜುಬಾಜು 'ಗುಳಿಗೆ' ಬೇಡ ಎಂಬಂಥ ಎಚ್ಚರಿಕೆಯನ್ನು ಇತ್ತೀಚೆಗೆ ನೀಡಲಾರಂಭಿಸಿದ್ದಾರೆ.
ವಿಷಯ ಇಷ್ಟೇ. 'ಅದು' ಆಗಲಿ. ಆದರೆ ಮಗು ಈಗಲೇ ಬೇಡ ಎಂಬ ಉದ್ದೇಶದಿಂದ ಅನೇಕ ಮಹಿಳೆಯರು ಗರ್ಭನಿರೋಧಕ ಗುಳಿಗೆ ಸೇವಿಸಿ ವಿನಾಕಾರಣ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಅಂಥ 'ಮುಂಜಾಗ್ರತಾ ಕ್ರಮ'ಗಳ ಬಗ್ಗೆ ಈಗಲೇ ಮುನ್ನೆಚ್ಚರಿಕೆ ವಹಿಸಿ ಜಾಗೃತಿ ಮೂಡಿಸದಿದ್ದಲ್ಲಿ ಮುಂದೆ ಅದೆಷ್ಟೋ ಮಹಿಳೆಯರು ಮಕ್ಕಳೇ ಆಗದ ಸ್ಥಿತಿ ಎದುರಿಸುವ ಸಾಧ್ಯತೆ ಅಧಿಕ ಎಂಬುದು ತಜ್ಞರ ಆತಂಕ.
ಸುಶಿಕ್ಷಿತರು, ಆದರೆ...
ಇಂದು ಯುವತಿಯರು ಯಾವುದರಲ್ಲೂ ಹಿಂದಿಲ್ಲ. ಹಿಂದಿನಂತೆ ಕೇವಲ ಎಸ್ಸೆಸ್ಸೆಲ್ಸಿ, ಪಿಯುಸಿಗೆ ಶಿಕ್ಷಣಕ್ಕೆ ವಿದಾಯ ಹೇಳುತ್ತಿಲ್ಲ. ಬದಲಿಗೆ ಪದವಿ, ಸ್ನಾತಕೋತ್ತರ ಪದವಿ ಅಥವಾ ಉನ್ನತ ವಿದ್ಯಾಭ್ಯಾಸ ಪೂರೈಸಿ ಯುವಕರಷ್ಟೇ ವಿದ್ಯಾವಂತರಾಗಿದ್ದಾರೆ, ಆಗುತ್ತಲೇ ಇದ್ದಾರೆ. ಹೀಗೆ ಅವರು ವಿದ್ಯಾವಂತರಾಗುವಷ್ಟರಲ್ಲಿ ವಯಸ್ಸು 23 ದಾಟಿರುತ್ತದೆ. ಒಳ್ಳೆಯ ಕಡೆ ಉದ್ಯೋಗ ಗಿಟ್ಟಿಸಿಕೊಳ್ಳುವಷ್ಟರಲ್ಲಿ ವಯಸ್ಸು ಹೆಚ್ಚು ಕಮ್ಮಿ 25 ಆಗುತ್ತದೆ. ನಂತರ ಕೆಲಸ ಕಾಯಂ ಆಗಲಿ, ಬಡ್ತಿ ಸಿಗಲಿ, ಲೈಫ್ ಸೆಟ್ಲ್ ಆಗಲಿ ಎಂದುಕೊಂಡು ಮೂರ್ನಾಲ್ಕು ವರ್ಷ ಮುಂದೂಡಿದ ಬಳಿಕ ಮದ್ವೆ ಆಗುತ್ತಾರೆ. ಕೆಲವರು ಕೆಲಸ ಸಿಕ್ಕಿದ ಕೂಡಲೇ ಮದ್ವೆ ಆದರೂ ಮಕ್ಕಳು ಈಗಲೇ ಬೇಡ ಎಂದು ನಿರ್ಧರಿಸಿಯೇ 'ಒಂದಾಗುತ್ತಾರೆ'. ಅದಕ್ಕಾಗಿ ಒಂದಷ್ಟು ಸಮಯ ಗರ್ಭ ನಿರೋಧಕ ಗುಳಿಗೆ ತೆಗೆದುಕೊಳ್ಳುತ್ತಾರೆ. ಸಮಸ್ಯೆ ಆಗುತ್ತಿರುವುದೇ ಇಲ್ಲಿ ಎಂಬುದು ತಜ್ಞರ ಆತಂಕ.
