ಪ್ರೋಗ್ರಾಮರ್
ಕೆಲವರಿಗೆ ಪಾರ್ಟಿ, ರಿಸೆಪ್ಷನ್‌ಗಳಿಗೆ ಹೋಗುವುದೆಂದರೆ ಏನೋ ಖುಷಿ. ಮತ್ತೆ ಕೆಲವರಿಗೆ ಇಂಥ ಪದಗಳನ್ನು ಕೇಳಿದರೇ ಕಿವಿ ತುರಿಕೆ. ..

ಕೆಲವರಿಗೆ ಪಾರ್ಟಿ, ರಿಸೆಪ್ಷನ್‌ಗಳಿಗೆ ಹೋಗುವುದೆಂದರೆ ಏನೋ ಖುಷಿ. ಮತ್ತೆ ಕೆಲವರಿಗೆ ಇಂಥ ಪದಗಳನ್ನು ಕೇಳಿದರೇ ಕಿವಿ ತುರಿಕೆ. ಇದು ನಗರ ಆಗಿರಬಹುದು ಇಲ್ಲವೇ ಹಳ್ಳಿಯೂ ಆಗಿರಬಹುದು. ಎಲ್ಲೆಡೆ ಇಂಥವರು ಸಿಕ್ಕೇ ಸಿಗುತ್ತಾರೆ. ಆದರೆ, ಇಲ್ಲಿ ವಿಷಯ ಅದಲ್ಲ. ಇಂಥ ಸ್ಥಳಗಳಿಗೆ ಹೋದಾಗ ನಮ್ಮ ವರ್ತನೆ ಹೇಗಿರಬೇಕು? ಯಾವ ರೀತಿ ನಮ್ಮನ್ನು ಬಿಂಬಿಸಿಕೊಳ್ಳಬೇಕು? ಮುಂತಾದ ಅಂಶಗಳು ಪ್ರಾಮುಖ್ಯ ಪಡೆಯುತ್ತವೆ. ಯಾವುದೇ ಕಾರ್ಯಕ್ರಮ ಇರಲಿ, ಅಲ್ಲಿ ಅದಕ್ಕೇ ಆದ ಶಿಸ್ತು ಎಂಬುದು ಇರುತ್ತದೆ.
ಪಾರ್ಟಿಯಲ್ಲಿ ಹೀಗಿರಿ...
- ಪ್ರತೀ ಕಾರ್ಯಕ್ರಮಕ್ಕೂ ಒಂದೊಂದು ರೀತಿಯ ಡ್ರೆಸ್ ಕಾಂಬಿನೇಷನ್ ಇರುತ್ತದೆ. ಫ್ರೆಂಡ್ಸ್‌ಗಳೇ ಸೇರಿದ್ದರೆ ನಿಮಗಿಷ್ಟ ಬಂದ ಡ್ರೆಸ್ ಹಾಕಿಕೊಳ್ಳಬಹುದು. ಅದೇ ಕಚೇರಿಯ ಪಾರ್ಟಿ ಆದ್ರೆ ಫಾರ್ಮಲ್ಸ್ ಹಾಕಿಕೊಂಡು ಹೋಗುವುದು ಉತ್ತಮ. ಜತೆಗೆ ನೀವು ಹಾಕಿಕೊಂಡ ಬಟ್ಟೆ ನಿಮಗೆ ಕಂಫರ್ಟ್ ಆಗಿರಬೇಕು. ನಿಮ್ಮ ವೇಷ-ಭೂಷಣ ಬೇರೆಯವರಿಗೆ ಇರಿಸುಮುರಿಸು ತರಬಾರದು. ಸಾಧ್ಯವಾದಷ್ಟು ಇಸ್ತ್ರಿ ಮಾಡಿದ ಬಟ್ಟೆಗಳನ್ನೇ ಧರಿಸಿ.
- ಮಾತಿನ ಬಗ್ಗೆಯೂ ಗಮನ ಕೊಡಬೇಕು. ಆಲೋಚನೆ ಮಾಡಿ ಮಾತನಾಡಿ. ಎಲ್ಲರ ಮಾತುಗಳೂ ಸಣ್ಣಗೆ ಕೇಳುತ್ತಿದ್ದರೆ, ನೀವೊಬ್ಬರು ದೊಡ್ಡ ಸ್ವರದಲ್ಲಿ ಮಾತನಾಡುವುದು ಆ ಸನ್ನಿವೇಶಕ್ಕೆ ಒಳ್ಳೆಯದಲ್ಲ. ನಿಮಗೆ ಎಲ್ಲರನ್ನೂ ಸೆಳೆಯುವ ತವಕ ಇರಬಹುದು. ನಿಮ್ಮನ್ನು ನೀವು ಜಾಸ್ತಿ ಹೊಗಳಿಕೊಂಡರೆಂದರೆ ಮುಗಿಯಿತು. ನೀವು ಎಂಥವರು ಎಂದು ಉಳಿದವರು ಲೆಕ್ಕ ಹಾಕಿ ಬಿಡುತ್ತಾರೆ. ಹೀಗಾಗಿ ಮಾತು ಮಿತವಾಗಿರಲಿ.
