ಆರೋಗ್ಯ-ಜೀವನಶೈಲಿ

ಟೆನ್ಶನ್ ಗುರೂ ಟೆನ್ಶನ್...

ಟೆನ್ಶನ್ ಗುರೂ ಟೆನ್ಶನ್...
Published On :

ಬಹುಶಃ ಮನುಷ್ಯ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬೇರೆಬೇರೆ ಕಾಯಿಲೆಗಳ ಪರಿಚಯವಿದೆ. ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ಆಯಾ ಸಮಯಕ್ಕೆ ಹಲವು ಸಾಂಕ್ರಾಮಿಕ ರೋಗಗಳಿಂದ ಬಳಲಿದ್ದನ್ನು ನೋಡಬಹುದು.
ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಣಿಗೆ ಬೀಳುವ ರೋಗಗಳು ಇವೆಲ್ಲಕ್ಕಿಂತ ಸ್ವಲ್ಪ ವಿಶೇಷ ಮತ್ತು ಬೇರೆ. ಹಿಂದಿನ ಸಾಂಕ್ರಾಮಿಕ ಮತ್ತು ಇತರೆ ದೈಹಿಕ ಕಾರಣದಿಂದ ನಮ್ಮ ಸ್ವಾಸ್ಥ್ಯಕ್ಕೆ ಹಾನಿಯಾಗಿದ್ದರೆ, ಈಗಿನದು  ಮಾನಸಿಕ ಒತ್ತಡ ಮತ್ತು ಖಿನ್ನತೆಯ ಯುಗ. ಈ ಒತ್ತಡ ಶಾಲೆಗೆ ಹೋಗುವ ಚಿಕ್ಕ ಮಕ್ಕಳಿದ್ದಾಗಿನಿಂದಲೇ ಶುರುವಾಗುತ್ತದೆ. ಒಟ್ಟಿಗೆ ಮಕ್ಕಳಿಂದ ಮುಪ್ಪಿನವರೆಗೆ ಯಾರಿಗೆ ಬಿಟ್ಟಿಲ್ಲಾ ಹೇಳಿರಿ ಈ ವ್ಯಾಕುಲತೆ?
ಕಡಿಮೆ ಅಂಕ ಪಡೆದರೆ ತಂದೆ ತಾಯಿಗಳ ಒತ್ತಡ. ಹೆಚ್ಚು ಅಂಕ ಪಡೆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವ ಒತ್ತಡ. ಬಿಡಿ, ಇಷ್ಟಕ್ಕೂ ಏನೋ ಮಾಡಿ ಕಷ್ಟಪಟ್ಟು ಒಳ್ಳೆ ಅಂಕ ಪಡೆದರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಮಾಡಿದರೇನೇ ಜೀವನ ಸಾರ್ಥಕ ಎನ್ನುವ ತಪ್ಪು ಕಲ್ಪನೆಯ ಒತ್ತಡ.
ಹೋಗಲಿ, ಗಂಡಹೆಂಡತಿಯಾದರೂ ಖುಷಿಯಿಂದ ಇರುತ್ತಾರೆ ಅನ್ನುತ್ತೀರಾ ಅದೂ ಇಲ್ಲ. ಗಂಡನಿಗೆ ಕೆಲಸದ ಒತ್ತಡವಾದರೆ ಹೆಂಡತಿಗೆ ಕೆಲಸದ ಜತೆಗೆ ಮಕ್ಕಳ ಶಿಕ್ಷಣ ಮತ್ತು ಅತ್ತೆ-ಮಾವನ ಜತೆಗೆ ಹೊಂದಾಣಿಕೆಯ ಚಿಂತೆ. ಮುಪ್ಪಿನಲ್ಲಿ ಇರುವ ತಂದೆ ತಾಯಿಗಳಿಗೆ ನಿವೃತ್ತಿಯ ನಂತರ ಮಕ್ಕಳ ಮೇಲೆ ಭಾರವಾಗಿಬಿಡುತ್ತೆವೇನೋ ಎಂಬ ಒತ್ತಡ.
ಎಲ್ಲರಗೂ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸಾಧಿಸಬೇಕು ಎಂಬ ಭಾವನೆ. ಈ ಬಡಿದಾಟದಲ್ಲಿ ನಾವು ಹೆಚ್ಚು ಪಡೆಯಬಹುದೇನೋ ನಿಜ. ಆದರೆ ಇನ್ನೊಂದು ಕಡೆಯಿಂದ ನಮ್ಮ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಮರೆತು ಬಿಟ್ಟಿರುತ್ತೇವೆ.
ಮಾನಸಿಕ ಖಿನ್ನತೆ