ಅಡ್ಡ ಪರಿಣಾಮ
ಗರ್ಭಾವಸ್ಥೆ ತಡೆಗೆ ತೆಗೆದುಕೊಳ್ಳುವ ಗುಳಿಗೆಯಲ್ಲಿನ ಹಾರ್ಮೋನುಗಳು ಯುವತಿಯ ದೇಹ ಪ್ರಕೃತಿ ಏರುಪೇರಾಗಿಸುತ್ತದೆ. 'ಪ್ರಕೃತಿ- ಪುರುಷ' ಸಮಾಗಮದ ಸಹಜ ಪ್ರಕ್ರಿಯೆ ಬಳಿಕದ ಬೆಳವಣಿಗೆಗಳು ಅಡ್ಡಿಯಿಲ್ಲದೆ ನಡೆಯಬೇಕು. ಆದರೆ, ಅದಕ್ಕೆ ಅಡ್ಡಿಪಡಿಸಿದರೆ ಅಡ್ಡಪರಿಣಾಮ ಉಂಟಾಗುತ್ತದೆ. ಹೀಗೆ ಗುಳಿಗೆ ಸೇವಿಸಿ 'ಸೇರಿದ' ಯುವತಿಯರು ಅನೇಕ ಸಮಸ್ಯೆಗಳಿಂದ ಬಳಲುತ್ತಿರುವುದು ಸಾಮಾನ್ಯ. ಅಂಥವರಲ್ಲಿ ಮುಖದ ಮೇಲೆ ಗಡ್ಡ- ಮೀಸೆಯ ಥರದ ರೋಮಗಳು ಕಾಣಿಸಿಕೊಳ್ಳುವುದು, ದೇಹದ ವಿವಿಧ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು, ಚರ್ಮದ ಮೇಲೆ ಗೀರಿದಂತಾಗುವುದು, ವಿಪರೀತ ತೂಕ ಹೆಚ್ಚಾಗುವುದು, ದೇಹದಿಂದಲೇ ಹೊರಗಿದ್ದೇನೆ ಎಂಬ ಥರದ ಭಾವನೆ ಉಂಟಾಗುತ್ತದೆ. ಅಲ್ಲದೆ, ಕೆಲವೇ ತಿಂಗಳು ಅಥವಾ ವರ್ಷಗಳ ಮಟ್ಟಿಗೆ ಮಕ್ಕಳಾಗುವುದನ್ನು ಮುಂದಕ್ಕೆ ಹಾಕಲು ಯತ್ನಿಸಿದ ಅಂಥವರು ಮಕ್ಕಳೇ ಆಗದ ಪರಿಸ್ಥಿತಿಗೀಡಾದ ಅನೇಕ ಪ್ರಕರಣಗಳಿವೆ ಎಂದು ಬಂಜೆತನದ ಬಗ್ಗೆ ವಿಶೇಷ ಅಧ್ಯಯನ ಹಾಗೂ ಸಾಧನೆ ನಡೆಸಿರುವ ಹೋಮಿಯೋಪಥಿ ತಜ್ಞ ಡಾ.ಬಿ.ಟಿ. ರುದ್ರೇಶ್ ಅಭಿಪ್ರಾಯಪಡುತ್ತಾರೆ.
ಜತೆಗೆ, ಹಾಗೆ ಕೆಲ ಕಾಲದ ಮಟ್ಟಿಗೆ ಗುಳಿಗೆ ಸೇವಿಸಿ, ನಂತರ ಬೇಕೆಂದಾಗ ಗರ್ಭವತಿಯಾಗುವವರಿಗೆ ಜನಿಸುವ ಮಕ್ಕಳು ಅಂಗವೈಕಲ್ಯದಿಂದ ಕೂಡಿರುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಯುವತಿಯರು ಗರ್ಭನಿರೋಧಕ ಗುಳಿಗೆ ಸೇವಿಸುವುದು ಸರಿಯಲ್ಲ ಎಂಬುದು ಅವರ ಸಲಹೆ.
ಒಳಿತಲ್ಲವೇ ಅಲ್ಲ!
ನನ್ನ ಈ ಮೂರು ದಶಕದಲ್ಲಿ 15 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಅವರಲ್ಲಿ ಸುಮಾರು 10 ಲಕ್ಷ ಯುವತಿಯರು. ಅವರಲ್ಲಿ ಶೇ. 30-40ರಷ್ಟು ಮಂದಿ ಗಡ್ಡ- ಮೀಸೆ ಸಮಸ್ಯೆ ನಿವಾರಣೆಗೆ, ಶೇ.10 ಮಂದಿ ಸಂತಾನಹೀನತೆ ನಿವಾರಣೆಗೆ ಚಿಕಿತ್ಸೆಗಾಗಿ ಬಂದವರು. ಅವರ ಹಿನ್ನೆಲೆ ವಿಚಾರಿಸಿದಾಗ ಗರ್ಭನಿರೋಧಕ ಗುಳಿಗೆ ಸೇವಿಸಿದ್ದು, ಅದೇ ಸಮಸ್ಯೆಗೆ ಕಾರಣ ಎಂಬುದು ಕಂಡುಬಂದಿದೆ. ಹೀಗಾಗಿ ಅತಿ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಇನ್ಯಾವುದೇ ಕಾರಣಕ್ಕೂ ಯುವತಿ ಗರ್ಭ ನಿರೋಧಕ ಗುಳಿಗೆ ತೆಗೆದುಕೊಳ್ಳುವುದು ಒಳಿತಲ್ಲವೇ ಅಲ್ಲ.
- ಡಾ.ಬಿ.ಟಿ. ರುದ್ರೇಶ್, ಹೋಮಿಯೋಪಥಿ ತಜ್ಞ
- ರವಿಕಾಂತ ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