- ಅದು ಯಾವುದೇ ಪಾರ್ಟಿ ಇರಲಿ. ನೀವು ಏನನ್ನೇ ಕುಡಿಯಿರಿ. ಅಂದರೆ ಮದ್ಯವಾದರೂ ಸೈ, ಜ್ಯೂಸ್ ಆದರೂ ಸೈ. ಬಿಟ್ಟಿ ಸಿಕ್ಕಿದೆ ಎಂದು ಕುಡಿಯುತ್ತಲೇ ಇರಬೇಡಿ.
- ಸಮಯಪ್ರಜ್ಞೆ ಎಂಬುದು ತೀರಾ ಮುಖ್ಯ. ಹಾಗಂತ ನಿಗದಿತ ಸಮಯಕ್ಕಿಂತ ಮುಂಚೆ ಹೋಗಿ ಕುಳಿತುಕೊಳ್ಳುವುದು ಸರಿಯಲ್ಲ. ತಡವಾಗಿಯೂ ಹೋಗಕೂಡದು. ಸರಿಯಾದ ಸಮಯಕ್ಕೆ ಹೋದರೆ ಸಾಕು.
- ಕಾರ್ಯಕ್ರಮಕ್ಕೆ ನಿಮ್ಮನ್ನು ಮಾತ್ರ ಕರೆದಿದ್ದಾರೋ? ಹಾಗಾದರೆ ನೀವು ಮಾತ್ರ ಹೋಗಿ. ಅದು ಬಿಟ್ಟು ನಿಮ್ಮನ್ನು ಕರೆದವರಿಗೆ ಪರಿಚಯವಿಲ್ಲದ ನಿಮ್ಮ ಸ್ನೇಹಿತರನ್ನು, ನೆಂಟರನ್ನು ಕರೆದುಕೊಂಡು ಹೋಗಬೇಡಿ. ಇದರಿಂದ ನಿಮ್ಮನ್ನು ಕರೆದವರಿಗೆ ಹೊರೆಯೆಂದಲ್ಲ. ಅವರ ಮನಸ್ಸಿನಲ್ಲಿ ನೀವು ಚಿಕ್ಕವರಾಗುತ್ತೀರಿ ಅಷ್ಟೆ.
- ಮೂಡ್ ಬಗ್ಗೆ ಜಾಸ್ತಿ ಗಮನ ಕೊಡಬೇಡಿ. ಅದು ಹೇಗಿದ್ದರೂ ಕಾರ್ಯಕ್ರಮಕ್ಕೆ ನೀವು ಹೋಗಿದ್ದೀರಿ ಎಂದರೆ ಅಲ್ಲಿದ್ದವರೊಂದಿಗೆ ಚೆನ್ನಾಗಿ ಬೆರೆಯಬೇಕು. ನೀವು ಪ್ರತ್ಯೇಕವಾಗಿರಬಾರದು. ಎಲ್ಲರ ಜತೆ ಸ್ನೇಹದಿಂದ ವರ್ತಿಸಿ. ಜತೆಗೆ ನಿಮ್ಮ ಮಾತಿಗೆ ಹೆಚ್ಚು ಬೆಲೆ ಕೊಡದವರ ಹತ್ತಿರ ಮಾತನಾಡಬೇಡಿ. ನಿಮಗೆ ಆ ರೀತಿಯ ಸೂಚನೆ ಸಿಕ್ಕಲ್ಲಿ ಅಂಥವರನ್ನು ಮಾತನಾಡಿಸಬೇಡಿ. ಅವರ ಅಹಂ ಅವರ ಹತ್ತಿರ ಇರುತ್ತದೆ.
- ಊಟಕ್ಕೆ ಹೋದಾಗಲೂ ಅಷ್ಟೆ. ತಟ್ಟೆ ತುಂಬಾ ಊಟ ಬಡಿಸಿಕೊಳ್ಳಬೇಡಿ. ಸ್ವಲ್ಪ ಸ್ವಲ್ಪವೇ ಹಾಕಿಸಿಕೊಳ್ಳಿ. ನೋಡಿದವರಿಗೆ ನೀವು ತಿನ್ನುವುದಕ್ಕೇ ಇಲ್ಲಿಗೆ ಬಂದಿರುವಂತೆ ಅನ್ನಿಸಬಾರದು. ಇದೇನು ನಿಮ್ಮ ಕೊನೆ ಊಟ ಅಲ್ಲವಲ್ಲ.
- ಅಲ್ಲಿಂದ ಹೊರಡುವಾಗ ಒಂದು ಧನ್ಯವಾದ ಹೇಳುವುದನ್ನು ಮರೆಯಬೇಡಿ. ಜತೆಗೆ ಕಾರ್ಯಕ್ರಮ ಏರ್ಪಡಿಸುವಲ್ಲಿ ಅವರ ಶ್ರಮವನ್ನು ಹೊಗಳಿ ಬನ್ನಿ. ನಿಮಗೆ ಅಲ್ಲಿ ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹಾಗೂ ಅಲ್ಲಿ ಸೇರಿದ್ದವರಲ್ಲಿಯೂ ಹೇಳಬೇಡಿ. ಸುಮ್ಮನೆ ಬಂದುಬಿಡಿ. ದೂರುವುದು ಸುಲಭ. ಆದರೆ ಜವಾಬ್ದಾರಿ ಹೊತ್ತು ನಿರ್ವಹಿಸುವುದು ಅಷ್ಟೇ ಕಷ್ಟ.
- ಶ್ರೀನಿವಾಸ್ ಎ. ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