ಎಷ್ಟೋ ಜನರು ಈ ಒತ್ತಡವನ್ನು ತಾಳಲಾರದೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಶೇ.8ರಿಂದ 13ರಷ್ಟು ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ದುಃಖ, ಹಸಿವೆ, ನಿದ್ದೆ ಇಲ್ಲದೇ ಇರುವುದು, ನಿರುತ್ಸಾಹ ಮತ್ತು ನಿಶ್ಯಕ್ತಿ ಈ ಮಾನಸಿಕ ಖಿನ್ನತೆಯ ಪ್ರಮುಖ ಲಕ್ಷಣಗಳು. ಆದರೆ ಸುಮಾರು ಅರ್ಧಕ್ಕಿಂತ ಹೆಚ್ಚು ಜನರು ತಲೆನೋವು, ಮೈನೋವು ಮತ್ತು ಬೆನ್ನು ನೋವಿನಂತಹ ದೈಹಿಕ ನೋವಿನಿಂದ ಬಳಲುತ್ತಾರೆ. ಎಲ್ಲ ದೈಹಿಕ ತಪಾಸಣೆಗಳಿಂದ ಯಾವ ರೋಗವನ್ನೂ ಸೂಚಿಸುವುದಿಲ್ಲ. ನೂರಾರು ವೈದ್ಯರ ಹತ್ತಿರ ಹೋಗಿ ಸಾವಿರಾರು ರುಪಾಯಿ ಖರ್ಚು ಮಾಡಿದರೂ ಪರಿಹಾರವಿಲ್ಲದೆ ಚಿಂತೆಯಲ್ಲಿ ಮುಳುಗುತ್ತಾರೆ. ಈ ರೀತಿ ದೈಹಿಕ ನೋವುಗಳು ಕೂಡ ಮಾನಸಿಕ ಖಿನ್ನತೆಯ ಲಕ್ಷಣಗಳಾಗಿರಬಹುದು!
ಹಿಂದಿನ ಕಾಲದಲ್ಲಿ ಈ ಎಲ್ಲ ಮಾನಸಿಕ ರೋಗಗಳಿಗೆ ದೆವ್ವ, ಭೂತ ಅಥವಾ ಪಿಶಾಚಿಯ ಶಕ ಇರಬಹುದು  ಅಥವಾ ಯಾರಾದರೂ ಮಾಟ ಮಂತ್ರ, ತಂತ್ರ ಮಾಡಿಸಿರಬಹುದು ಎಂಬ ಮೂಢನಂಬಿಕೆ ಇತ್ತು. ರೋಗಿಗಳು ಅಮಾವಾಸೆಯ ರಾತ್ರಿ ಸಾಧುಗಳ ಹತ್ತಿರ ಅಥವಾ ದೇವಸ್ಥಾನಕ್ಕೆ ಹೋಗಿ ದೆವ್ವ ಬಿಡಿಸುವ ಕಾರ್ಯ ನಡೆಸಲಾಗುತ್ತಿತ್ತು. ಎಷ್ಟೋ ಜನರಿಗೆ ವಿಸ್ಮಯ ರೀತಿಯಲ್ಲಿ ರೋಗ ಸರಿಹೋಗುತ್ತಿತ್ತಂತೆ. ಆದರೆ ಇದು ಎಲ್ಲ ತರಹದ ಮನೋರೋಗಕ್ಕಲ್ಲ ಅನ್ನೋದು ಆಮೇಲೆ ಗೊತ್ತಾಗುತ್ತಿತ್ತು. ವಿಚಿತ್ರ ಸತ್ಯವೆಂದರೆ ಕೆಲ ಸುಶಿಕ್ಷಿತ ಶಿಕ್ಷಕರು, ಎಂಜಿನಿಯರ್‌ಗಳು ಮತ್ತು ವೈದ್ಯರಲ್ಲಿಯೂ ಕೂಡ ಈ ಮೂಢನಂಬಿಕೆ ಇದೆ!
ಮನಸ್ಸು ನಮ್ಮ ದೇಹದ ಭಾಗ
ನಾವು ನಮ್ಮ ದೇಹದ ಯಾವುದೇ ಭಾಗಕ್ಕೆ ಅಂದರೆ ಹೃದಯ, ಕರಳು ಇತ್ಯಾದಿ ಭಾಗಗಳಿಗೆ ರೋಗ ಬಂದರೆ ತಕ್ಷಣ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯುತ್ತೇವೆ. ಆದರೆ, ಅದೇ ವ್ಯಕ್ತಿಗೆ ಮಾನಸಿಕ ರೋಗ ಬಂದಾಗ ನಮ್ಮ ಮನಸ್ಸು ಅದನ್ನು ಒಪ್ಪುವುದಿಲ್ಲ. ನಮ್ಮ ಹತ್ತಿರ ಜೀವನಕ್ಕೆ ಬೇಕಾದುದು ಎಲ್ಲಾ ಇದೆ. ಹಾಗಾಗಿ ನಮಗೆ ಮಾನಸಿಕ ರೋಗ ಬರಲು ಹೇಗೆ ಸಾಧ್ಯ ಎಂದುಕೊಳ್ಳುತ್ತೇವೆ. ಆದರೆ ಮನಸ್ಸು ಕೂಡಾ ನಮ್ಮ ದೇಹದ ಒಂದು ಭಾಗ ಎಂದು ನಾವು ಎಲ್ಲರೂ ಮರೆತುಬಿಡುತ್ತೇವೆ. ಮನಸ್ಸಿನ ರೋಗಗಳ ಬಗ್ಗೆ ಮಲತಾಯಿ ಭಾವನೆ ಯಾಕೆ? ನಮಗೆ ಇರುವುದು ಒಂದೇ ಜೀವನ. ಅದರ ಆರೋಗ್ಯ ಕಾಪಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನ ಪಡೆದು ಮನೋರೋಗ ತಜ್ಞರ ಸೂಕ್ತ ಸಲಹೆಯಿಂದ ತಮ್ಮ ಸಮಸ್ಯಗೆ ಪರಿಹಾರ ಪಡೆದುಕೊಳ್ಳಬಹುದು. ದೇವರಲ್ಲಿ ನಂಬಿಕೆ ಇರಲಿ. ಆದರೆ ಮೂಢನಂಬಿಕೆ ಬೇಡ. ಮೂಢನಂಬಿಕೆ ದಿಗ್ಮೂಢನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

-ಡಾ. ಆದಿತ್ಯಾ ಪಾಂಡುರಂಗಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.